ಶುಕ್ರವಾರ, ಮೇ 20, 2022
25 °C

ಪಂಚಮಸಾಲಿ ಪಾದಯಾತ್ರೆ: ಮೂತ್ರ ಪರೀಕ್ಷೆ ವಿಚಾರವಾಗಿ ನಾಯಕರ ನಡುವೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಪ್ರವರ್ಗ ‘2ಎ’ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಪಾದಯಾತ್ರೆ ಶುಕ್ರವಾರ ನಗರದ ಸಿದ್ಧಗಂಗಾ ಮಠದಲ್ಲಿ ವಾಸ್ತವ್ಯ ಹೂಡಲಿದೆ. ಗುರುವಾರ ರಾತ್ರಿ ಕೋರದ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಪಾದಯಾತ್ರಿಗಳು ವಾಸ್ತವ್ಯ ಹೂಡಿದ್ದರು.

ನಿರಂತರವಾಗಿ 590 ಕಿ.ಮೀ ಪಾದಯಾತ್ರೆ ಕ್ರಮಿಸಿದ್ದೇವೆ. ಬುಧವಾರ ರಾತ್ರಿ ಪಂಚಮಸಾಲಿ ಸಮುದಾಯದ ಸಚಿವರು, ಶಾಸಕರು ನಡೆಸಿದ ಸಭೆ ಸಮುದಾಯದ ಇತಿಹಾಸದಲ್ಲೇ ಮೊದಲ ಬಾರಿ ಒಗ್ಗಟ್ಟು ಪ್ರದರ್ಶಿಸಲು ವೇದಿಕೆ ಆಯಿತು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮೂತ್ರ ಪರೀಕ್ಷೆ: ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಸಚಿವ ಸಿ.ಸಿ.ಪಾಟೀಲ್ ಮತ್ತು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಕುರಿತು ಗುರುವಾರದ ಪಾದಯಾತ್ರೆಯಲ್ಲಿ ಸಚಿವರ ವಿರುದ್ಧ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದರು.

‘ಆಮರಣಾಂತ ಉಪವಾಸ ಮಾಡಿದರೆ ಮೂತ್ರ ಪರೀಕ್ಷೆ ಮಾಡಿಸುತ್ತೇನೆ ಎಂದು ಸಿ.ಸಿ.ಪಾಟೀಲ್ ಸಭೆಯಲ್ಲಿ ಹೇಳಿದರು. ಸರ್ಕಾರದ ಪರವಾದ ಸಚಿವರಾಗಿ ಸಭೆಯಲ್ಲಿ ಮಾತನಾಡಿದ ರೀತಿ ಸರಿ ಇರಲಿಲ್ಲ. ನಮ್ಮನ್ನು ಪರೀಕ್ಷೆ ಮಾಡಲಿ, ಪೂಜ್ಯರ ಮೂತ್ರವನ್ನೂ ಪರೀಕ್ಷೆ ಮಾಡಲಿ.‌ ಮುಂದೆ ಸಮಾಜದವರೇ ಅವರ ಮೂತ್ರ ಪರೀಕ್ಷಿಸುವರು. ಆ ಕಾಲ ಬರುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಸಭೆಯಲ್ಲಿ ಈ ರೀತಿ ಸಚಿವರು ಮಾತನಾಡುವುದು ಎಷ್ಟು ಸರಿ. ನಮ್ಮದು ಪಕ್ಷಾತೀತ ಹೋರಾಟ. ನಮಗೆ ಮೀಸಲಾತಿ ಬೇಕು ಅಷ್ಟೇ’ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು