ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಮತ್ತೆ ‘ಕೈ’ ಹಿಡಿಯುವರೇ ಮುದ್ದಹನುಮೇಗೌಡ?

Published 10 ಜನವರಿ 2024, 20:37 IST
Last Updated 10 ಜನವರಿ 2024, 20:37 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆಗೆ ಸ್ಪರ್ಧಿಸಲು ತಯಾರಿ ನಡೆಸಿರುವ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಎಸ್‌.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಚರ್ಚಿಸಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಮುದ್ದಹನುಮೇಗೌಡ ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. 

ಬೆಂಗಳೂರಿನಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ನಂತರ ಪಕ್ಷದ ಪ್ರಮುಖರನ್ನು ಭೇಟಿಯಾಗಿದ್ದಾರೆ.

ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲೆಯ ಮುಖಂಡರ ಸಭೆ ಕರೆಯಲಾಗಿತ್ತು. ಜಿಲ್ಲೆಯ ಇಬ್ಬರು ಸಚಿವರು, ಶಾಸಕರು ಸಹಿತ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ಆರಂಭಕ್ಕೂ ಮುನ್ನವೇ ಗೌಡರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ.

ತುಮಕೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ನಲ್ಲೂ ಸದ್ಯಕ್ಕೆ ಸೂಕ್ತ ಅಭ್ಯರ್ಥಿ ಕಾಣುತ್ತಿಲ್ಲ. ಮುದ್ದಹನುಮೇಗೌಡ ಅವರನ್ನೇ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲೇ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಲು ಗೌಡರಿಗೆ ಜಿಲ್ಲೆಯ ಸಚಿವರು ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅವರ ಹೆಸರನ್ನೇ ಹೈಕಮಾಂಡ್‌ಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಸಿಗದ ಭರವಸೆ

ಬಿಜೆಪಿಯಿಂದ ಮುದ್ದಹನುಮೇಗೌಡ ಟಿಕೆಟ್ ಬಯಸಿದ್ದರು. ಬಿಜೆಪಿ–ಜೆಡಿಎಸ್ ಮೈತ್ರಿಯಿಂದ ತುಮಕೂರು ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಈವರೆಗೂ ನಿರ್ಧಾರವಾಗಿಲ್ಲ. ಒಂದು ಕಡೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಕರೆತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಆದರೆ, ಎಚ್.ಡಿ.ದೇವೇಗೌಡ ಕುಟುಂಬದವರು ಸ್ಪರ್ಧಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ಬಿಜೆಪಿಯ ವಿ.ಸೋಮಣ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದರು. ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿ ಪಕ್ಷದಲ್ಲೇ ಉಳಿದುಕೊಳ್ಳಲು ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಮೇಲಾಗಿ ಬಿಜೆಪಿಯಿಂದಲೇ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಉದ್ದೇಶದಿಂದ ಈಚೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವೊಲಿಸಿದ್ದಾರೆ ಎಂಬ ಮಾತು  ಕೇಳಿಬರುತ್ತಿವೆ. ಇದರ ನಡುವೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೆಸರು ಸಹ ಜಿಲ್ಲೆಯಲ್ಲಿ ಮುನ್ನಲೆಗೆ ಬಂದಿದೆ. 

ಬಿಜೆಪಿ–ಜೆಡಿಎಸ್ ಹೊಂದಾಣಿಕೆಯಿಂದ ಯಾರಿಗೆ ಕ್ಷೇತ್ರ ಬಿಟ್ಟುಕೊಡಬೇಕು ಎಂಬುದು ಸ್ಪಷ್ಟವಾಗದೆ, ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಎಂಬ ಆತಂಕದಿಂದ ಮುದ್ದಹನುಮೇಗೌಡ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಬಿಜೆಪಿ–ಜೆಡಿಎಸ್‌ ಹೊಂದಾಣಿಕೆಯಿಂದ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದು ಸದ್ಯಕ್ಕೆ ತಿಳಿಯಾಗುವಂತೆ ಕಾಣುತ್ತಿಲ್ಲ. ಕೊನೆಗೆ ಬಿಜೆಪಿಯಲ್ಲೂ ಟಿಕೆಟ್ ಸಿಗದಿದ್ದರೆ ಮತ್ತೆ ರಾಜಕೀಯವಾಗಿ ‘ಅತಂತ್ರ’ ಆಗಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೆ ‘ಅತಂತ್ರ’ ಭೀತಿ

ಮುದ್ದಹನುಮೇಗೌಡ ಅವರು ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲೇ ಇದ್ದು ಪಕ್ಷವನ್ನು ಕಟ್ಟಿ ಬೆಳೆಸಿದ್ದರು. ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರೂ ಆಗಿದ್ದರು. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್– ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿತ್ತು. ಎಚ್.ಡಿ.ದೇವೇಗೌಡ ಸ್ಪರ್ಧಿಸಿ ಸೋತರು. ಹೊಂದಾಣಿಕೆಯಿಂದಾಗಿ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅವರಿಗೆ ಅವಕಾಶ ಕೈ ತಪ್ಪಿತ್ತು. ನಂತರವೂ ಪಕ್ಷದಲ್ಲಿ ಯಾವುದೇ ಅವಕಾಶ ಸಿಗಲಿಲ್ಲ. ಇದರಿಂದ ಬೇಸತ್ತು ಬಿಜೆಪಿ ಸೇರ್ಪಡೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರೂ ಅವಕಾಶ ಸಿಗಲಿಲ್ಲ. 

ತುಮಕೂರಿನಿಂದಲೇ ದೊಡ್ಡಗೌಡರು ಕಣಕ್ಕೆ?

‘ಇದು ನನ್ನ ಕೊನೆ ಚುನಾವಣೆ. ಏನಾದರಾಗಲಿ ನೋಡೋಣ. ರಾಜಕೀಯ ಜೀವನದಲ್ಲಿ ಸೋಲು–ಗೆಲುವು ಇದ್ದೇ ಇರುತ್ತದೆ. ಸ್ಪರ್ಧೆ ಖಚಿತ’ ಎಂದು ಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ‘ಈ ಬಾರಿ ಗೌಡರು ಸ್ಪರ್ಧಿಸಲಿದ್ದಾರೆ. ಜನರ ಭಾವನೆಗೆ ಸ್ಪಂದಿಸಿ ಕಣಕ್ಕಿಳಿಯುತ್ತಿದ್ದಾರೆ’ ಎಂದು ಗೌಡರ ಆಪ್ತರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT