ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಯ ಕೂಗು: ಶೆಟ್ಟಿಹಳ್ಳಿ ಕೆರೆ ನಿರ್ವಹಣೆಯೇ ಸವಾಲು

ಅಭಿವೃದ್ಧಿ ಕೆಲಸ ಅರ್ಧಂಬರ್ಧ, ಎಚ್ಚೆತ್ತುಕೊಳ್ಳದ ಮಹಾನಗರ ಪಾಲಿಕೆ
Published 4 ಜೂನ್ 2024, 2:18 IST
Last Updated 4 ಜೂನ್ 2024, 2:18 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ರಿಂಗ್‌ ರಸ್ತೆಗೆ ಹೊಂದಿಕೊಂಡಂತೆ ಇರುವ ಶೆಟ್ಟಿಹಳ್ಳಿ ಕೆರೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ರಸ್ತೆಯ ಕಡೆ ಇರುವ ಏರಿಗೆ ತಂತಿ ಬೇಲಿ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

13 ಎಕರೆ ಪ್ರದೇಶದ ಕೆರೆಯು 5.23 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆ ಭಾಗಶಃ ಒತ್ತುವರಿಯಾಗಿದ್ದು, ತೆರವುಗೊಳಿಸಲು ಮಹಾನಗರ ಪಾಲಿಕೆ ಯಾವುದೇ ಯೋಜನೆ ರೂಪಿಸಿಲ್ಲ. ಪ್ರಭಾವಿ ಮುಖಂಡರು, ಬಲಾಢ್ಯರು ಕೆರೆಯ ಜಾಗ ಒತ್ತುವರಿ ಮಾಡಿಕೊಂಡಿದ್ದು, ತೆರವಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ನಡೆಸಿದ ಸರ್ವೆಯ ಆಧಾರದ ಮೇಲೆಯೇ ಯಾವುದೇ ಒತ್ತುವರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ.

ಈ ಹಿಂದೆ ಪಾಲಿಕೆಯ ಅನುದಾನದಲ್ಲಿ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಈಗ ಎಲ್ಲ ಕೆಲಸಗಳು ಅರ್ಧಕ್ಕೆ ನಿಂತಿವೆ. ಹೂಳು ತೆಗೆಯುವ ಕಾರ್ಯವೂ ಮುಂದುವರಿದಿಲ್ಲ. ನಗರದ ಇತರೆ ಕೆರೆಗಳಂತೆ ಶೆಟ್ಟಿಹಳ್ಳಿ ಕೆರೆಯೂ ತ್ಯಾಜ್ಯ, ಪ್ಲಾಸ್ಟಿಕ್‌ನಿಂದ ಕಲುಷಿತಗೊಂಡಿದೆ. ಕೆರೆಯ ಮುಂಭಾಗದಲ್ಲಿಯೇ ಕಸ ವಿಲೇವಾರಿ ಘಟಕ ಇದ್ದು, ಅಲ್ಲಿನ ತ್ಯಾಜ್ಯವೂ ಕೆರೆ ಸೇರುತ್ತಿದೆ.

ಶೆಟ್ಟಿಹಳ್ಳಿ ಸುತ್ತಮುತ್ತಲಿನ ಜನರು ಮನೆ, ಮಾಂಸದಂಗಡಿ ತ್ಯಾಜ್ಯ ತಂದು ಕೆರೆಗೆ ಸುರಿದಿದ್ದಾರೆ. ಏರಿಯ ಪಕ್ಕದಲ್ಲಿಯೇ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ವಲಸೆ ಕಾರ್ಮಿಕರು ಇದರಿಂದ ಹೈರಾಣಾಗಿದ್ದಾರೆ. ಕಲುಷಿತ ನೀರು ಗಬ್ಬು ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

‘ನಗರದ ಕಲುಷಿತ ನೀರನ್ನು ಚರಂಡಿ, ರಾಜಕಾಲುವೆ ಮುಖಾಂತರ ಕೆರೆಗೆ ಹರಿಸುವುದೇ ಪಾಲಿಕೆಯ ಅಧಿಕಾರಿಗಳ ಕೆಲಸವಾಗಿದೆ. ಕೆರೆಗಳ ಉಳಿವಿಗೆ ಯಾರೊಬ್ಬರೂ ಮುಂದಾಗುತ್ತಿಲ್ಲ. ನೀರಿನ ಸಂಗ್ರಹಕ್ಕೆ ಕೆರೆ–ಕಟ್ಟೆ ಬಿಟ್ಟರೆ ಬೇರೆ ಜಾಗ ಏನಿದೆ? ಈ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲ?’ ಎಂದು ಶೆಟ್ಟಿಹಳ್ಳಿ ನಿವಾಸಿ ರಾಮಾಂಜಿನಿ ಪ್ರಶ್ನಿಸಿದರು.

‘ನಗರದ ಎಲ್ಲ ಕೆರೆಗಳ ನೀರಿನ ಮೂಲ ರಾಜಕಾಲುವೆಗಳು. ಮಳೆ ಸುರಿದಾಗ ಕಾಲುವೆ ಮುಖಾಂತರವೇ ನೀರು ಕೆರೆ ಸೇರುತ್ತದೆ. ಆದರೆ ರಾಜಕಾಲುವೆಗೆ ಕಲುಷಿತ ನೀರು ಹರಿಯುವುದನ್ನು ತಪ್ಪಿಸಿಲ್ಲ. ಚರಂಡಿಯಿಂದ ಕೆರೆಗೆ ನೀರು ಹರಿಯುವುದನ್ನೂ ತಡೆದಿಲ್ಲ. ಅಧಿಕಾರಿಗಳು ಯಾವುದಕ್ಕೂ ಇಚ್ಛಾಶಕ್ತಿ ತೋರದೆ ಹಲವು ಕೆರೆ–ಕಟ್ಟೆಗಳು ಅವನತಿಯತ್ತ ಸಾಗಿವೆ’ ಎಂದು ಬೇಸರಿಸಿದರು.

‘ಕೆರೆ ರಕ್ಷಣೆ, ನಿರ್ವಹಣೆಗೆ ಒಂದು ಸಮಗ್ರ ಯೋಜನೆ ರೂಪಿಸಬೇಕು. ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಆಗ ಮಾತ್ರ ಕೆರೆಗಳ ಉಳಿವು ಸಾಧ್ಯ’ ಎಂದು ನಗರದ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ಶೆಟ್ಟಿಹಳ್ಳಿ ಕೆರೆ ಏರಿಯ ಬಳಿ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಿ ಸುಟ್ಟಿರುವುದು
ಶೆಟ್ಟಿಹಳ್ಳಿ ಕೆರೆ ಏರಿಯ ಬಳಿ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚಿ ಸುಟ್ಟಿರುವುದು
ವಾಯು ವಿಹಾರಕ್ಕೆ ಅವಕಾಶ
ಒತ್ತುವರಿ ತೆರವುಗೊಳಿಸಿ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಜಾಗ ಅತಿಕ್ರಮ ಮಾಡಿಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು. ಮುಂದೆ ಯಾರೂ ಇಂತಹ ಕೆಲಸಕ್ಕೆ ಕೈ ಹಾಕದಂತೆ ನೋಡಿಕೊಳ್ಳಬೇಕು.
-ಶ್ರೀಕಾಂತ್‌, ಶೆಟ್ಟಿಹಳ್ಳಿ
ಕೆರೆಯ ಬಳಿ ಅಗತ್ಯ ಸೌಲಭ್ಯ ಕಲ್ಪಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಬೇಕು. ಬೆಳಗ್ಗೆ ಸಂಜೆ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ಆಗಾಗ ಇತ್ತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
-ನಾಗಭೂಷಣ್‌, ಶೆಟ್ಟಿಹಳ್ಳಿ
ನಿರ್ವಹಣೆಗೆ ಒತ್ತು ಕೊಡಿ ಕೆರೆಯ ನಿರ್ವಹಣೆಗೆ ಒತ್ತು ನೀಡಬೇಕು. ನಗರದ ಕಸವನ್ನು ಕೆರೆಯ ಏರಿಯ ಮೇಲೆ ಸುರಿಯುತ್ತಿದ್ದಾರೆ. ಇದನ್ನು ತಡೆದು ಕಸ ಹಾಕುವವರಿಗೆ ದಂಡ ವಿಧಿಸಬೇಕು. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಸಂರಕ್ಷಿಸಬೇಕು.
-ಸಿದ್ದರಾಜು, ಶೆಟ್ಟಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT