ತುಮಕೂರು: ‘ತಂದೆ ಇಲ್ಲದ ಮಕ್ಕಳಿಗೆ ವರ್ಷಕ್ಕೆ ₹24 ಸಾವಿರ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಸ್ಪಷ್ಟನೆ ನೀಡಿದ್ದಾರೆ.
‘ಮಕ್ಕಳ ಖಾತೆಗೆ ₹24 ಸಾವಿರ ವಿದ್ಯಾರ್ಥಿ ವೇತನ ನೀಡುವ ವಿಚಾರ ಜನಸಾಮಾನ್ಯರಿಗೆ ತಿಳಿದೇ ಇಲ್ಲ. ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಅರ್ಜಿ ಸಲ್ಲಿಸಲು ತಿಳಿಸಿ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಹೆಸರಿನಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮಾಹಿತಿ ಗಮನಿಸಿದ ನೂರಾರು ಜನರು ಪ್ರತಿನಿತ್ಯ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದು ಮಾಹಿತಿ ಕೇಳುತ್ತಿದ್ದಾರೆ. ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ಸಂದೇಶವನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದು 10–15 ಅರ್ಜಿಗಳನ್ನು ನೀಡುವಂತೆ ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಸುಳ್ಳು ಸುದ್ದಿಗೆ ಮರುಳಾಗದೆ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೊದಲನೇ ಮಹಡಿ, ಮಹಾತ್ಮ ಗಾಂಧಿ ಕ್ರೀಡಾಂಗಣ, ಕುವೆಂಪು ನಗರ, ತುಮಕೂರು ಅಥವಾ ದೂರವಾಣಿ 0816-2956699 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.