ಶುಕ್ರವಾರ, ಏಪ್ರಿಲ್ 3, 2020
19 °C

ಸೂರಿಗಾಗಿ ಕೋಟಿ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಾಗರಿಕರ ವಸತಿ ಹಕ್ಕಿಗಾಗಿ ಬಳ್ಳಾರಿಯಿಂದ ಆರಂಭವಾಗಿರುವ ‘ಸೂರಿಗಾಗಿ ಕೋಟಿ ಹೆಜ್ಜೆ’ ಕಾಲ್ನಡಿಗೆ ಜಾಥಾ ಮಾರ್ಚ್‌ 17ರಂದು ಶಿರಾ ತಾಲ್ಲೂಕು ಗೌಡಿಗೆರೆ ಹೋಬಳಿ ಡ್ಯಾಗೇರಹಳ್ಳಿಗೆ ಬರಲಿದೆ ಎಂದು ಸಿಪಿಐ ರಾಜ್ಯ ಮುಖಂಡ ಎನ್.ಶಿವಣ್ಣ ಹೇಳಿದರು.

ಸೂರಿಲ್ಲದ ಕುಟುಂಬಗಳಿಗೆ ಸೂರು ಕಲ್ಪಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಆದರೆ ಸರ್ಕಾರಗಳು ಜನರ ವಸತಿ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಸತಿಗೆ ಆಗ್ರಹಿಸಿ ನಡೆಯುತ್ತಿರುವ ಈ ಜಾಥಾ ಜಿಲ್ಲೆಯ ವಿವಿಧೆಡೆ ಮಾರ್ಚ್‌ 17ರಿಂದ 28ರ ವರೆಗೆ ಸಂಚರಿಸಲಿದೆ. ನಂತರ ಮಾರ್ಚ್‌ 31ರಂದು ಬೆಳಿಗ್ಗೆ 10ಕ್ಕೆ ನೆಲಮಂಗಲದ ಗೊಲ್ಲಹಳ್ಳಿಯಲ್ಲಿ ರಾಜ್ಯ ಸಮಾವೇಶ ನಡೆಸಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಸತಿ ಯೋಜನೆಯ ಸಹಾಯ ಧನವನ್ನು ಕನಿಷ್ಠ ₹5 ಲಕ್ಷಕ್ಕೆ ಏರಿಸಬೇಕು. ಎಲ್ಲಾ ವಸತಿ ರಹಿತರಿಗೆ ಸೂರು ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಈ ಜಾಥಾದಲ್ಲಿ ಜಿಲ್ಲೆಯ ವಸತಿ ರಹಿತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಲಾಕರ್ ಓಪನ್: ನಿವೇಶನ ರಹಿತರು ಮತ್ತು ವಸತಿ ರಹಿತರು ಕಾನೂನುಬದ್ಧ ಹೋರಾಟ ಆರಂಭಿಸಿದ ನಂತರ ರಾಜ್ಯ ಬಿಜೆಪಿ ಸರ್ಕಾರ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರು ಅರ್ಜಿ ಸಲ್ಲಿಸಲು ಲಾಕರ್ ಓಪನ್ ಮಾಡಲು ಆದೇಶಿಸಿದೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ತಾತ್ಕಾಲಿಕ ಜಯವಾಗಿದೆ ಎಂದರು.

ಜಿಲ್ಲಾ ಸಿಪಿಐ ಕಾರ್ಯದರ್ಶಿ ಗಿರೀಶ್, ‘ವಸತಿಗಾಗಿ ಅರ್ಜಿ ಸಲ್ಲಿಸುವ ಕುಟುಂಬ ಬಿಪಿಎಲ್‍ ಕಾರ್ಡ್ ಹೊಂದಿರಬೇಕು, ಇದುವರೆಗೂ ಯಾವುದೇ ವಸತಿ ಯೋಜನೆಯಲ್ಲಿ ಫಲಾನುಭವಿ ಆಗಿರಬಾರದು. ಕೇವಲ ₹20 ಸದಸ್ಯತ್ವ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು’ ಎಂದರು.

ಗೋಷ್ಠಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಮುಖಂಡರಾದ ಶಶಿಕಾಂತ್, ಕಲಾವತಿ, ಸತ್ಯನಾರಾಯಣ, ಶಬ್ಬಿರ್ ಇದ್ದರು.

ದಿಕ್ಕುತಪ್ಪಿಸುತ್ತಿರುವ ಮುಖ್ಯಮಂತ್ರಿ

‘ರಾಜ್ಯ ಸರ್ಕಾರ ವಸತಿ ರಹಿತರಿಗೆ ₹2,500 ಕೋಟಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ ಎಲ್ಲಾ ವಸತಿ ರಹಿತರಿಗೆ ವಸತಿ ನಿರ್ಮಿಸಲು ಕನಿಷ್ಠ ₹28 ಸಾವಿರ ಕೋಟಿ ಬೇಕಾಗುತ್ತದೆ. ಮುಖ್ಯಮಂತ್ರಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಗಿರೀಶ್ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)