ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕಳೆಗುಂದಿದೆ ಕ್ರೀಡೆಯ ಕಲರವ

ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ಈ ವರ್ಷವೂ ಕೈ ಸೇರಲ್ಲ
Last Updated 13 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ತುಮಕೂರು: ಕ್ರೀಡಾಂಗಣಗಳು ಯುವಕರ, ಕ್ರೀಡಾಪಟುಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ. ಆದರೆ, ತುಮಕೂರು ನಗರದಲ್ಲಿ ಪ್ರಸ್ತುತ ಒಂದು ಕ್ರೀಡಾಂಗಣವೂ ಇಲ್ಲದ ಕಾರಣ ಇಲ್ಲಿ ಕ್ರೀಡಾ ಕ್ಷೇತ್ರ ಸೊರಗುತ್ತಿದೆ.

ನಗರದಲ್ಲಿ ಇರುವುದು ಮಹಾತ್ಮ ಗಾಂಧಿ ಕ್ರೀಡಾಂಗಣ ಮಾತ್ರ. ಇದನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಈ ಕ್ರೀಡಾಂಗಣವೂಸದ್ಯಕ್ಕೆ ಕ್ರೀಡಾಪಟುಗಳ ಕೈ ಸೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್‌ ವೇಳೆಗೆಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಾಮಗಾರಿಗಳು ಮುಗಿದು ಬಳಕೆಗೆ ಮುಕ್ತ ಆಗಬೇಕಿತ್ತು. ಫೆಬ್ರುವರಿಯಲ್ಲಿ ತುಮಕೂರಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಮಹಾತ್ಮ ಗಾಂಧಿ ಕ್ರೀಡಾಂಗಣದ ನಿರ್ಮಾಣ ಕಾಮಗಾರಿ ಪರಿಶೀಲಿಸುವಾಗ, ‘ಈ ಕ್ರೀಡಾಂಗಣದ ಕೆಲಸ ಯಾವಾಗ ಮುಗಿಯುತ್ತದೆ’ ಎಂದು ಕೇಳಿದ್ದರು.

ಆಗ ಗುತ್ತಿಗೆದಾರರು ‘ಸೆಪ್ಟೆಂಬರ್‌ನಲ್ಲಿ ಮುಗಿಯುತ್ತದೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಗಮನಿಸಿದರೆ ಈ ವರ್ಷವೂ ಕ್ರೀಡಾಂಗಣ ಕೈ ಸೇರುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಏಕೆ ತಡ: ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆದಾರರು ಹೊರ ರಾಜ್ಯಗಳಿಂದ ನೂರಾರು ಕಾರ್ಮಿಕರನ್ನು ಕರೆ ತಂದಿದ್ದರು. ಆದರೆ, ನಂತರ ಕೋವಿಡ್‌–19 ನಿಂದಾಗಿ ಲಾಕ್‌ಡೌನ್‌ ಘೋಷಿಸಿದ ಕಾರಣ 70 ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಿದರು. ಇಲ್ಲೆ ಉಳಿದ 40 ರಷ್ಟು ಕಾರ್ಮಿಕರು ಕೆಲಸ ಮಾಡಿದರೂ ಮಂದಗತಿಯಲ್ಲಿ ಕಾಮಗಾರಿ ನಡೆಯಿತು. ಜತೆಗೆ ಮಳೆಗಾಲವು ಆರಂಭವಾದ ಕಾರಣ ಕಾಮಗಾರಿ ಮತ್ತಷ್ಟು ತಡವಾಯಿತು.

600ಕ್ಕೂ ಹೆಚ್ಚು ಮಂದಿ ಭೇಟಿ: ಕ್ರೀಡಾಂಗಣಕ್ಕೆ ಪ್ರತಿ ದಿನ ಕ್ರೀಡಾ ಶಾಲೆಯ 70 ಮಕ್ಕಳು, ಇತರೆ 250 ರಿಂದ 300 ಕ್ರೀಡಾಪಟುಗಳು ಹಾಗೂ ವಾಯುವಿಹಾರ, ವ್ಯಾಯಾಮ ಎಂದು 250ಕ್ಕೂ ಹೆಚ್ಚು ಮಂದಿ ಕ್ರೀಡಾಂಗಣಕ್ಕೆ ಭೇಟಿ ನೀಡುತ್ತಿದ್ದರು. ಇವರೆಲ್ಲರೂ ಇದೀಗ ಕ್ರೀಡಾಂಗಣ ಕಾಮಗಾರಿ ಯಾವಾಗ ಪೂರ್ಣವಾಗುತ್ತದೆ. ಬಳಕೆಗೆ ಮುಕ್ತವಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ.

ಕ್ರೀಡಾಕ್ಷೇತ್ರಕ್ಕೆ ಹಿನ್ನಡೆ: ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ತುಮಕೂರು, ಕ್ರೀಡಾ ಕ್ಷೇತ್ರದಲ್ಲೂ ಪ್ರಭುತ್ವ ಸಾಧಿಸಿದೆ. ಇಲ್ಲಿ ಅಭ್ಯಾಸ ನಡೆಸಿದ ಅನೇಕರು ಇಂದಿಗೂ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಜ್ಯ, ರಾಷ್ಟ್ರ, ವಿಶ್ವದೆಲ್ಲೆಡೆ ಹಾರಿಸುತ್ತಿದ್ದಾರೆ. ಇಂತಹ ನಗರದಲ್ಲಿ ಕ್ರೀಡಾಂಗಣ ಕೊರತೆ ಇರುವುದು, ಇಲ್ಲಿನ ಕ್ರೀಡಾಕ್ಷೇತ್ರಕ್ಕೆ ದೊಡ್ಡಮಟ್ಟದ ಪೆಟ್ಟು ನೀಡಿದೆ.

ಅಲ್ಲಲ್ಲಿ ಕ್ರೀಡಾಂಗಣ ನಿರ್ಮಿಸಿ: ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ, ಕ್ರೀಡೆಗಳು ಮಕ್ಕಳ ಜೀವನದ ಅವಿಭಾಜ್ಯ ಅಂಗ. ನಗರದಲ್ಲಿ ವಾರ್ಡ್‌ವಾರು ಸಣ್ಣ ಕ್ರೀಡಾಂಗಣ ನಿರ್ಮಿಸಬೇಕು. ಇದರಿಂದ ಆ ಭಾಗದ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಆಗುತ್ತದೆ. ಆದರೆ, ಈ ಬಗ್ಗೆ ಇಚ್ಛಾಶಕ್ತಿಯ ಕೊರತೆ ಇದೆ. ಯಾವೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರೀಡಾಂಗಣ ನಿರ್ಮಿಸುವ ಕಡೆಗೆ ಮನಸ್ಸು ಮಾಡುತ್ತಿಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ಸೂಕ್ತ ಕ್ರೀಡಾಂಗಣಗಳು ಇಲ್ಲದ ಕಾರಣ ನಗರದ ಹೊರವಲಯದಲ್ಲಿರುವ ವರ್ತುಲ ರಸ್ತೆಯ ಅಕ್ಕಪಕ್ಕ ಇರುವ ಒಂದಷ್ಟು ಖಾಲಿ ಜಾಗಗಳಲ್ಲಿ ಮಕ್ಕಳು ಕ್ರಿಕೆಟ್‌, ವಾಲಿಬಾಲ್‌ ಹಾಗೂ ಶಟಲ್‌ ಬ್ಯಾಡ್ಮಿಂಟನ್‌ ಆಡುತ್ತಿದ್ದಾರೆ. ಆದರೆ, ಸೀಮಿತ ಜಾಗದಲ್ಲಿ ಆಡುವುದಕ್ಕೂ ವಿಶಾಲವಾದ ಕ್ರೀಡಾಂಗಣದಲ್ಲಿ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಕ್ರೀಡಾಪಟು ವಿಜಯ್.

ಜೂನಿಯರ್ ಕಾಲೇಜು ಆಧಾರ
ಎಂ.ಜಿ ಕ್ರೀಡಾಂಗಣ ಕಾಮಗಾರಿ ನಡೆಯುತ್ತಿರುವುದರಿಂದ ಇದೀಗ ಎಲ್ಲರಿಗೂ ನಗರದ ಹೃದಯ ಭಾಗದಲ್ಲಿರುವ ಜೂನಿಯರ್‌ ಕಾಲೇಜು ಮೈದಾನವೇ ಆಸರೆ ಆಗಿದೆ. ಆದರೆ, ಯಾವುದೇ ಬೃಹತ್‌ ಸಮಾರಂಭ, ರಾಜಕೀಯ ಸಮಾವೇಶಗಳಿರಲಿ ಎಲ್ಲರಿಗೂ ಜೂನಿಯರ್‌ ಕಾಲೇಜು ಮೈದಾನವೇ ಆಸರೆ. ಹಾಗಾಗಿ ಕ್ರೀಡಾಪಟುಗಳು ಇಕ್ಕಟ್ಟಿನಲ್ಲೆ ಕಸರತ್ತು ಮಾಡಬೇಕಾದ ಸ್ಥಿತಿ ಇಲ್ಲಿದೆ. ಇನ್ನೂ ಇದೀಗ ಇಲ್ಲಿಯೂ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕ್ರೀಡಾಪಟುಗಳು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಾ.21ಕ್ಕೆ ಹಸ್ತಾಂತರದ ಭರವಸೆ
ಗುತ್ತಿಗೆದಾರರು ಸೆಪ್ಟೆಂಬರ್‌ನಲ್ಲಿ ನಮಗೆ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಹಸ್ತಾಂತರಿಸಬೇಕಿತ್ತು. ಆದರೆ, ಕೋವಿಡ್‌ ಕಾರಣಕ್ಕಾಗಿ ಕಾಮಗಾರಿ ಮುಕ್ತಾಯವಾಗಿಲ್ಲ. ಕೇಂದ್ರ ಸರ್ಕಾರ ಕಾಮಗಾರಿ ಮುಕ್ತಾಯ ಅವಧಿಯನ್ನು 6 ತಿಂಗಳು ವಿಸ್ತರಿಸಿದೆ. ಗುತ್ತಿಗೆದಾರರು 2021 ಮಾರ್ಚ್‌ 21ಕ್ಕೆ ಕ್ರೀಡಾಂಗಣವನ್ನು ಹಸ್ತಾಂತರಿಸುವ ಭರವಸೆ ನೀಡಿದ್ದಾರೆ.

ಹೊರ ರಾಜ್ಯದ ತಂತ್ರಜ್ಞರನ್ನು ವಿಮಾನದ ಮೂಲಕ ಕರೆಸಿಕೊಂಡು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಗುತ್ತಿಗೆದಾರರು ಕಾಮಗಾರಿಯನ್ನು ಚುರುಕಾಗಿ ನಡೆಸುತ್ತಿರುವುದರಿಂದ ನಮಗೂ ಮಾರ್ಚ್‌ ವೇಳೆಗೆ ಕ್ರೀಡಾಂಗಣ ಕೈ ಸೇರುವ ಆಶಾಭಾವ ಇದೆ ಎಂದು ಅಂತರರಾಷ್ಟ್ರೀಯ ಕಬಡ್ಡಿ ತರಬೇತುದಾರ ಮಹಮ್ಮದ್ ಇಸ್ಮಾಯಿಲ್ ಲತೀಫ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಕ್ಕಳ ಪ್ರಗತಿಗೆ ಅಡ್ಡಿ
ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಇಂದಿಗೂ ಮುಗಿಯದ ಕಾರಣ ಯುವ ಕ್ರೀಡಾಪಟುಗಳ ಪ್ರಗತಿಗೆ ಅಡ್ಡಿ ಆಗಿದೆ. ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸುವಾಗ ಸಾಕಷ್ಟು ತೊಂದರೆ ಆಗುತ್ತಿದೆ. ಎಸ್‌ಐಟಿ ಕ್ರೀಡಾಂಗಣ ಖಾಸಗಿಯಾಗಿರುವುದರಿಂದ ಅಲ್ಲಿ ಹೊರಗಿನ ಕ್ರೀಡಾಪಟುಗಳಿಗೆ ಅವಕಾಶ ಇಲ್ಲ.

ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿಶ್ವವಿದ್ಯಾಲಯ ಕ್ರೀಡಾಂಗಣಕ್ಕೂ ಅವಕಾಶ ಇಲ್ಲ. ಹಾಗಾಗಿ ಮಕ್ಕಳ ಕ್ರೀಡಾ ಪ್ರಗತಿ ಎರಡು ವರ್ಷದಷ್ಟು ಹಿಂದಕ್ಕೆ ಸಾಗಿದೆ. ಸಂಬಂಧಪಟ್ಟವರು ಶೀಘ್ರವೇ ಕ್ರೀಡಾಂಗಣ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಹಿರಿಯ ವಾಲಿಬಾಲ್ ಕ್ರೀಡಾಪಟು ಹಾಗೂ ತರಬೇತುದಾರ ಪ್ರದೀಪ್ ಕುಮಾರ್ ಒತ್ತಾಯಿಸುವರು.

ಕ್ರೀಡೆ ಆಯೋಜನೆಗೆ ತೊಂದರೆ
ಈ ಹಿಂದೆ ತುಮಕೂರಿನಲ್ಲಿ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಸೇರಿದಂತೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕ್ರೀಡಾಂಗಣಗಳ ಕೊರತೆಯಿಂದ ಯಾರೊಬ್ಬರು ಕ್ರೀಡೆಗಳ ಆಯೋಜನೆಗೆ ಮನಸ್ಸು ಮಾಡುತ್ತಿಲ್ಲ. ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕ್ರೀಡಾಂಗಣಗಳನ್ನು ನಿರ್ಮಿಸುವುದು ಅತ್ಯಗತ್ಯ. ಹಾಗಾಗಿ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಯೋಚಿಸಬೇಕು. ಎಂ.ಜಿ ಕ್ರೀಡಾಂಗಣವನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ದೊರಕುವಂತೆ ಮಾಡಬೇಕು ಎಂದು ಕ್ರೀಡಾಪಟು ಸುಕ್ರಿತ್ ಕೋರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT