ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ರೈತರ ಸಾಯಿಸಿದ ಸರ್ಕಾರ ಬೇಕೆ?: ಪರಮೇಶ್ವರ

ಕುಂಚಿಟಿಗ ಒಕ್ಕಲಿಗ ಮುಖಂಡರ ಸಭೆಯಲ್ಲಿ ಪರಮೇಶ್ವರ ಹೇಳಿಕೆ
Published 17 ಏಪ್ರಿಲ್ 2024, 14:49 IST
Last Updated 17 ಏಪ್ರಿಲ್ 2024, 14:49 IST
ಅಕ್ಷರ ಗಾತ್ರ

ತುಮಕೂರು: ‘ಲೋಕಸಭಾ ಚುನಾವಣೆಯ ನಂತರ ರಾಜ್ಯ ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭರವಸೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ಕುಂಚಿಟಿಗ ಒಕ್ಕಲಿಗ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗೆ ಕಾಂಗ್ರೆಸ್‌ ಬೆಂಬಲಿಸಿ, ಜಿಲ್ಲೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕು. ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಯಾವುದೇ ಪ್ರಯೋಜನ ಆಗಿಲ್ಲ. ರಸಗೊಬ್ಬರ, ಡೀಸೆಲ್‌, ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ನೀಡಿಲ್ಲ. ಬೆಂಬಲ ಬೆಲೆಗೆ ಹೋರಾಟ ಮಾಡುತ್ತಿದ್ದ 300 ಜನ ರೈತರು ಸಾವನ್ನಪ್ಪಿದರು. ಇಂತಹ ಸರ್ಕಾರ ಮತ್ತೆ ಬೇಕೇ? ಎಂದು ಪ್ರಶ್ನಿಸಿದರು.

ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ‘ಪ್ರಸ್ತುತ ಸನ್ನಿವೇಶದಲ್ಲಿ ರಾಜಕಾರಣಿ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ. ಹಣದ ರಾಜಕೀಯ ನೋಡಿದರೆ ಹೇಸಿಗೆಯಾಗುತ್ತಿದೆ. ಘನತೆ, ಗೌರವ ಇಟ್ಟುಕೊಂಡವರು ರಾಜಕೀಯಕ್ಕೆ ಬರಲು‌ ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.

ಎಲ್ಲ ಪಕ್ಷದಲ್ಲಿ ಹತ್ತು, ಹದಿನೈದು ಜನ ನಾಯಕರು ತಮ್ಮ ಬಂಧುಗಳಿಗೆ ಟಿಕೆಟ್‌ ಕೊಡಿಸಿರುವುದು ನೋಡಿದರೆ ಪ್ರಜಾಪ್ರಭುತ್ವ ಬುಡ ಅಲ್ಲಾಡುತ್ತಿದ್ದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಹಾಗೆ ನೋಡಿದರೆ ಮುರಳೀಧರ್ ಹಾಲಪ್ಪ, ಸಂಜಯ್‌ ಏನು ತಪ್ಪು ಮಾಡಿದ್ದರು. ಆದರೂ ತುಮಕೂರಿನಲ್ಲಿ ಒಬ್ಬ ಪ್ರಜ್ಞಾವಂತ ವ್ಯಕ್ತಿಗೆ ಅವಕಾಶ ನೀಡಿದ್ದಾರೆ. ಕುಂಚಿಟಿಗ ಸಮಾಜ ಎಸ್‌.ಪಿ.ಮುದ್ದಹನುಮೇಗೌಡ ಜತೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಮುದ್ದಹನುಮೇಗೌಡರಿಗೆ ನಾನು ಟಿಕೆಟ್‌ ಕೊಡಿಸಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಭಿನ್ನಮತ ಇಲ್ಲದೆ ಎಲ್ಲರು ಒಂದಾಗಿ ಅವರ ಹೆಸರನ್ನು ಅಂತಿಮ ಮಾಡಲಾಗಿದೆ. ಅವರನ್ನು ಆಯ್ಕೆ ಮಾಡಿದರೆ ಮೀಸಲಾತಿ, ನೀರಾವರಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ಜಿಲ್ಲೆಯ ಪರ ಧ್ವನಿ ಎತ್ತುತ್ತಾರೆ’ ಎಂದು ಕೇಳಿಕೊಂಡರು.

ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ‘ನಮ್ಮ ಸಮುದಾಯದಲ್ಲೂ ಅನೇಕ ಜನ ಮೀರ್‌ಸಾದಿಕ್‌ ಇದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ.‌ ನಾವೆಲ್ಲ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ಕೈ ಕಟ್ಟಿ ನಿಂತುಕೊಳ್ಳುವಂತೆ ಮಾಡುತ್ತಾರೆ. ಎಲ್ಲರು ಎಚ್ಚರಿಕೆಯಿಂದ ಇರಬೇಕು. ವೀರಶೈವ ಸಮುದಾಯದ ಶೇ 99ರಷ್ಟು ಜನ ಅವರದ್ದೇ ಸಮುದಾಯದ ನಾಯಕರನ್ನು ಬೆಂಬಲಿಸುತ್ತಾರೆ. ನಿಮಗೇನು ದೊಡ್ಡರೋಗ. ನಾವೆಲ್ಲ ಮುದ್ದಹನುಮೇಗೌಡ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದಿಂದ ಸಮುದಾಯಕ್ಕೆ ಏನಾದರೂ ಪ್ರಯೋಜನ ಆಗಿದೆಯೇ? ಈಗ ಮಗ, ಅಳಿಯ, ಮೊಮ್ಮಗನಿಗೆ ಟಿಕೆಟ್‌ ನೀಡಿದ್ದಾರೆ. ಕೋಲಾರ ಮೀಸಲು ಕ್ಷೇತ್ರ ಆಗದಿದ್ದರೆ ಸೊಸೆಯನ್ನು ಕಣಕ್ಕೆ ಇಳಿಸುತ್ತಿದ್ದರು. ಈಗ ತುಮಕೂರಿಗೆ ಬಂದು ಮುದ್ದಹನುಮೇಗೌಡ ಅವರನ್ನು ಸೋಲಿಸಿ ಎಂದು ಹೇಳುತ್ತಿದ್ದಾರೆ. ಮೇಲೇಳಲು ಆಗದಿದ್ದರೂ ಮೂರು ದಿನ ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ‘ದಾರಿ ತಪ್ಪಿದ ಮಗ’ ಆಗಿದ್ದಾರೆ ಎಂದು ಟೀಕಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಮುಖಂಡ ಎನ್.ಗೋವಿಂದರಾಜು, ಕುಂಚಿಟಿಗ ಒಕ್ಕಲಿಗ ಸಮುದಾಯದ ಮುಖಂಡರಾದ ಚೌಡಪ್ಪ, ತುಂಗೋಟಿ ರಾಮಣ್ಣ, ಸುನಂದಮ್ಮ, ಕಾಮರಾಜ್‌, ಕುಮಾರ್, ಜಿ.ಎನ್.ಮೂರ್ತಿ, ಮಹಾಲಿಂಗಪ್ಪ, ಸುವರ್ಣಮ್ಮ, ನೇತಾಜಿ ಶ್ರೀಧರ್, ನಾಗೇಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು.

ತುಮಕೂರಿನಲ್ಲಿ ಬುಧವಾರ ನಡೆದ ಕುಂಚಿಟಿಗ ಒಕ್ಕಲಿಗ ಮುಖಂಡರ ಸಭೆಯಲ್ಲಿ ಕುಂಚಿಟಿಗರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು
ತುಮಕೂರಿನಲ್ಲಿ ಬುಧವಾರ ನಡೆದ ಕುಂಚಿಟಿಗ ಒಕ್ಕಲಿಗ ಮುಖಂಡರ ಸಭೆಯಲ್ಲಿ ಕುಂಚಿಟಿಗರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು

ಒಕ್ಕಲಿಗರೇ ಕೈ ಹಿಡಿಯದಿದ್ದರೆ ಹೇಗೆ?: ಮುದ್ದಹನುಮೇಗೌಡ ‘ಕುಂಚಿಟಿಗರಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಕಲ್ಪಿಸುವ ಬಗ್ಗೆ ಈ ಹಿಂದೆ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದೆ. ಮತ್ತೊಮ್ಮೆ ಅವಕಾಶ ಕೊಟ್ಟರೆ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ‌ ಕೊಂಡೊಯ್ಯುವ ಕೆಲಸ ಮಾಡುತ್ತೇನೆ. ನಿಮ್ಮ ನಂಬಿಕೆ ಭರವಸೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ. ನೀವೇ ನನ್ನ ಕೈ ಹಿಡಿಯದಿದ್ದರೆ ಯಾರನ್ನು ಕೇಳಲಿ?’ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಭಾವನಾತ್ಮಕವಾಗಿ ಮಾತನಾಡಿದರು. ಕಳೆದ ಬಾರಿ ಆಯ್ಕೆಯಾದಾಗ ಸಮುದಾಯದ ಹಾಸ್ಟೆಲ್‌ಗಳಿಗೆ ಅಗತ್ಯ ಸೌಲಭ್ಯ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮುದಾಯದ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಮುದಾಯಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದರು. ‘2019ರ ಚುನಾವಣೆಯಲ್ಲಿ ದೇವೇಗೌಡರ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೆ ಅವರ ಪರ ಮತ ಕೇಳಿದ್ದೆ. ಅವರು ಕನಿಷ್ಠ ಒಂದು ಕರೆ ಮಾಡಿ ನನ್ನ ಹತ್ತಿರ ಮಾತನಾಡಲಿಲ್ಲ. ಈಗ ನಾನೇ ಅವರನ್ನು ಸೋಲಿಸಿದ್ದು ಎಂದು ಆರೋಪ ಮಾಡುತ್ತಿದ್ದಾರೆ. ಮಾಡದಿರುವ ತಪ್ಪಿಗೆ ಆರೋಪ ಮಾಡಿದರೆ ಸಹಿಸಿಕೊಳ್ಳುವುದಿಲ್ಲ. ನಾನು ನನ್ನ ಸಮಾಜದ ನಾಯಕನಿಗೆ ದ್ರೋಹ ಮಾಡುವವನಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಬಿಸಿ ಮೀಸಲಾತಿಗೆ ಆಗ್ರಹ

ಸಭೆಯಲ್ಲಿ ಕುಂಚಿಟಿಗ ಸಮುದಾಯದ ಮುಖಂಡರು ಮಾತನಾಡುವಾಗಲೇ ವೇದಿಕೆ ಮುಂಭಾಗ ಕುಳಿತಿದ್ದ ಮುಖಂಡರು ‘ಕುಂಚಿಟಿಗರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಭರವಸೆ ನೀಡಬೇಕು’ ಎಂದು ಒತ್ತಾಯಿಸಿದರು. ಇದರಿಂದ ಕೆಲ ಕಾಲ ಗೊಂದಲ ಉಂಟಾಯಿತು. ‘ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು. ಸಮುದಾಯದ ಜನರು ಹೆಚ್ಚಿರುವ ಕಡೆಗಳಲ್ಲಿ ಟಿಕೆಟ್‌ ತಪ್ಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಮುಖಂಡ ಶಿವಕುಮಾರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT