ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ರಸ್ತೆ: ಮತ್ತೆ ಅವ್ಯವಸ್ಥೆ

Published 1 ಜೂನ್ 2024, 6:13 IST
Last Updated 1 ಜೂನ್ 2024, 6:13 IST
ಅಕ್ಷರ ಗಾತ್ರ

ತುಮಕೂರು: ನಗರದ ಅಮಾನಿಕೆರೆ ಕೋಡಿ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ರಸ್ತೆ ಸಂಚಾರ ಬಂದ್ ಮಾಡಿದ ನಂತರ ಆರಂಭವಾದ ಅವ್ಯವಸ್ಥೆ ಮತ್ತೆ ಮುಂದುವರಿದಿದೆ. ಈಗ ಈ ಮಾರ್ಗದಲ್ಲಿ ಕಾರು ಸಂಚಾರಕ್ಕೆ ತಡೆಯೊಡ್ಡಲಾಗಿದೆ.

ರಸ್ತೆ ಬಂದ್ ಮಾಡಿದ ನಂತರ ಶಿರಾ ಗೇಟ್ ಕಡೆಗೆ ತೆರಳುವ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಸಾರ್ವಜನಿಕರಿಂದ ಆಕ್ರೋಶ ತೀವ್ರವಾದ ಸಮಯದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ತಾತ್ಕಾಲಿಕ ರಸ್ತೆ ನಿರ್ಮಾಣವಾಗಿ ನಾಲ್ಕು ದಿನಗಳು ಕಳೆಯುವುದರ ಒಳಗೆ ಆ ಭಾಗದ ಜನರಿಗೆ ಮತ್ತೆ ಸಮಸ್ಯೆ ಎದುರಾಗಿದೆ. ತಾತ್ಕಾಲಿಕ ರಸ್ತೆ ನಿರ್ಮಿಸಿ ದ್ವಿಚಕ್ರ ವಾಹನ, ಆಟೊ, ಕಾರು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ರಸ್ತೆಯೂ ಕುಸಿಯುವ ಭೀತಿಯಿಂದ ಕಾರು ಸಂಚಾರ ನಿಷೇಧಿಸಲಾಗಿದೆ. ತಾತ್ಕಾಲಿಕ ರಸ್ತೆ ನಿರ್ಮಿಸಿದ ಉದ್ದೇಶವೇ ಈಡೇರಿಲ್ಲ.

ತಾತ್ಕಾಲಿಕ ರಸ್ತೆಯನ್ನೂ ಗುಣಮಟ್ಟದಿಂದ ನಿರ್ಮಿಸಿಲ್ಲ. ಮಣ್ಣು, ಜಲ್ಲಿ ಸುರಿದು ರಸ್ತೆ ಮಾಡಲಾಯಿತು. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಕಾರುಗಳು ಸಂಚರಿಸಿದರೂ ಕುಸಿಯುತ್ತಿರಲಿಲ್ಲ. ಲಘು ವಾಹನಗಳ ಜತೆಗೆ ಸಣ್ಣಪುಟ್ಟ ಸರಕು ಸಾಗಣೆ ವಾಹನಗಳು ಸಂಚರಿಸಿದ್ದರಿಂದ ಭಾರ ತಾಳಲಾರದೆ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಕಾರಿನಲ್ಲಿ ಜಿಲ್ಲಾಧಿಕಾರಿ ಸಂಚರಿಸುತ್ತಿದ್ದ ಸಮಯದಲ್ಲೇ ಇಂತಹ ಅನುಭವವಾಗಿದೆ. ಹಾಗಾಗಿ ಕಾರುಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ ಎಂದು ಹೇಳಲಾಗುತ್ತಿದೆ.

‘ಮುನ್ನೆಚ್ಚರಿಕೆ ವಹಿಸದೆ, ಪರ್ಯಾಯ ರಸ್ತೆ ನಿರ್ಮಿಸದೆ ಸೇತುವೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದೇ ಇಷ್ಟೆಲ್ಲ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ನಿರ್ಧಾರ ಕೈಗೊಳ್ಳದೆ ಜನರು ಐದಾರು ಕಿ.ಮೀ ಸುತ್ತಿ ಬಳಸಿಕೊಂಡು ಶಿರಾ ಗೇಟ್ ರಸ್ತೆಗೆ ಬಂದು ತಲುಪಬೇಕಿದೆ. ಮುಂದೆ ಎದುರಾಗುವ ಸಮಸ್ಯೆಗಳ ಅರಿವು ಅಧಿಕಾರಿಗಳಿಗೆ ಇರಲಿಲ್ಲವೆ ಎಂದು ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ಹನುಮಂತರಾಯಪ್ಪ ಪ್ರಶ್ನಿಸುತ್ತಾರೆ.

ಅಮಾನಿಕೆರೆ ಕೋಡಿ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಸದ್ಯಕ್ಕೆ ಮುಗಿಯುವುದಿಲ್ಲ. ಹಲವು ತಿಂಗಳ ಕಾಲ ಜನರು ಸಮಸ್ಯೆ ಎದುರಿಸಬೇಕಾಗಿದೆ. ಆರಂಭದಲ್ಲೇ ತಾತ್ಕಾಲಿಕ ರಸ್ತೆಯನ್ನು ಮತ್ತಷ್ಟು ಬಲಪಡಿಸಿ ಕಾರುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆಗಾಲ ಆರಂಭವಾದರೆ ಈಗ ನಿರ್ಮಿಸಿರುವ ರಸ್ತೆಯೂ ಕೊಚ್ಚಿಕೊಂಡು ಹೋಗುವ ಆತಂಕವಿದೆ. ಈಗಲೇ ಅದನ್ನು ಸರಿಪಡಿಸಬೇಕು. ಕಾರು ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು. ಭಾರವಿರುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT