ಮಂಗಳವಾರ, ಸೆಪ್ಟೆಂಬರ್ 21, 2021
21 °C
ಅಧಿಕಾರಿಗಳಿಗೆ ಶಾಸಕ ವೆಂಕಟರಮಣಪ್ಪ ಸೂಚನೆ

ಪಾವಗಡ: ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಪರಿಶಿಷ್ಟ ಜಾತಿ, ಪಂಗಡದವರ ಸಮಸ್ಯೆಗಳನ್ನು ಪರಿಹರಿಸುವತ್ತ ಅಧಿಕಾರಿಗಳು ಒತ್ತು ನೀಡಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪಂಗಡದವರು ನೀಡಿದ ದೂರುಗಳನ್ನು ಯಾವುದೇ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಬಾರದು. ನ್ಯಾಯ ಸಿಗುತ್ತಿಲ್ಲ ಎಂಬ ಭಾವನೆ ಅವರಲ್ಲಿ ಬರಬಾರದು. ತಕ್ಷಣ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ಬಗೆಹರಿಸಬೇಕು. ಒಣ ಚರ್ಚೆಯಿಂದ ಪ್ರಯೋಜನವಿಲ್ಲ ಎಂದು ಮುಖಂಡ ಮಂಗಳವಾಡ ಹನುಮಂತರಾಯ ಆರೋಪಿಸಿದರು.

ಕೋವಿಡ್ ಹಿನ್ನೆಲೆ ಕಳೆದ ವರ್ಷದಿಂದ ಸಭೆ ನಡೆದಿರಲಿಲ್ಲ. ಹಿಂದಿನ ಸಭೆಯಲ್ಲಿ ನೀಡಿದ ದೂರಗಳ ಬಗ್ಗೆ ಅನುಪಾಲನ ವರದಿಯೂ ಸಂತೃಪ್ತಿ ತರವಂತಿಲ್ಲ. ಅನೇಕ ಸಮಸ್ಯೆಗಳು ನ್ಯಾಯಾಲಯದಲ್ಲಿವೆ. ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ಮುಖಂಡರು ಆರೋಪಿಸಿದರು.

‘ಹರಿಜನ’ ಪದ ಬಳಕೆಯನ್ನು ಕೈಬಿಡಬೇಕು ಎಂದು ಸರ್ಕಾರ ಅದೇಶ ನೀಡಿದ್ದರೂ ಈ ಪದವನ್ನು ಬಳಸುತ್ತಿರುವುದು ಸರಿಯಲ್ಲ. ಈ ಕೂಡಲೇ ಪದ ಬಳಕೆ ನಿಲ್ಲಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಜೆಎಸ್ ನಾರಾಯಣಪ್ಪ ಒತ್ತಾಯಿಸಿದರು.

ಕೆಲವರು ಪರಿಶಿಷ್ಟರ ಸ್ಥಳವನ್ನು ಅತಿಕ್ರಮಿಸಿದ್ದಾರೆ. ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಸ್ಥಳವನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ, ಪಂಗಡದ ಅರ್ಹರಿಗೆ ಹಂಚಬೇಕು ಎಂದು ಪ್ರಮುಖರು ಒತ್ತಾಯಿಸಿದರು.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಪರಿಶಿಷ್ಟರ ಕಾಲೊನಿ ಸಮೀಪದಲ್ಲಿ ಹೆಚ್ಚಿನ ಅಕ್ರಮ ಮದ್ಯ ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ ಎಂದು ಶೇಷಾನಂದನ್ ಸಭೆಯಲ್ಲಿ ದೂರಿದರು.

ತಹಶೀಲ್ದಾರ್ ಕೆ.ಅರ್ ನಾಗರಾಜ್, ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಸಹಾಯಕ ನಿರ್ದೇಶಕ ಶ್ರೀನಿವಾಸ್, ಪೊಲೀಸ್‌ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ್, ವೃತ್ತ ನಿರೀಕ್ಷಕ ಕಾಂತರೆಡ್ಡಿ, ಅಬಕಾರಿ ಇನ್‌ಸ್ಪೆಕ್ಟರ್ ಶಂಕರ್, ಡಿಜೆಎಸ್ ನಾರಾಯಣಪ್ಪ, ಉಗ್ರಪ್ಪ, ವೆಂಕಟರಮಣಪ್ಪ, ಹನುಮಂತರಾಯ, ಕಡಪಲಕೆರೆ ಹನುಮಂತರಾಯ, ಕೃಷ್ಣಮೂರ್ತಿ, ರಮೇಶ್, ಸಿ.ಕೆ. ತಿಪ್ಪೇಸ್ವಾಮಿ, ಪೆದ್ದೆಣ್ಣ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.