ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೊಂದು ಸಸಿ ‘ವೃಕ್ಷಾಭಿಯಾನ’

Last Updated 9 ಜುಲೈ 2021, 4:12 IST
ಅಕ್ಷರ ಗಾತ್ರ

ತುಮಕೂರು: ‘ಕೊಪ್ಪಲ್ ಸಿದ್ಧವೀರಯ್ಯ ಮತ್ತು ಪಾರ್ವತಮ್ಮನವರ ಸ್ಮರಣಾರ್ಥ ಪ್ರತಿಷ್ಠಾನ’ದಿಂದ ‘ಬ್ಯೂಗಲ್ ಟ್ರಸ್ಟ್’ ಸಹಯೋಗದೊಂದಿಗೆ ‘ವೃಕ್ಷಾಭಿಯಾನ– ಮಗುವಿಗೊಂದು ಸಸಿ’ ಕಾರ್ಯ ಕ್ರಮಕ್ಕೆಸಿದ್ಧಗಂಗಾ ಮಠದ ಆವರಣ ದಲ್ಲಿ ಬುಧವಾರ ರಾತ್ರಿ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು.‌

ಇದೊಂದು ಹೊಸ ಪ್ರಯತ್ನ. ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ಪೋಷಕರಿಗೆ ಒಂದು ಗಿಡ ನೀಡಲಾಗುತ್ತದೆ. ಮಗುವಿನ ತಂದೆ– ತಾಯಿ, ಆ ಮಗುವಿನ ಹೆಸರಿನಲ್ಲಿ ಗಿಡ ನೆಟ್ಟು ಬೆಳೆಸಲಿದ್ದಾರೆ.

ಆರಂಭಿಕವಾಗಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಉಚಿತವಾಗಿ ಸಸಿ ನೀಡಲಾಗುತ್ತದೆ. ಈ ಸಸಿ ತೆಗೆದುಕೊಂಡು ಹೋಗುವ ಪೋಷಕರು ನೆಟ್ಟು ಬೆಳೆಸುತ್ತಾರೆ. ಮಗು ಪೋಷಣೆಯಂತೆ ಸಸಿಯನ್ನೂ ಪೋಷಣೆ ಮಾಡಲಿದ್ದಾರೆ. ಸಸಿ ಹಾಗೂ ಮಗುವಿನೊಡನೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಇದರಿಂದಾಗಿ ವರ್ಷಕ್ಕೆ ಸಾವಿರಾರು ಮರಗಳನ್ನು ಬೆಳೆಸಲು ಸಾಧ್ಯವಾಗಲಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ವಾಮೀಜಿ, ‘ಹುಟ್ಟಿದ ಮಗುವಿನ ಜತೆಯಲ್ಲೇ ಗಿಡ ಬೆಳೆಸುವುದರಿಂದ ಉತ್ತಮ ಪರಿಸರ, ವಾತಾವರಣ ಸಿಗಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು. ಮಗುವಿನ ಪೋಷಕರಿಗೆ ಸಸಿಗಳನ್ನು ಕೊಡುಗೆಯಾಗಿ ನೀಡಿ ಅಭಿಯಾನ ಆರಂಭಿಸಿರುವ ಕೊಪ್ಪಲ್ ನಾಗರಾಜ್ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಅರಳಿ, ಬೇವಿನ ಮರ ಪೂಜಿಸುತ್ತಾರೆ. ಮೂಢನಂಬಿಕೆ ಇದ್ದರೂ ಪೂಜಿಸಿ ಗಿಡ ಕಾಪಾಡುವುದೇ ಮುಖ್ಯವಾಗಿದೆ. ಇಂದು ಪ್ರಾಣವಾಯು ಅತಿ ಜರೂರಾಗಿ ಬೇಕಾಗಿದೆ. ಕೋವಿಡ್ ಸಮಯದಲ್ಲಿಆಮ್ಲಜನಕಕ್ಕೆ ಎಷ್ಟುಕಷ್ಟ ಪಡಬೇಕಾಯಿತು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ. ಪ್ರತಿಯೊಬ್ಬರೂ ವೃಕ್ಷ ಸಂಪತ್ತು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು, ‘ವೃಕ್ಷ ಸಂಪತ್ತು ಬೆಳೆಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಪರಿಸರ ನಾಶದಿಂದ ದೆಹಲಿಯಲ್ಲಿ ಆಮ್ಲಜನಕ ಸಿಲಿಂಡರ್ ಪಕ್ಕದಲ್ಲಿ ಇಟ್ಟುಕೊಂಡು ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದೆ. ಪ್ರಪಂಚದಲ್ಲೇ ದೆಹಲಿ ಕಲುಷಿತ ನಗರ ಎಂಬ ಕುಖ್ಯಾತಿಗಳಿಸಿದೆ. ಇದನ್ನು ಸರಿಪಡಿಸಲು ವೃಕ್ಷ ಸಂಪತ್ತು ಹೆಚ್ಚಿಸಬೇಕು’ ಎಂದು ಸಲಹೆ ಮಾಡಿದರು.

ಪ್ರತಿಷ್ಠಾನದ ಮುಖ್ಯಸ್ಥ ಕೊಪ್ಪಲ್ ನಾಗರಾಜ್, 2012ರಲ್ಲಿ ತಂದೆ– ತಾಯಿ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಿಸಲಾಗಿದೆ. ಪರಿಸರದ ಮೇಲೆ ಭಾರಿ ಪ್ರಮಾಣದ ಪ್ರಹಾರ ಆಗುತ್ತಿದೆ. ವಾತಾವರಣ ಕಲುಷಿತಗೊಳ್ಳುತ್ತಿದೆ. ಪ್ರಕೃತಿಯೇ ನಮ್ಮ ಜೀವಾಳವಾಗಿದೆ. ಈ ನಿಟ್ಟಿನಲ್ಲಿ ವೃಕ್ಷಾಭಿಯಾನ ಆರಂಭಿಸಿದ್ದು, ಜಿಲ್ಲಾ ಆಸ್ಪತ್ರೆ, ಸಿದ್ಧರಾಮಣ್ಣ ಆಸ್ಪತ್ರೆ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ‘ಮಗುವಿಗೊಂದು ಸಸಿ’ಯನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ,ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‍ಬಾಬು, ಡಾ.ಪರಮೇಶ್, ಸಿದ್ಧರಾಮಣ್ಣ ಆಸ್ಪತ್ರೆ ವೈದ್ಯ ಡಾ.ಕೆ.ಎಸ್.ರಾಜಶೇಖರ್, ಸಾಗರನಹಳ್ಳಿ ಪ್ರಭು, ಬ್ಯೂಗಲ್ ಟ್ರಸ್ಟ್ ಅಧ್ಯಕ್ಷ ಯಧು ಎನ್.ರಾಮು, ಕಾರ್ಯದರ್ಶಿ ಮುರಳಿ, ಟ್ರಸ್ಟಿ ಶ್ಯಾಮಸ್ಕಂದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT