ಶನಿವಾರ, ಜೂನ್ 25, 2022
24 °C
‘ಹೋರಾಟದ ಹಾಡುಗಳಿಂದ ಏನನ್ನು ಕಲಿಯಬಹುದು’ ಸಂವಾದ

ಹೋರಾಟಕ್ಕೆ ಸ್ಫೂ ರ್ತಿ ನೀಡಿದ ಹಾಡುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ, ಶೋಷಣೆಗಳನ್ನು ಬದಲಾಯಿಸಬೇಕು ಎನ್ನುವ ಛಲಗಾರಿಕೆಯಿಂದ ಹೋರಾಟ ಮಾಡುವವರಿಗೆ ‘ಹೋರಾಟದ ಹಾಡುಗಳು’ ಆಮ್ಲಜನಕದ ರೀತಿಯಲ್ಲಿ ಸಹಾಯಕವಾಗಿವೆ ಎಂದು ಕುಪ್ಪಳ್ಳಿಯ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಬಿ.ಎಂಪುಟ್ಟಯ್ಯ ಅಭಿಪ್ರಾಯಪಟ್ಟರು.

‘ಓದು ವಿದ್ಯಾರ್ಥಿ ಬಳಗ– ತುಮಕೂರು’ ಸಂಘಟನೆ ಮೂರನೇ ಸಂಚಿಕೆಯ ಕಾರ್ಯಕ್ರಮವಾಗಿ ಆಯೋ
ಜಿಸಿದ್ದ ‘ಹೋರಾಟದ ಹಾಡುಗಳಿಂದ ಏನನ್ನು ಕಲಿಯಬಹುದು’ ಎಂಬ ಆನ್‍ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಗೆ ಆಮ್ಲಜನಕವೇ ಈ ಹೋರಾಟದ ಹಾಡುಗಳು. ಗೋಡೆ ಬರಹಗಳು, ಘೋಷಣೆಗಳು ದಲಿತ, ಶೋಷಿತ, ದಮನಿತರನ್ನು ಎಚ್ಚರಿಸಿದವು. ಹೊಸದಾದ ಸಾಮಾಜಿಕ, ರಾಜಕೀಯ ಬೆಳಕಿನ ಅರಿವು ನೀಡಿದವು ಎಂದರು.

ಇಡೀ ಸಮಾಜವೇ ಅನ್ಯಾಯ, ಅಸಮಾನತೆ, ಶೋಷಣೆಯಿಂದ ರಚನೆಯಾಗಿದೆ. ದಲಿತ ಸಂಘರ್ಷ ಸಮಿತಿ ಹೋರಾಟದ ಹಾಡುಗಳ ಮೂಲಕ ದಲಿತರಿಗೆ ಸಾಮಾಜಿಕ, ರಾಜಕೀಯ ಎಚ್ಚರಿಕೆ ನೀಡಿ, ಜಾಗೃತಿ, ಧೈರ್ಯ ಮೂಡಿಸಿತು. ಓದಬೇಕಾದ ಸಾಹಿತ್ಯ ಕೃತಿಗಳು, ಕುವೆಂಪು, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಪುಸ್ತಕ ಬರಹಗಳನ್ನು ಓದಲು ಪ್ರೇರೇಪಿಸಿತು ಎಂದು ಅಭಿಪ್ರಾಯಪಟ್ಟರು.

ದಲಿತ ಕಲಾ ಮಂಡಳಿಯು ಹೋರಾಟದ ಹಾಡು ಹಾಡಲು ತಂಡ ಕಟ್ಟಿತ್ತು. ಬರಹ ರೂಪದಲ್ಲಿದ್ದ ಹಾಡುಗಳನ್ನು ಹೋರಾಟದ ಹಾಡುಗಳನ್ನಾಗಿ ಹಾಡಲಾಯಿತು. ಕೆಲವು ಸಂದರ್ಭದಲ್ಲಿ ಹೋರಾಟಕ್ಕಾಗಿಯೇ ಹಾಡುಗಳನ್ನು ರೂಪಿಸಲಾಯಿತು ಎಂದರು.

ತಿಪಟೂರಿನ ಯುವಕವಿ ಎಸ್.ಕೆ.ಮಂಜುನಾಥ ಸಂವಾದಕ್ಕೆ ಪ್ರತಿಕ್ರಿಯಿಸಿ, ‘ದಲಿತರ ಆದಿಮ ಪರಂಪರೆಯ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಿಕೊಡುವಲ್ಲಿ ಹೋರಾಟದ ಹಾಡುಗಳು ಪ್ರಮುಖ ಪಾತ್ರ ವಹಿಸಿವೆ. ಇದರ ಮುಂದುವರಿದ ಭಾಗವಾಗಿ ಹೋರಾಟಗಳು, ಚಳವಳಿಗಳು ಇತಿಹಾಸದಲ್ಲಿ ದಾಖಲಾಗಿವೆ. ಬದುಕು ಹೋರಾಟವಾದಾಗ, ಜೀವನ ಹಾಡಾಗುತ್ತದೆ’ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಧನುಷ್ ಎಚ್.ಶೇಖರ್ ಪ್ರತಿಕ್ರಿಸಿ, ‘ಕನ್ನಡ ಸಾಹಿತ್ಯದಲ್ಲಿ ಹೋರಾಟದ ಸಂಗತಿಯನ್ನು ಪ್ರತಿಯೊಂದು ಹಂತದಲ್ಲೂ ಗುರುತಿಸಬಹುದು’ ಎಂದರು.

ಸಂವಾದದಲ್ಲಿ ಓದು ವಿದ್ಯಾರ್ಥಿ ಬಳಗದ ಸಂಚಾಲಕ ಡಾ.ನಾಗಭೂಷಣ ಬಗ್ಗನಡು, ಸಂಶೋಧನಾ ವಿದ್ಯಾರ್ಥಿ ಅರವಿಂದ, ಡಾ.ವಡ್ಡಗೆರೆ ನಾಗರಾಜಯ್ಯ, ಬಾ.ಹ.ರಮಾಕುಮಾರಿ, ಡಾ.ರವಿಕುಮಾರ್ ನೀಹ, ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ, ಡಾ.ಶಿವಣ್ಣ ಬೆಳವಾಡಿ, ಡಾ.ಆಶಾರಾಣಿ ಸೇರಿದಂತೆ ವಿದ್ವಾಂಸರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು