ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಜೂನಿಯರ್‌ ಕಾಲೇಜು ಮೈದಾನದಲ್ಲಿ ‘ಸಿಕ್ಸ್‌ ಪ್ಯಾಕ್‌’ ಗಾಂಧೀಜಿ!

ಗಾಂಧೀಜಿ ಪುತ್ಥಳಿಗೆ ₹1.80 ಲಕ್ಷ ವೆಚ್ಚ
Published : 2 ಅಕ್ಟೋಬರ್ 2024, 2:57 IST
Last Updated : 2 ಅಕ್ಟೋಬರ್ 2024, 2:57 IST
ಫಾಲೋ ಮಾಡಿ
Comments

ತುಮಕೂರು: ಮಹಾತ್ಮ ಗಾಂಧೀಜಿ ಎಂದ ತಕ್ಷಣ ಎಲ್ಲರ ಕಣ್ಮುಂದೆ ಬರುವುದು ಕೈಯಲ್ಲಿ ಕೋಲು, ಕಣ್ಣಿಗೆ ಕನ್ನಡಕ, ನಗು ಮುಖ, ಅವರ ಸರಳತೆ. ಆದರೆ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಗಾಂಧಿ ಸ್ಮಾರಕದ ಮುಂಭಾಗ ಪ್ರತಿಷ್ಠಾಪಿಸಿರುವ ಪುತ್ಥಳಿಯಲ್ಲಿ ಇವೆಲ್ಲ ಮಾಯವಾಗಿವೆ!

ಕಣ್ಣು ಮುಚ್ಚಿಕೊಂಡು ಕುಳಿತ ಸ್ಥಿತಿಯಲ್ಲಿರುವ ಗಾಂಧೀಜಿಯ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಕಣ್ಣಿಗೆ ಕನ್ನಡಕದ ಜತೆಗೆ ಅವರ ಎಂದಿನ ನಗು ಸಹ ಕಾಣಿಸುವುದಿಲ್ಲ. ಪುತ್ಥಳಿ ನೋಡಿದವರಲ್ಲಿ ಇದು ಗಾಂಧೀಜಿಯೇ ಎಂಬ ಪ್ರಶ್ನೆ ಮೂಡುತ್ತದೆ. ಮಹಾನಗರ ಪಾಲಿಕೆಯಿಂದ ಕಳೆದ ವರ್ಷದ ಗಾಂಧಿ ಜಯಂತಿ ಸಮಯದಲ್ಲಿ ತರಾತುರಿಯಲ್ಲಿ ಪುತ್ಥಳಿ ಅನಾವರಣಗೊಳಿಸಲಾಗಿತ್ತು.

ಶಿವಮೊಗ್ಗದಲ್ಲಿ ಪುತ್ಥಳಿ ತಯಾರಿಸಲಾಗಿತ್ತು. ಅಲ್ಲಿಂದ ಸಾಗಿಸಲು ತಗುಲಿದ ವೆಚ್ಚ ಸೇರಿದಂತೆ ಒಟ್ಟು ₹1.80 ಲಕ್ಷ ಖರ್ಚು ಮಾಡಲಾಗಿದೆ. ಹೊಸದಾಗಿ ‘ಸಿಕ್ಸ್‌ ಪ್ಯಾಕ್‌’ ಇರುವ, ಆಧುನಿಕ ಗಾಂಧೀಜಿಯನ್ನು ನೋಡಲು ಆಸಕ್ತಿ ಇರುವವರು ಸ್ಮಾರಕಕ್ಕೆ ಭೇಟಿ ನೀಡಬಹುದು.

‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಯಾರಿಸಿದ್ದರೂ ಗಾಂಧೀಜಿ ದೇಹ ಭಾವಕ್ಕೆ ಹೋಲಿಕೆಯಾಗುತ್ತಿಲ್ಲ. ಪುತ್ಥಳಿಯನ್ನು ತುಂಬಾ ವಿಕಾರಗೊಳಿಸಲಾಗಿದೆ. ಇತರೆಡೆಗಳಲ್ಲಿ ಇರುವ ಪುತ್ಥಳಿಗೂ ಸ್ಮಾರಕದ ಬಳಿಯ ಪುತ್ಥಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಸಿದ್ಧಪಡಿಸಿದವರ ನಿರ್ಲಕ್ಷ್ಯ ಒಂದು ಕಡೆಯಾದರೆ, ಅಧಿಕಾರಿಗಳಿಗೆ ಕನಿಷ್ಠ ಜ್ಞಾನ ಬೇಡವೇ? ಅವರ ಅವಸರಕ್ಕೆ ಸಿಕ್ಕ ಸಿಕ್ಕ ಪುತ್ಥಳಿ ತಂದು ಪ್ರತಿಷ್ಠಾಪಿಸಿದರೆ ಹೇಗೆ? ಇದು ಜನರ ಮನಸ್ಸಿಗೆ ಗಾಸಿ ಉಂಟು ಮಾಡುವ ಪ್ರಯತ್ನ ಎಂದು ನಗರದ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹೊರಗೆ ಥಳುಕು, ಒಳಗೆ ಹುಳುಕು: ಗಾಂಧಿ ಸ್ಮಾರಕ ಭವನವನ್ನು ಕಳೆದ ಬಾರಿ ಗಾಂಧೀ ಜಯಂತಿ ಪ್ರಯುಕ್ತ ಜೀರ್ಣೋದ್ಧಾರ ಮಾಡಲಾಗಿತ್ತು. ಇದಕ್ಕಾಗಿ ಸುಮಾರು ₹15 ಲಕ್ಷ ವ್ಯಯಿಸಲಾಗಿತ್ತು. ವರ್ಷ ಕಳೆಯುವ ಮೊದಲೇ ಸ್ಮಾರಕದ ಛಾವಣಿಗೆ ಬಳಸಿದ್ದ ಮರದ ದಿಮ್ಮಿಗಳನ್ನು ಹುಳು ತಿನ್ನುತ್ತಿವೆ.

ಸ್ಮಾರಕಕ್ಕೆ ಹಸಿ ಮರ ಬಳಕೆ ಮಾಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಕಾಮಗಾರಿ ನಡೆಸುವಾಗ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಸಿ ಮರ ಬಳಸಿದರೆ ತುಂಬಾ ದಿನ ಬಾಳಿಕೆ ಬರುವುದಿಲ್ಲ ಎಂದು ಎಚ್ಚರಿಸಿದ್ದರು. ಅಧಿಕಾರಿಗಳು ಹಠ ಹಿಡಿದು ಕೆಲಸ ಪೂರ್ಣಗೊಳಿಸಿದ್ದರು.

ಸೊರಗಿದ ಸ್ಮಾರಕ

ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಿಲ್ಲೆಗೆ ಭೇಟಿ ನೀಡಿ ವಿಶ್ರಾಂತಿ ಪಡೆದಿದ್ದ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಗಾಂಧಿ ಜಯಂತಿ ಇತರೆ ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ಸ್ಮಾರಕದ ಬಾಗಿಲು ತೆರೆದಿರುತ್ತದೆ. ಉಳಿದಂತೆ ಸದಾ ಮುಚ್ಚಿರುತ್ತದೆ. ಸ್ಮಾರಕದ ಸುತ್ತಮುತ್ತಲಿನ ಪ್ರದೇಶವು ಸ್ವಚ್ಛತೆಯಿಂದ ಕೂಡಿಲ್ಲ. ಜೂನಿಯರ್‌ ಕಾಲೇಜಿನ ಕಸ ಹಾಕಲು ಸ್ಮಾರಕದ ಹಿಂಭಾಗದ ಜಾಗ ಬಳಕೆಯಾಗುತ್ತಿದೆ. ಕಾರ್ಯಕ್ರಮ ಆಯೋಜನೆ ಸಮಯದಲ್ಲಿ ಮಾತ್ರ ಸ್ವಚ್ಛತೆ ಮಾಡಲಾಗುತ್ತದೆ.

‘ಪ್ರವಾಸಿ ತಾಣ ಐತಿಹಾಸಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಬಹುದಾದ ಸ್ಥಳದ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸದಿರುವುದು ವಿಪರ್ಯಾಸ. ಸ್ಮಾರಕಕ್ಕೆ ಹೋಗಲು ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಸ್ಮಾರಕವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ’ ಎಂದು ನಗರದ ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಗಾಂಧಿ ಸ್ಮಾರಕ ಭವನದ ಬಳಿ ಮಂಗಳವಾರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು
ಗಾಂಧಿ ಸ್ಮಾರಕ ಭವನದ ಬಳಿ ಮಂಗಳವಾರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT