ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕಶಿಲಾ ಬೆಟ್ಟಕ್ಕೆ ರೋಪ್‌ ವೇ: ವಾರದೊಳಗೆ ಸರ್ವೆ

Published 11 ಫೆಬ್ರುವರಿ 2024, 13:20 IST
Last Updated 11 ಫೆಬ್ರುವರಿ 2024, 13:20 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ನಡೆದ ‘ಭವಿಷ್ಯದಲ್ಲಿ ಮಧುಗಿರಿ’ ಕಾರ್ಯಕ್ರಮದಲ್ಲಿ ಸಾಹಿತಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಸಂಘ- ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿ ಸಲಹೆ ನೀಡಿದರು.

ಪಟ್ಟಣದ ಗೌರಿಬಿದನೂರು ವೃತ್ತದಿಂದ ಪಾವಗಡ ರಸ್ತೆವರೆಗೂ ದ್ವಿಪಥ ನಿರ್ಮಾಣ, ತುಮಕೂರು ಗೇಟ್‌ನಿಂದ - ಡೂಂ ಲೈಟ್ ವೃತ್ತದವರೆಗೆ ಸಿಸಿ ರಸ್ತೆ, ತುಮಕೂರು ರಸ್ತೆ ಹೊರ ಹೊಲಯದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಒತ್ತು, ಏಕಾಶಿಲಾ ಬೆಟ್ಟದ ತಪ್ಪಲಿನಲ್ಲಿ ನಾಲ್ಕು ಎಕರೆ ಸುಸಜ್ಜಿತ ಪಾರ್ಕ್, ಪಟ್ಟಣದ 23 ವಾರ್ಡ್‌ಗಳಲ್ಲಿ ಗುಣಮಟ್ಟದ ರಸ್ತೆ, ಮಲ್ಲೇಶ್ವರ, ವೆಂಕಟೇಶ್ವರ ದೇವಸ್ಥಾನದ ನಡುವೆ ಕಮಾನು ಅಳವಡಿಕೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಪುರಸಭೆ ಆವರಣದಲ್ಲಿ ಡಿಜಿಟಲ್ ಲೈಬ್ರರಿ, ಪಿಜಿ ಕೇಂದ್ರ, ಪದವಿ ಮಹಿಳಾ ಕಾಲೇಜು, ಪಿಯು ಬೋರ್ಡ್ ಸ್ಥಾಪನೆ, ವಿದ್ಯುತ್ ಚಿಥಾಗಾರ ಆರಂಭ, ತಾಯಿ - ಮಗು ಆಸ್ಪತ್ರೆ, ಹೈಟೆಕ್ ಆಸ್ಪತ್ರೆ ಸೇರಿದಂತೆ ಸಾರ್ವಜನಿಕರಿಂದ ಸಲಹೆ, ಬೇಡಿಕೆಗಳ ಮಹಾಪೂರವೇ ಹರಿದು ಬಂತು.

ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಮಧುಗಿರಿ ಏಕಾಶಿಲಾ ಬೆಟ್ಟಕ್ಕೆ ರೋಪ್‌ ವೇ ಅಳವಡಿಕೆಗೆ ವಾರದೊಳಗೆ ಸರ್ವೆ ಪ್ರಾರಂಭವಾಗಲಿದೆ. ಬಜೆಟ್‌ನಲ್ಲಿ ಏಕಾಶಿಲಾ ಬೆಟ್ಟಕ್ಕೆ ರೋಪ್‌ ವೇ ಘೋಷಣೆಯಾಗುವ ಸಾಧ್ಯತೆ ಇದೆ ಎಂದರು.

ಮುಂದಿನ ನಾಲ್ಕು ವರ್ಷದೊಳಗಾಗಿ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು. ಕೊಡಿಗೇನಹಳ್ಳಿ ಮತ್ತು ಐ.ಡಿ.ಹಳ್ಳಿ ಹೋಬಳಿ ನಡುವೆ ಗಾರ್ಮೆಂಟ್ಸ್ ಪ್ರಾರಂಭಿಸಲು ಈಗಾಗಲೇ ಸ್ಥಳ ಗುರುತಿಸಲಾಗಿದೆ. ಮುಂದಿನ ವರ್ಷದಲ್ಲಿ ಗಾರ್ಮೆಂಟ್ಸ್‌ ಪ್ರಾರಂಭಿಸಲಾಗುವುದು. ಈ ವರ್ಷದಲ್ಲಿಯೇ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳ, ಸಾಲು ಮರದ ತಿಮ್ಮಕ್ಕ ಉದ್ಯಾವನದ ಬಳಿ ಎಂಭತ್ತು ಅಡಿ ಉದ್ದದ ಧ್ವಜ ಸ್ತಂಭ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಅಭಿವೃದ್ಧಿಗೆ ₹25 ಕೋಟಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ₹5 ಕೋಟಿ ಮಂಜೂರಾಗಿದ್ದು, ನಾಗರಿಕರು ನೀಡಿರುವ ಸಲಹೆಯಂತೆ ಪಟ್ಟಣದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ರಾಜೀವ್ ಗಾಂಧಿ ಕ್ರೀಡಾಂಗಣವನ್ನು ಜಿಲ್ಲಾ ಕ್ರೀಡಾಂಗಣದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಸುಂದರ ಮಧುಗಿರಿ ನಿರ್ಮಾಣಕ್ಕೆ ಪುರಸಭೆ ಸಿಬ್ಬಂದಿ ಜೊತೆ ಜನರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡಯ್ಯ, ಡಿ.ಜಿ. ಶಂಕರ್ ನಾರಾಯಣ್ ಶೆಟ್ಟಿ, ಮಹಮದ್ ಅಯೂಬ್, ಕೆ.ಪ್ರಕಾಶ್, ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್ ಬಾಬು, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಂ.ಜಿ. ಶ್ರೀನಿವಾಸ ಮೂರ್ತಿ, ತುಂಗೋಟಿ ರಾಮಣ್ಣ, ಸಾಹಿತಿ ಮ.ಲ.ನ ಮೂರ್ತಿ, ತಾ.ಪಂ. ಇಒ ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT