ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರದಲ್ಲೂ ಕ್ರೀಡಾಂಗಣ

ಯುವ ಸಬಲೀಕರಣ, ಕ್ರೀಡೆ ಹಾಗೂ ಯೋಜನೆ ಸಚಿವ ಕೆ.ಸಿ.ನಾರಾಯಣಗೌಡ ಮಾಹಿತಿ
Last Updated 7 ಜುಲೈ 2021, 9:41 IST
ಅಕ್ಷರ ಗಾತ್ರ

ತುಮಕೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಸದ್ಬಳಕೆಯಲ್ಲಿ ರಾಜ್ಯದಲ್ಲಿಯೇ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಯುವ ಸಬಲೀಕರಣ, ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ, ಸಾಂಖ್ಯಿಕ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ನಿಂದ ಲಾಕ್‌ಡೌನ್ ಆಗಿದ್ದರೂ ನಗರದಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆದಿದೆ. ಬಹುತೇಕ ಜಿಲ್ಲೆಗಳಲ್ಲಿ ಅನುದಾನ ಬಳಕೆಯೇ ಆಗಿಲ್ಲ’ ಎಂದರು.

‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹತ್ವ ಏನು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಡುತ್ತೇನೆ. ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುತ್ತೇನೆ. ಅದಕ್ಕಾಗಿಯೇ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಭವ್ಯವಾದ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹೈಟೆಕ್ ಆಗಲಿದ್ದು, ಅಲ್ಲಿ ಕಾಮಗಾರಿ ಆರಂಭವಾದಾಗ ನಗರದ ಕ್ರೀಡಾಂಗಣವನ್ನು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳಲಾಗುವುದು. ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಮೂಸಂಬಿ, ಡ್ರಾಗನ್ ಫ್ರೂಟ್ ಬೆಳೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಬೆಳೆ ವಿಮೆ ಮಾಡಿಸಲು ಒತ್ತು ಕೊಡುವಂತೆ ಸಲಹೆ ಮಾಡಿದರು.

ಅಡಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಬ್ಸಿಡಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಲ್ಲೆ ಒಂದು ಕಾಲದಲ್ಲಿ ಕಬ್ಬಡಿ, ಕೊಕ್ಕೊ ಕ್ರೀಡೆಗೆ ಬಹಳ ಹೆಸರುವಾಸಿಯಾಗಿತ್ತು. ಅದರೆ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳೇ ನಡೆಯುತ್ತಿಲ್ಲ. ಹಾಗಾಗಿ ಕ್ರೀಡಾ ಚಟುವಟಿಕೆಗೆ ಒತ್ತು ಕೊಡಬೇಕು ಎಂದು ಮಾಧುಸ್ವಾಮಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ರೈತರು ಹಾಗೂ ವರ್ತಕರ ನಡುವೆ ನೇರ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಆನ್‌ಲೈನ್ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ವೀರಭದ್ರಯ್ಯ, ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಉಪಸ್ಥಿತರಿದ್ದರು.

ಸಭೆ ನಂತರ ಸ್ಮಾರ್ಟ್ ಸಿಟಿಯಿಂದ ನಡೆಯುತ್ತಿರುವ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಕ್ರೀಡಾ ಸವಲತ್ತು: ಸಭೆಗೂ ಮುನ್ನ ದಾನಿಗಳಾದ ಎನ್.ಎಸ್.ಜಯಕುಮಾರ್, ವಿನಯ್, ರಾಜೇಂದ್ರ ಅವರು ನೀಡಿದ್ದ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಬಳಸುವ ಏರ್ ರೈಫಲ್ ಅನ್ನು ಸಚಿವ ನಾರಾಯಣಗೌಡ ಅವರು ರಾಷ್ಟ್ರ ಮಟ್ಟದ ರೈಫಲ್ ಶೂಟಿಂಗ್‍ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ವಿತರಿಸಿದರು.

ಚೆನ್ನೈನಲ್ಲಿ ನಡೆದ ದಕ್ಷಿಣ ಭಾರತದ ಚಾಂಪಿಯನ್ ಶಿಪ್ ರೈಫಲ್ ಶೂಟಿಂಗ್‍ನಲ್ಲಿ ವಿವೇಕಾನಂದ ರೈಫಲ್ ಅಕಾಡೆಮಿಯ ಕ್ರೀಡಾಪಟುಗಳಾದ ಕಿರಣ್, ಪ್ರಿಯಾ ಡ್ಯಾನಿಯಲ್ ಕಂಚಿನ ಪದಕ ಹಾಗೂ ಶ್ರೀತೇಜ್, ಮನೋಜ್ ಗೌಡ, ರೋಹನಗೌಡ ಅವರು ಅರ್ಹತಾ ಅಂಕಗಳಲ್ಲಿ ಆಯ್ಕೆಯಾಗಿ ಭೂಪಾಲ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ರೈಫಲ್ ಶೂಟಿಂಗ್‍ಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT