ಸೋಮವಾರ, ಮೇ 23, 2022
30 °C

ಮಧುಮೇಹ ನಿಯಂತ್ರಿಸಲು ಡಾ.ಎಚ್‌.ವಿ. ರಂಗಸ್ವಾಮಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸಕಾಲದಲ್ಲಿ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಮಧುಮೇಹದಿಂದ ಆಗುವಂತಹ ದುಷ್ಪರಿಣಾಮಗಳನ್ನು ತಡೆಯಲು ಮುಂದಾಗಬೇಕು ಎಂದು ಬೆಂಗಳೂರಿನ ಅಸಾಂಕ್ರಾಮಿಕ ರೋಗಗಳ ವಿಭಾಗದ ರಾಜ್ಯ ಕೋಶದ ಉಪ ನಿರ್ದೇಶಕ ಡಾ.ಎಚ್‌.ವಿ. ರಂಗಸ್ವಾಮಿ ಸಲಹೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಏರ್ಪಡಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಜನರ ರಕ್ತ ಪರೀಕ್ಷೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

30 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಇದರಿಂದ ಮುಂದಾಗುವಂತಹ ದುಷ್ಪರಿಣಾಮಗಳನ್ನು ತಡೆಯಬಹುದಾಗಿದೆ. ಮಧುಮೇಹ ಬಂದರೆ ಕಣ್ಣು, ಮೂತ್ರಪಿಂಡ, ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರತಿ ವರ್ಷ ನ. 14ರಂದು ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ. ಈ ಬಾರಿ ‘ಮಧುಮೇಹಕ್ಕೆ ಮತ್ತು ಮಧುಮೇಹದ ಆರೈಕೆಗೆ ಅವಕಾಶ ಕಲ್ಪಿಸಬೇಕು’ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಘೋಷವಾಕ್ಯವಾಗಿದೆ ಎಂದರು.

ಮಧುಮೇಹ ನಿಯಂತ್ರಣಕ್ಕಾಗಿ ಜನಜಾಗೃತಿ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ನ. 14ರಿಂದ 20ರ ವರೆಗೆ ಒಂದು ವಾರ ಕಾಲ ಪೂರ್ವಭಾವಿ ತಪಾಸಣೆ ಮೂಲಕ ರೋಗ ಪತ್ತೆ ಹಚ್ಚುವ ಸಪ್ತಾಹ ನಡೆಸಲಾಗುತ್ತಿದೆ. 30 ವರ್ಷ ಮೇಲ್ಪಟ್ಟವರನ್ನು ಮಧುಮೇಹ ತಪಾಸಣೆಗೆ ಒಳಪಡಿಸಬೇಕಾಗಿದೆ. ಕ್ಯಾನ್ಸರ್, ಮಧುಮೇಹ, ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ತಿಳಿಸಿದರು.

ಮಧುಮೇಹ ಪರೀಕ್ಷೆ ಮಾಡಿಸಿ ಕೊಳ್ಳುವ ಮೂಲಕ ಸಮುದಾಯದಲ್ಲಿ ಉಂಟಾಗುವ ಸಾವು, ನೋವುಗಳನ್ನು ತಡೆಯಲು ಆರೋಗ್ಯ ಇಲಾಖೆಯೊಂದಿಗೆ ಜನಸಾಮಾನ್ಯರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‍ದಾಸ್, ‘ಮಧುಮೇಹವನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದಾಗಿದೆ. ಆರೋಗ್ಯ ಶೈಲಿ, ನಮ್ಮ ಹವ್ಯಾಸದ ಮೇಲೆ ಈ ಕಾಯಿಲೆ ಬರುವುದು ಅವಲಂಬಿತವಾಗಿರುತ್ತದೆ. ಜನರು ದಿನನಿತ್ಯ ಜೀವನದಲ್ಲಿ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಿದರೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದು’ ಎಂದರು.

ಭಾರತ ಮಧುಮೇಹದ ರಾಜಧಾನಿ ಎಂದು ಹೆಸರಾಗಿದೆ. ದೇಶದಲ್ಲಿ ಮಧುಮೇಹ ತುಂಬಾ ಜಾಸ್ತಿಯಾಗುತ್ತಿದೆ. ಮಧುಮೇಹ ನಿಯಂತ್ರಣ ಮಾಡದೇ ಇರುವುದರಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಮುಂದಿನ 7 ದಿನಗಳ ಕಾಲ ಜಿಲ್ಲೆಯಲ್ಲಿ 30 ವರ್ಷ ತುಂಬಿದವರಿಗೆ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಯಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿ ಇದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಡಾ.ಮಂಜುನಾಥ ಗುಪ್ತಾ, ಡಾ.ನಾಗರಾಜ ಪಾಟೀಲ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು