ಶನಿವಾರ, ಅಕ್ಟೋಬರ್ 16, 2021
29 °C

ತುಮಕೂರು: ನ್ಯಾ. ಸದಾಶಿವ ವರದಿ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು. ಸಮಿತಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸದಾಶಿವ ಆಯೋಗದ ವರದಿ ಜಾರಿಮಾಡದಂತೆ ಆಗ್ರಹಿಸಿ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯದವರು ಪ್ರತಿಭಟನೆಗೆ ಇಳಿದಿದ್ದಾರೆ. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ಆದರೆ ವರದಿ ಜಾರಿಗೊಳಿಸದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಉಪಜಾತಿಗಳನ್ನು ಹೋರಾಟಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ‘ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗಗಳು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸದಾಶಿವ ಆಯೋಗದ ವರದಿ ಜಾರಿಯಾದರೆ ಎಲ್ಲರಿಗೂ ಮೀಸಲಾತಿ ಸೌಲಭ್ಯಗಳು ಸಿಗುತ್ತವೆ. ಅನಗತ್ಯವಾಗಿ ಉಪಜಾತಿಗಳ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಆಟವಾಗುತ್ತಿವೆ’ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಿರುವ ಭೋವಿ, ಲಂಬಾಣಿ ಜನಾಂಗದವರಿಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.

1970ರಲ್ಲಿ ಎಲ್.ಜಿ.ಹಾವನೂರು ವರದಿಯಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿದ್ದ ವಡ್ಡರು, ಲಂಬಾಣಿಗಳಿಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅವಕಾಶ ಕೊಟ್ಟಾಗ ನಾವು ಯಾವುದೇ ವಿರೋಧ ಮಾಡಲಿಲ್ಲ ಎಂದು ನೆನಪಿಸಿದರು.

ನಗರದಲ್ಲಿ ಡಾ.ಬಾಬು ಜಗಜೀವನ ರಾಮ್ ಭವನ ನಿರ್ಮಾಣವಾಗಬೇಕು. ಪಾವಗಡದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪಟ್ಟಣದಿಂದ ಐದಾರು ಕಿ.ಮೀ ದೂರದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಬಾರದು. ಕಾಲೇಜು ಸಮೀಪವೇ ನಿರ್ಮಿಸಬೇಕು. ಗ್ರಾಮ ಪಂಚಾಯಿತಿಗಳು ಪ್ರರಿಶಿಷ್ಟರ ಅನುದಾನ ಬಳಕೆಗೆ ಪ್ರತ್ಯೇಕವಾಗಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಶೇ 25ರಷ್ಟು ಹಣವನ್ನು ಮೀಸಲಿಡಬೇಕು. ಮಧುಗಿರಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇರುವ 278 ಅರ್ಜಿಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ಜಿಲ್ಲೆಯ ಕಲಾವಿದರಿಗೆ ಮಾಸಾಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ದೊಡ್ಡೇರಿ ಕಣಿಮಯ್ಯ, ಸ್ವಾಮಿ, ಮರಳೂರು ಕೃಷ್ಣಮೂರ್ತಿ, ನರಸಯ್ಯ, ಯಲ್ಲಾಪುರ ಗಾಂಧೀಜಿ, ಲಕ್ಷ್ಮಿಕಾಂತ್, ಹೆಗ್ಗೆರೆ ಶ್ರೀನಿವಾಸ್, ನಾಗರಾಜ ಗಜಮಾರನಹಳ್ಳಿ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.