ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಎಂ ಹಾಸ್ಟೆಲ್‌ಗಳಿಗೆ ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ!

ಪೂರೈಕೆ ವಿಳಂಬದಿಂದ ಹಾಸ್ಟೆಲ್‌ಗಳಲ್ಲಿ ಅಕ್ಕಿ ಕೊರತೆ
Published 18 ಫೆಬ್ರುವರಿ 2024, 21:09 IST
Last Updated 18 ಫೆಬ್ರುವರಿ 2024, 21:09 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಕೊರತೆ ಎದುರಾದ ಕಾರಣ ಸಿದ್ಧಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆಯಲಾಗಿದೆ. 

ತುಮಕೂರು ತಾಲ್ಲೂಕಿನ ಒಟ್ಟು 17 ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ಖಾಲಿಯಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ವಸತಿ ನಿಲಯ ಪಾಲಕರು ವಿದ್ಯಾರ್ಥಿಗಳ ಊಟಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ 120 ಕ್ವಿಂಟಲ್‌ ಅಕ್ಕಿಯನ್ನು ಸಿದ್ಧಗಂಗಾ ಮಠದಿಂದ ಸಾಲವಾಗಿ ಪಡೆದಿದ್ದಾರೆ.

ದಿಬ್ಬೂರು ಮತ್ತು ಗಾರ್ಡನ್‌ ರಸ್ತೆಯಲ್ಲಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ, ರೈಲು ನಿಲ್ದಾಣದ ರಸ್ತೆಯಲ್ಲಿರುವ ಎರಡು ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯಗಳು ಸೇರಿದಂತೆ 17 ವಿದ್ಯಾರ್ಥಿ ನಿಲಯಗಳಲ್ಲಿ ಸಿದ್ಧಗಂಗಾ ಮಠದಿಂದ ಸಾಲವಾಗಿ ಪಡೆದಿರುವ ಅಕ್ಕಿಯನ್ನು ಉಣಬಡಿಸಲಾಗುತ್ತಿದೆ. ತಾಲ್ಲೂಕಿನ ಹಾಸ್ಟೆಲ್‌ಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. 

ಆಹಾರ ನಿಗಮದಿಂದ ಜಿಲ್ಲೆಗೆ ಅಕ್ಟೋಬರ್‌ನಲ್ಲಿ ಬರಬೇಕಾದ ಅಕ್ಕಿ ಜನವರಿಯಲ್ಲಿ ಬಂದಿದೆ. ಅದು ಇನ್ನೂ ತುಮಕೂರು ತಾಲ್ಲೂಕಿನ ವಿದ್ಯಾರ್ಥಿ ನಿಲಯಗಳಿಗೆ ವಿತರಣೆಯಾಗಿಲ್ಲ. ತುಮಕೂರು ತಾಲ್ಲೂಕು ಹೊರತು ಪಡಿಸಿ ಜಿಲ್ಲೆಯ ಉಳಿದ ಎಲ್ಲಾ ತಾಲ್ಲೂಕುಗಳ ಹಾಸ್ಟೆಲ್‌ಗಳಿಗೆ ಅಕ್ಕಿ ಪೂರೈಕೆಯಾಗಿದೆ.

ತಾಲ್ಲೂಕಿನ ಹಾಸ್ಟೆಲ್‌ಗಳಿಗೆ ಅಕ್ಟೋಬರ್‌ನಿಂದ ಮಾರ್ಚ್‌ ಅವಧಿಗೆ ಬೇಕಾದ ಅಕ್ಕಿಯನ್ನು ಇಲಾಖೆಯ ಅಧಿಕಾರಿಗಳು ಒಮ್ಮೆಲೇ ಎತ್ತುವಳಿ ಮಾಡುತ್ತಿದ್ದರು. ಫೆಬ್ರುವರಿ ಅರ್ಧ ತಿಂಗಳು ಕಳೆದರೂ ಇನ್ನೂ ಅಕ್ಕಿ ಎತ್ತುವಳಿಯಾಗಿಲ್ಲ. ಇದರಿಂದ ಹಾಸ್ಟೆಲ್‌ಗಳಲ್ಲಿ ಅಕ್ಕಿ ಕೊರತೆಯಾಗಿದೆ.  

‘ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಅಕ್ಕಿ ಎತ್ತುವಳಿ ಮಾಡಲಾಗುತ್ತದೆ. ಎತ್ತುವಳಿ ಮಾಡುವುದು ತಡವಾಗಿದ್ದರಿಂದ ತಾಲ್ಲೂಕು ಅಧಿಕಾರಿಗಳು ಮರು ಹೊಂದಾಣಿಕೆ ಆಧಾರದ ಮೇಲೆ ಅಕ್ಕಿ ಸಾಲ ಪಡೆದಿದ್ದಾರೆ. ತಾಲ್ಲೂಕಿನ ಎಲ್ಲ ಹಾಸ್ಟೆಲ್‌ಗಳಿಗೆ ನಾಳೆಯೇ ಅಕ್ಕಿ ಪೂರೈಕೆಯಾಗಲಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT