ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಜನತಾ ದರ್ಶನದಲ್ಲೂ ಸಿಗದ ಪರಿಹಾರ; ಪ್ರತಿಭಟನೆ

Published 20 ಫೆಬ್ರುವರಿ 2024, 4:55 IST
Last Updated 20 ಫೆಬ್ರುವರಿ 2024, 4:55 IST
ಅಕ್ಷರ ಗಾತ್ರ

ತುಮಕೂರು: ನಿವೇಶನ ರಹಿತರಿಗೆ ಭೂಮಿ ನೀಡುವುದು, ದಿಬ್ಬೂರು ವಸತಿ ಗೃಹದ ನಿವಾಸಿಗಳಿಗೆ ಹಂಚಿಕೆ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಸ್ಲಂ ಸಮಿತಿಯಿಂದ ಪ್ರತಿಭಟನೆ ನಡೆಯಿತು.

‘ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ನಗರದ ಅಮಾನಿಕೆರೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಲ್ಲಿಸಿದ್ದ ಅರ್ಜಿಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜಿಲ್ಲಾಧಿಕಾರಿ ಕರೆಯಬೇಕು’ ಎಂದು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಒತ್ತಾಯಿಸಿದರು.

ನಿವೇಶನ ರಹಿತರಿಗಾಗಿ ಜಿಲ್ಲಾಡಳಿತ 2022ರಲ್ಲಿ 17 ಎಕರೆ ಸರ್ಕಾರಿ ಭೂಮಿ ಗುರುತಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಇದರಲ್ಲಿ 400 ವಿಶೇಷ ವರ್ಗದ ಮಹಿಳೆಯರಿಗೆ 4 ಎಕರೆ ಕಾಯ್ದಿರಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2017ರಲ್ಲಿ ನಗರದ ವಿವಿಧ ಕೊಳಚೆ ಪ್ರದೇಶಗಳ 1,200 ಕುಟುಂಬಗಳನ್ನು ದಿಬ್ಬೂರು ಹೊರ ವಲಯಕ್ಕೆ ಸ್ಥಳಾಂತರಿಸಿದ್ದು, ಅವರಿಗೆ ಇದುವರೆಗೆ ಹಂಚಿಕೆ ಪತ್ರ ನೀಡಿಲ್ಲ. ಈಗ ಸ್ಲಂ ನಿವಾಸಿಗಳು ವಾಸ ಇರುವ ಜಾಗವನ್ನು ಮಹಾನಗರ ಪಾಲಿಕೆ ಹಸ್ತಾಂತರ ಮಾಡಿಕೊಂಡಿಲ್ಲ. ಅಲ್ಲಿಯ ಜನ ಅಗತ್ಯ ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಸ್ಲಂ ಸಮಿತಿಯ ಕಣ್ಣನ್, ಶಂಕ್ರಯ್ಯ, ಅರುಣ್, ತಿರುಮಲಯ್ಯ, ಜಾಬೀರ್‌ಖಾನ್‌, ಶಾರದಮ್ಮ, ಚಕ್ರಪಾಣಿ, ಮಂಗಳಮ್ಮ, ಮುರುಗ, ಕೃಷ್ಣಮೂರ್ತಿ, ಅನುಪಮಾ, ಪೂರ್ಣಿಮಾ, ಮಹಾದೇವಮ್ಮ, ಲಕ್ಷ್ಮಿಪತಿ, ಸಿದ್ದಪ್ಪ, ರಾಜು, ಶಾಬುದ್ದೀನ್, ಹನುಮಕ್ಕ, ಗುಲ್ನಾಜ್, ಗಣೇಶ್, ಮಂಜುನಾಥ್, ಶಿವಕುಮಾರ್, ಧನಂಜಯ್, ಮುಬಾರಕ್, ರಾಜ, ಮಾಧವನ್, ಕಾಶಿರಾಜ್, ಮಾರಿ, ಶಬಾನ, ಗೀತಾ, ನಂಜಮ್ಮ, ಮಹಾದೇವಮ್ಮ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT