ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ಎಲ್ಲರ ಅಚ್ಚುಮೆಚ್ಚು ‘ಹೋಟೆಲ್‌ ಅರಳಿಮರ’

ಶಾಂತರಾಜು ಎಚ್‌.ಜಿ
Published 7 ಜುಲೈ 2024, 4:55 IST
Last Updated 7 ಜುಲೈ 2024, 4:55 IST
ಅಕ್ಷರ ಗಾತ್ರ

ಗುಬ್ಬಿ: ಸೌದೆ, ತೆಂಗಿನ ಮಟ್ಟೆ ಬಳಸಿ ತಿಂಡಿ, ಊಟ ತಯಾರಿಸುವ ‘ಹೋಟೆಲ್‌ ಅರಳಿಮರ’ ಆಹಾರ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ.

ಪಟ್ಟಣದ ಬಸ್‌ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅರಳಿಮರದ ಕೆಳಗೆ ಇರುವ ‘ಹೋಟೆಲ್‌ ಅರಳಿಮರ’ ಗುಣಮಟ್ಟದ ಆಹಾರದಿಂದಲೇ ಪ್ರಸಿದ್ಧಿ ಪಡೆದಿದೆ. ಮಾಲೀಕರು ಬೇರೆ ಯಾವ ಹೆಸರೂ ಇಡುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಸುಮಾರು 45 ವರ್ಷಗಳಿಂದ ಜನರಿಗೆ ಗುಣಮಟ್ಟದ ತಿಂಡಿ, ಊಟ ಪೂರೈಸುತ್ತಿದೆ. ಇಲ್ಲಿ ಕಾಫಿ, ಚಹಾ ತಯಾರಿಸಲು ಮಾತ್ರ ಗ್ಯಾಸ್‌ ಬಳಸುತ್ತಾರೆ. ಉಳಿದಂತೆ ಎಲ್ಲ ಆಹಾರ ಸೌದೆ, ತೆಂಗಿನ ಮಟ್ಟೆಗಳಿಂದ ತಯಾರಾಗುತ್ತದೆ. ಇದರಿಂದಾಗಿ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

ಬೆಳಗಿನ ಜಾವ 4.30 ಗಂಟೆಗೆ ಪ್ರಾರಂಭವಾಗುವ ಹೋಟೆಲ್‌ ರಾತ್ರಿ 7.30ರ ವರೆಗೆ ತೆರೆದಿರುತ್ತದೆ. ಬೆಳಗ್ಗೆ 5.30 ಗಂಟೆಯಿಂದಲೇ ಕಾಫಿ, ತಿಂಡಿಗಾಗಿ ಜನರು ಅರಳಿಮರದತ್ತ ಹೆಜ್ಜೆ ಹಾಕುತ್ತಾರೆ. ಇಡ್ಲಿ, ವಡೆ, ಪೂರಿ, ಸಾಗು ಹಾಗೂ ಬಾತ್‌ ಬೆಳಗಿನ ತಿಂಡಿಯ ವಿಶೇಷ. ಒಣ ಮೆಣಸಿನಕಾಯಿ ಬಳಸಿ ಮಾಡುವ ಚಟ್ನಿಯ ರುಚಿಯನ್ನು ಸವಿಯುತ್ತಾರೆ.

ಸಂಜೆ ಬಗೆ ಬಗೆಯ ದೋಸೆ, ಗಟ್ಟಿ ಚಟ್ನಿಗಾಗಿ ಜನ ಗುಂಪು ಸೇರುತ್ತಾರೆ. ಹೋಟೆಲ್ ಪ್ರಾರಂಭದಿಂದ ಇಲ್ಲಿಯ ತನಕ ಜನರ ವಿಶ್ವಾಸ ಉಳಿಸಿಕೊಂಡು ಬಂದಿದೆ. ಪಟ್ಟಣ ಸೇರಿದಂತೆ ಹೊರಗಡೆಯಿಂದ ಬಂದವರು ‘ಹೋಟೆಲ್‌ ಅರಳಿಮರ’ ಹುಡುಕಿಕೊಂಡು ಬರುತ್ತಾರೆ. ಹೋಟೆಲ್ ಚಿಕ್ಕದಾಗಿದ್ದರೂ ಪರಿಶುದ್ಧತೆ, ಗುಣಮಟ್ಟದಿಂದ ಖ್ಯಾತಿ ಪಡೆದಿದೆ.

‘ಪ್ರತಿ ದಿನ ಸಾವಿರಾರು ಜನ ಭೇಟಿ ನೀಡಿ ಸಂತೃಪ್ತಿಯಿಂದ ಊಟ ಮಾಡಿ ಹೋಗುತ್ತಾರೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ಊಟ, ತಿಂಡಿ ನೀಡುವುದು ನಮ್ಮ ಧ್ಯೇಯವಾಗಿದೆ’ ಎಂದು ಹೋಟೆಲ್ ಮಾಲೀಕ ಕಾಂತರಾಜು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT