ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಶಿರಾ ಗೇಟ್ ರಸ್ತೆ ಸಂಚಾರ ಶುರು

Published 29 ಮೇ 2024, 6:42 IST
Last Updated 29 ಮೇ 2024, 6:42 IST
ಅಕ್ಷರ ಗಾತ್ರ

ತುಮಕೂರು: ನಗರದ ಶಿರಾ ಗೇಟ್ ಭಾಗದ ಜನರ ಬವಣೆಗೆ ಜಿಲ್ಲಾ ಆಡಳಿತ ಸ್ಪಂದಿಸಿದ್ದು, ಕೊನೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಆ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ದ್ವಿಚಕ್ರ ವಾಹನ, ಆಟೊ, ಕಾರುಗಳ ಸಂಚಾರಕ್ಕೆ ಮಂಗಳವಾರದಿಂದ ಅಧಿಕೃತವಾಗಿ ಅವಕಾಶ ಕಲ್ಪಿಸಲಾಗಿದೆ. ಬಸ್‌ಗಳು, ಲಾರಿ, ಟ್ರಕ್ ಸೇರಿದಂತೆ ಭಾರಿ ವಾಹನಗಳು ಹಿಂದಿನಂತೆ ಹನುಮಂತರಪುರ ಮಾರ್ಗವಾಗಿ ಹೆದ್ದಾರಿ ಮೂಲಕ ಸಂಚರಿಸಬೇಕಿದೆ.

ಜಲ್ಲಿ, ಮಣ್ಣು ಸುರಿದು ತಾತ್ಕಾಲಿಕವಾಗಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ ಮಳೆಗಾಲ ಆರಂಭವಾಗಿದ್ದು, ಜೋರು ಮಳೆಯಾಗಿ, ಕೆರೆಗೆ ನೀರು ಬಂದು ಕೋಡಿ ಹರಿದರೆ ಈ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗಲಿದೆ. ಅಂತಹ ಸ್ಥಿತಿ ಬರುವವರೆಗೂ ಓಡಾಡಬಹುದಾಗಿದೆ.

ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶಿರಾ ಗೇಟ್ ರಸ್ತೆಯಲ್ಲಿ ಮೂರು ವಾರಗಳ ಹಿಂದೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಆ ಭಾಗಕ್ಕೆ ಜನರು ನಡೆದುಕೊಂಡು ಹೋಗಲೂ ಅವಕಾಶ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ವಾಹನಗಳ ಮೂಲಕವೇ 6 ಕಿ.ಮೀ ಬಳಸಿಕೊಂಡು ತೆರಳಬೇಕಿತ್ತು.

ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡದೆ ರಸ್ತೆ ಬಂದ್ ಮಾಡಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿರ್ಧಾರದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದ ಜಿಲ್ಲಾಧಿಕಾರಿ, ಕೊನೆಗೂ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿದ್ದರು. ಮೊದಲ ಹಂತದಲ್ಲಿ ಶಿರಾ ಗೇಟ್‌ಗೆ ನಗರದ ಬಸ್ ನಿಲ್ದಾಣದಿಂದ 20 ನಿಮಿಷಕ್ಕೆ ಒಂದು ಬಸ್ ಸಂಚಾರ ಆರಂಭಿಸಿದ್ದರು.

ನಂತರ ಒಂದು ವಾರದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಆದರೆ ಎರಡು ವಾರ ಕಳೆಯುವುದರ ಹೊತ್ತಿಗೆ ರಸ್ತೆ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT