ಮಂಗಳವಾರ, ಫೆಬ್ರವರಿ 25, 2020
19 °C

ರಾಷ್ಟ್ರಗೀತೆ ಹಾಡುವಾಗ ಎದ್ದುನಿಂತರೆ ದೇಶಾಭಿವೃದ್ಧಿ ಆಗುತ್ತದೆ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ದೇಶದ ಪ್ರತಿ ಮನುಷ್ಯನು ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲುವುದು ಕರ್ತವ್ಯವೆಂದು ಭಾವಿಸಿ ಗೌರವ ಸೂಚಿಸಿದರೆ ಆ ದಿನವೇ ದೇಶ ಅಭಿವೃದ್ಧಿಯಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಜಿಲ್ಲಾಡಳಿತ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಒಂದು ದೇಶ ಒಂದು ಸಂವಿಧಾನ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅವರಾಗಿಯೇ ಎದ್ದುನಿಂತು  ರಾಷ್ಟ್ರಧ್ವಜಕ್ಕೆ ಗೌರವ ಕೊಡಲಿ, ರಾಷ್ಟ್ರಗೀತೆ ಹಾಡಲಿ, ಒತ್ತಾಯ ಮಾಡಬೇಡಿ ಎಂದು ಕೆಲವರು ಹೇಳುತ್ತಾರೆ. ನನ್ನ ಜೀವಮಾನದಲ್ಲಿ ಗೌರವ ಕೊಡುವ ಮನಸ್ಥಿತಿ ಎಲ್ಲರಿಗೂ ಬಂದರೆ ಅದಕ್ಕಿಂತ ದೊಡ್ಡ ಸಾಧನೆ ಇಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಎಲ್ಲರಿಗೂ ಸ್ವಾತಂತ್ರ್ಯ ಬಂದಿದೆ. ನಮ್ಮದು ಹೋಗಿದೆ. ಜವಾಬ್ದಾರಿ ಸ್ಥಾನದಲ್ಲಿದ್ದರೂ ಏನಾದರೂ ಹೇಳುವ ಸ್ಥಿತಿಯಿಲ್ಲ. ದೇಶದ ಒಬ್ಬ ಮನುಷ್ಯ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಂತರೆ, ಅವನಿಗೆ ಈ ದೇಶ ನನ್ನದು ಎಂಬ ಭಾವನೆ ಬರುತ್ತದೆ. ಯಾವಾಗ ಈ ದೇಶ, ಕೆಲಸ ನನ್ನದು ಎಂದು ಅನ್ನಿಸುತ್ತದೆಯೋ ಅಲ್ಲಿಂದ ಅವನಿಗೆ ಜವಾಬ್ದಾರಿ ಆರಂಭವಾಗುತ್ತದೆ. ಅಂತವರಿಗೆ ಏನೂ ಹೇಳಬೇಕಾಗಿಲ್ಲ ಎಂದು ತಿಳಿಸಿದರು.

ನಮ್ಮ ರಾಷ್ಟ್ರ ಧಾರ್ಮಿಕವಾಗಿ ಇಬ್ಭಾಗವಾಯಿತು. ಆ ವೇಳೆ ಕಂಡರಿಯದ ಕೊಲೆ, ದುರ್ಘಟನೆಗಳು ನಡೆದವು. ಅದರ ಕಹಿ ನಾವಿನ್ನು ಮರೆತಿಲ್ಲ. ಅಂದಿನಿಂದಲೂ ನಾವು ಧಾರ್ಮಿಕವಾಗಿ ಬದುಕಿದ್ದೇವೆ ಹೊರತು, ರಾಷ್ಟ್ರೀಯವಾಗಿ ಅಲ್ಲ. ಮನಸ್ಸಿನಲ್ಲಿ ಸೇಡು ಉಳಿದಿದೆ. ನಮಗಿನ್ನು ಈ ದೇಶಕ್ಕೆ ಸೇರಿದವರಲ್ಲ ಎಂಬ ಭಾವನೆ ಉಳಿದಿದೆ ಎಂದಾಗ, 'ನೀನು ಎದ್ದುನಿಂತು ರಾಷ್ಟ್ರಧ್ವಜಕ್ಕೆ ಮನ್ನಣೆ ಕೊಡು' ಎಂದು ಒತ್ತಾಯಿಸುವುದು ತಪ್ಪಲ್ಲ ಎಂದರು.

ಸ್ವೇಚ್ಛಾಚಾರವೇ ಸ್ವಾತಂತ್ರ್ಯ ಅಲ್ಲ. ದೆಹಲಿಯ ಜೆ.ಎನ್.ಯು.ನಲ್ಲಿ ನಡೆಯುವ ತುಕಡಾ ಮಾಡುವ ಚರ್ಚೆಗಳು ಸ್ವಾತಂತ್ರ್ಯ ಪರವಾದ ಹೋರಾಟಗಳಲ್ಲ. ಆ ತುಕಡವಾಲೆಗಳು  ಒಂದೊಂದು ಮಾತಿನಲ್ಲಿ ದೇಶ ತುಂಡು ಮಾಡುವ, ಮತಗಳ ವಿಭಜನೆ ಮಾಡುವ ಆಶಯ ಹೊಂದಿದ್ದಾರೆ ಎಂದು ದೂರಿದರು.

ಮೀಸಲಾತಿ ಎಂಬುದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದೆನಿಸಬಹುದು. ಆದರೆ, ಅವಕಾಶಗಳ ಸದುಪಯೋಗ ಪಡೆಯಲು ಎಲ್ಲ ಸ್ಪರ್ಧಾಳುಗಳು ಸಮಾನರಾಗಿರಬೇಕಾಗುತ್ತದೆ. ಆ ಸಮಾನತೆ ಬರುವವರೆಗೂ ಮೀಸಲಾತಿ ಇರಲೇಬೇಕು ಎಂದರು.

ಸಂವಿಧಾನ ರಚನೆಗೆ ಕರಡು ಸಮಿತಿ ಅಧ್ಯಕ್ಷ ಅಂಬೇಡ್ಕರ್, ಸಂವಿಧಾನ ರಚನಾ ಸಮಿತಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ಹಲವಾರು ದೇಶಗಳಿಗೆ ಭೇಟಿ ನೀಡಿ, ಪುಸ್ತಕಗಳನ್ನು ಅಧ್ಯಯನ ಮಾಡಿ, ವರ್ಷಾನುಗಟ್ಟಲೆ ಚರ್ಚಿಸಿದ್ದಾರೆ. ಆ ಶ್ರಮವನ್ನು ನಾವು ಅರಿಯಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು