ಶುಕ್ರವಾರ, ಸೆಪ್ಟೆಂಬರ್ 25, 2020
21 °C
ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಕಟ್ಟಿದ ನಾಯಕ

ಜೆಡಿಎಸ್‌ ಕಟ್ಟಾಳಿಗೆ ಪಕ್ಷಾತೀತ ಕಂಬನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಸತ್ಯನಾರಾಯಣ ಅವರ ವೈರಿಗಳೂ ಕೂಡ ಅವರ ಪಕ್ಷನಿಷ್ಠೆಯ ಬಗ್ಗೆ ಪ್ರಶ್ನೆ ಮಾಡಲಾರರು. ಅವರಿಗೆ ಯಾವ ಸ್ವಾರ್ಥವೂ ಇರಲಿಲ್ಲ’ ಹೀಗೆ ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಪಕ್ಷ ನಿಷ್ಠೆ ಬಣ್ಣಿಸಿದವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ.

ಜಿಲ್ಲೆಯಲ್ಲಿ ದೇವೇಗೌಡರ ಮತ್ತು ಅವರ ಕುಟುಂಬಕ್ಕೆ ತೀರಾ ಆಪ್ತರಾಗಿದ್ದ ಸತ್ಯನಾರಾಯಣ ಜಿಲ್ಲೆಯಲ್ಲಿ ಜನತಾದಳ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

‘ಸತ್ಯಣ್ಣ’ ಎಂದೇ ಜನರು ಮತ್ತು ಜೆಡಿಎಸ್ ಕಾರ್ಯಕರ್ತರಿಂದ ಕರೆಸಿಕೊಳ್ಳುತ್ತಿದ್ದರು. ಪಕ್ಷ ನಿಷ್ಠೆಯನ್ನು ಅವರ ರಾಜಕೀಯ ವಿರೋಧಿಗಳು ಸಹ ಪ್ರಶಂಸಿಸುತ್ತಾರೆ. ಆಪರೇಷನ್ ಕಮಲದ ಸಂದರ್ಭದಲ್ಲೆಲ್ಲಾ ಸತ್ಯನಾರಾಯಣ ಹೆಸರು ಕೇಳಿ ಬರುತ್ತಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ ಎಚ್‌.ಡಿ.ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾದ ವೇಳೆ ಮಂತ್ರಿ ಸ್ಥಾನ ನೀಡಿಲ್ಲ. ಈ ಕಾರಣಕ್ಕೆ ಬಿಜೆಪಿ ಸೇರುತ್ತಾರೆ ಎನ್ನುವ ವದಂತಿಗಳು ವ್ಯಾಪಕವಾಗಿದ್ದವು.

‘ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡುವುದಿಲ್ಲ’ ಎಂದು ನುಡಿಯುತ್ತಿದ್ದರು. ಜನತಾ ಪರಿವಾರದಿಂದ ಆರಂಭವಾದ ಅವರ ರಾಜಕಾರಣ ಅಲ್ಲೇ ಕೊನೆಗೊಂಡಿತು. ಇದು ಅವರ ತತ್ವ ಮತ್ತು ಪಕ್ಷ ನಿಷ್ಠೆಗೆ ಸಾಕ್ಷಿ. ಈ ಹಿಂದೆ ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆಗಿದ್ದು, ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಬಲವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ಹಿರಿಯ ಮತ್ತು ಕಿರಿಯ ಮುಖಂಡರೂ ಸಹ ಅವರ ಬಗ್ಗೆ ತುಂಬು ಗೌರವ ಹೊಂದಿದ್ದರು.

ಜೆಡಿಎಸ್ ಕಟ್ಟುತ್ತಲೇ ಪಕ್ಷಾತೀತವಾದ ವಿಶ್ವಾಸ ಗಳಿಸಿದರು. ಇದಕ್ಕೆ ಕಾರಣ ಅವರ ಸರಳತೆ. ಅವರ ಸರಳತೆಯನ್ನು ಕಾಂಗ್ರೆಸ್, ಬಿಜೆಪಿ, ಸಿಪಿಐ, ಸಿಪಿಎಂ ನಾಯಕರು ಸಹ ಪ್ರಶಂಸಿಸುತ್ತಾರೆ.

ನಮನ: ಸತ್ಯನಾರಾಯಣ ಅವರ ಪಾರ್ಥಿವ ಶರೀರ ಇದ್ದ ವಾಹನವು ಬುಧವಾರ ಬೆಳಿಗ್ಗೆ ತುಮಕೂರು ಜಿಲ್ಲಾ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಕುಂಚಿಟಿಗ ಸಮುದಾಯ ಭವನಕ್ಕೆ ಬಂದಿತು. ಅಲ್ಲಿಂದ ಜಿಲ್ಲಾ ಜೆಡಿಎಸ್ ಕಚೇರಿಗೆ ಕೊಂಡೊಯ್ಯಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಅವರ ಕಾರ್ಯಗಳನ್ನು ಕೊಂಡಾಡಿದರು.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂತಿಮ ನಮನ ಸಲ್ಲಿಸಿ ಸತ್ಯನಾರಾಯಣ ಜತೆಗಿನ ಒಡನಾಟಗಳನ್ನು ಸ್ಮರಿಸಿದರು. ಅವರನ್ನು ಪಕ್ಷದ ಕಟ್ಟಾಳು ಎಂದು ಬಣ್ಣಿಸಿದರು.

ಶಾಸಕರಾದ ಡಾ.ಜಿ.ಪರಮೇಶ್ವರ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ , ಮುಖಂಡ ಎಂ.ಬಿ.ನಂದೀಶ್, ಜಿ.ಪಂ ಸದಸ್ಯ ಕೆಂಚಮಾರಯ್ಯ, ತುಮಕೂರು ವಿ.ವಿ ಕುಲಪತಿ ಸಿದ್ದೇಗೌಡ, ಜಿಲ್ಲಾ ಕುಂಚಿಟಿಗ ಸಂಘದ ಅಧ್ಯಕ್ಷ ಆರ್.ದೊಡ್ಡಲಿಂಗಪ್ಪ, ಕಾರ್ಯಾಧ್ಯಕ್ಷ ಆರ್.ಕಾಮರಾಜ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅಂತಿಮ ನಮನ ಸಲ್ಲಿಸಿದರು.

ಮರೆಯದ ಸ್ನೇಹ

ಸತ್ಯನಾರಾಯಣ ನಿಧನರಾದ ಸುದ್ದಿ ಕೇಳಿ ದುಃಖವಾಗಿದೆ. ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಜನ ಸಮೀಪದ ರಾಜಕಾರಣಿ ಆಗಿದ್ದರು ಎಂದು ಅವರ ಆಪ್ತರಾದ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

‘ಮೊದಲ ಸಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಶಿರಾ ಪಟ್ಟಣದಲ್ಲಿ ನನ್ನ ಹೆಸರಿನ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಮೂಲ ಕಾರಣಕರ್ತರು. ಅವರನ್ನು ಸದಾ ನೆನೆಯುತ್ತೇನೆ. ನನ್ನ ಬಗ್ಗೆ ಅಪಾರ ಗೌರವ ಭಾವ ಹೊಂದಿದ್ದ ಅವರ ಸ್ನೇಹವನ್ನು ಮರೆಯಲಾರೆ’ ಎಂದು ಬಣ್ಣಿಸಿದ್ದಾರೆ.

ಹೋರಾಟಕ್ಕೆ ಸ್ಪಂದನೆ

ಸತ್ಯನಾರಾಯಣ ಸರಳ ಸಜ್ಜನರಾಗಿದ್ದರು. ಹಲವು ರೈತರ ಜಾಥಾಗಳು ಜಿಲ್ಲೆಯ ಮೂಲಕ ರಾಜಧಾನಿಗೆ ಹೋಗುವಾಗ ಅವರು ನೀಡಿರುವ ಸಹಕಾರ ಸ್ಮರಣೀಯವಾದುದು ಎಂದು ಸಿಪಿಎಂ, ಸಿಐಟಿಯು ಮುಖಂಡರು ಸ್ಮರಿಸಿದ್ದಾರೆ.

ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಿದ್ದರು. ಹೋರಾಟಗಾರರನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ರೈತರು ಮತ್ತು ಕಾರ್ಮಿಕರ ಹೋರಾಟಗಳಿಗೆ ಸಹಕಾರ ನೀಡುತ್ತಿದ್ದರು. ಬೀಡಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ರೈತ ಮುಖಂಡ ಬಿ.ಉಮೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು