ಮಂಗಳವಾರ, ಜನವರಿ 26, 2021
20 °C
ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಮೂಲಸೌಲಭ್ಯ

ಸೊರಗುತ್ತಿದೆ ಪೂರ್ವ ಪ್ರಾಥಮಿಕ ಶಿಕ್ಷಣ

ವಿ.ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಚಿಕ್ಕಮಕ್ಕಳ ಪೋಷಣೆ ಮತ್ತು ಆರೈಕೆಗೆ ಉತ್ತೇಜನ ನೀಡುವ ಅಂಗನವಾಡಿ ಕೇಂದ್ರಗಳು ಹಲವು ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿವೆ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಸುಧಾರಣೆಗೆ ಸರ್ಕಾರ ಮುಂದಾಗಬೇಕಿದೆ.

ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಪ್ರಮುಖ ಕೇಂದ್ರಗಳಾಗಿವೆ. ಗರ್ಭಿಣಿಯರು, ಬಾಣಂತಿಯರು, ಚಿಕ್ಕಮಕ್ಕಳ ಪೋಷಣೆಗೆ ಸಹಕಾರಿಯಾಗಿವೆ. ಪೌಷ್ಟಿಕ ಆಹಾರ ನೀಡಿ ಆರೋಗ್ಯದ ಕಾಳಜಿ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವುಗಳ ಪಾತ್ರ ದೊಡ್ಡದು.

ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳು ಗ್ರಾಮ ಪಂಚಾಯಿತಿಯ ಸಮುದಾಯ ಭವನ, ಸರ್ಕಾರಿ ಶಾಲೆಗಳ ಅಡುಗೆ ಕೊಠಡಿ ಹಾಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಸಾವಿರ ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ತೆರೆಯುವಂತೆ ನಿಯಮ ರೂಪಿಸಲಾಗಿದೆ. ನಿಗದಿತ ಪ್ರದೇಶದಲ್ಲಿ ನಿವೇಶನ ಲಭ್ಯತೆಯ ಸಮಸ್ಯೆ ಎದುರಾಗುತ್ತಿದೆ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮರ್ಥನೆ.

ಇಂತಹ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಟ್ಟಡಕ್ಕೆ ಕಾಂಪೌಂಡ್‍ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್‍ ಸಂಪರ್ಕ, ಸುಸಜ್ಜಿತವಾದ ಅಡುಗೆ ಕೋಣೆ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ.

ಚಳ್ಳಕೆರೆ ತಾಲ್ಲೂಕಿನ ಮನುಮೈನಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸುಮಾರು 20 ವರ್ಷದ ಹಳೆಯ ಕಟ್ಟಡವಿದೆ. ಮಳೆಗಾಲದಲ್ಲಿ ಅಂಗನವಾಡಿ ಕಟ್ಟಡ ಸೋರುತ್ತದೆ. ಇದರಿಂದ ಆಹಾರ ಧಾನ್ಯಗಳು, ಪುಸ್ತಕಗಳು, ದಾಖಲೆಗಳು ಮಳೆ ನೀರಿನಲ್ಲಿ ಹಾಳಾಗುತ್ತಿವೆ. ಇದೇ ಗ್ರಾಮದ ಮತ್ತೊಂದು ಕೇಂದ್ರದಲ್ಲಿ 10 ಅಡಿ ಉದ್ದ 10 ಅಡಿ ಅಗಲದ ಕೊಠಡಿಯ ಒಂದು ಮೂಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಲಾಗುತ್ತದೆ. ಮತ್ತೊಂದು ಮೂಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಇರುತ್ತದೆ. ಇನ್ನುಳಿದ ಸ್ಥಳದಲ್ಲಿ 38 ಮಕ್ಕಳನ್ನು ಕೂರಿಸಿ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಿಸುವ ಸ್ಥಿತಿ ಇದೆ.

ಇಲ್ಲಿನ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಶೌಚಕ್ಕೆ ಬೀದಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದರಿಂದ ಮಕ್ಕಳ ಶುಚಿತ್ವ ಮತ್ತು ಪಾಲನೆಗೆ ಅಂಗನವಾಡಿ ಶಿಕ್ಷಕಿಯರು ಹರಸಾಹಸ ಪಡುತ್ತಿದ್ದಾರೆ. ಮಲ್ಲೇಬೋರನಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರವು 22 ವರ್ಷಗಳ ಹಳೆಯ ಕಟ್ಟಡದಲ್ಲಿದೆ. ಕಟ್ಟಡ ಬಿದ್ದುಹೋಗುವ ಸ್ಥಿತಿಯಲ್ಲಿದೆ. ಜತಗೆ ಸರ್ಕಾರಿ ಶಾಲೆಯ ಆವರಣದ ಕಿಷ್ಕಿಂಧೆಯಂಥ ಜಾಗದಲ್ಲಿರುವುದರಿಂದ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ.

ಹಲವು ಅಂಗನವಾಡಿ ಕೇಂದ್ರಗಳು ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಶಾಲೆ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಸ್ವಂತ ಕಟ್ಟಡಕ್ಕೆ ಬುನಾದಿ ಹಾಕಲಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಿರೇಹಳ್ಳಿ ಮತ್ತು ಬೇಡರೆಡ್ಡಿಹಳ್ಳಿ ವೃತ್ತದಲ್ಲಿಯೂ ಇದೇ ಸ್ಥಿತಿ ಇದೆ.

ಮಕ್ಕಳಿಗೆ ಮನೆಯಲ್ಲೇ ‘ಕಲಿ–ನಲಿ’: ಕೋವಿಡ್‌ ಕಾಣಿಸಿಕೊಂಡ ಬಳಿಕ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ. ಬದಲಿಗೆ ಮನೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರೂಪಿಸಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಲಾಗಿದೆ. ಕೇಂದ್ರದ ವ್ಯಾಪ್ತಿಯ ಮಕ್ಕಳ ಗುಂಪುಗಳನ್ನು ರಚಿಸಲಾಗಿದೆ. ಪೋಷಕರಿಗೆ ತರಬೇತಿ ನೀಡಲಾಗಿದ್ದು, ನೆರೆಯ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಲಾಗುತ್ತಿದೆ. ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮೇಲ್ವಿಚಾರಕರು ಆಗಾಗ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಸಮುದಾಯ ಆಧಾರಿತ ಶಿಕ್ಷಣ ಕೂಡ ಜ. 1ರಿಂದ ಆರಂಭವಾಗಿದೆ. ಮೊದಲ ಹಾಗೂ ಮೂರನೇ ವಾರದ ಶುಕ್ರವಾರ ಸಮುದಾಯ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಅಪೌಷ್ಟಿಕತೆ, ಸುಪೋಷಣ, ಶಾಲಾ ಪೂರ್ವ ಶಿಕ್ಷಣದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

***

198 ಕೇಂದ್ರಗಳಿಗೆ ಇಲ್ಲ ಕಟ್ಟಡ

ಜಿಲ್ಲೆಯಲ್ಲಿ 2,333 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ 198 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. 1,754 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಶಾಲೆ, ಸಮುದಾಯ ಭವನ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

‘ಈಗಾಗಲೇ 56 ನಿವೇಶನಗಳು ಲಭ್ಯವಾಗಿದ್ದು, ಪ್ರಧಾನ ಕಚೇರಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಗೆ ಕೋರಿಕೆ ಸಲ್ಲಿಸಲಾಗಿದೆ. ಜಿಲ್ಲಾ ಖನಿಜ ನಿಧಿಯಿಂದಲೂ ಅನುದಾನಕ್ಕೆ ಮನವಿ ಮಾಡಿಕೊಂಡಿದ್ದೇವೆ. ನಗರ ಪ್ರದೇಶದ 142 ಕೇಂದ್ರಗಳಿಗೆ ಕಟ್ಟಡದ ಸಮಸ್ಯೆ ಇದೆ. ನಿವೇಶನದ ಲಭ್ಯತೆ ಕಡಿಮೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ನಗರ ಸ್ಥಳೀಯ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್‌ ಮಾಹಿತಿ ನೀಡಿದ್ದಾರೆ.

***

ಕೆಲಸದ ಹೊರೆಗೆ ನಲುಗಿದ ಸಿಬ್ಬಂದಿ

ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಆರು ವರ್ಷದ ಒಳಗಿನ ಮಕ್ಕಳಿಗೆ ಔಪಚಾರಿಕ ಶಿಕ್ಷಣ ನೀಡುವ ಉದ್ದೇಶದಿಂದ ನಿಯೋಜನೆಗೊಂಡ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯದೊತ್ತಡಕ್ಕೆ ನಲುಗಿ ಹೋಗಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವ ಬದಲು ಅನ್ಯಕಾರ್ಯದ ಹೊರೆ ಹೊರಿಸಲಾಗಿದೆ.

ಮೂರರಿಂದ ಆರು ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಅಂಗನವಾಡಿ ವ್ಯವಸ್ಥೆ ರೂಪಿಸಿದೆ. ಹುಟ್ಟಿದ ಮಗುವಿನಿಂದ ಶಾಲೆಯ ಮೆಟ್ಟಿಲು ತುಳಿಯುವ ಮಕ್ಕಳವರೆಗಿನ ಮಾಹಿತಿಯನ್ನು ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೆರವು ಪಡೆಯಲಾಗುತ್ತಿತ್ತು. ದಿನ ಕಳೆದಂತೆ ಕೆಲಸದ ಪಟ್ಟಿ ಬೆಳೆದಿದ್ದು, ಮೂಲ ಕಾರ್ಯದಿಂದ ವಿಮುಖರಾಗುವಂತೆ ಮಾಡಿದೆ.

ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಗುರುತಿಸುವ ಕಾರ್ಯವನ್ನು ಅಂಗವನಾಡಿ ಸಿಬ್ಬಂದಿಗೆ ನೀಡಲಾಗಿದೆ. ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ, ಚುಚ್ಚುಮದ್ದು ನೀಡುವ ಹೊಣೆ ವಹಿಸಲಾಗಿದೆ. ಜನನ–ಮರಣ ನೋಂದಣಿ, ಸಮುದಾಯ ಸಮೀಕ್ಷೆ, ಸರ್ಕಾರಿ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವುದು, ಕುಟುಂಬಗಳ ಮಾಹಿತಿ ಸಂಗ್ರಹ, ಅಪೌಷ್ಟಿಕತೆ ನಿವಾರಣೆ, ಲಸಿಕೆ ಅಭಿಯಾನ, ಭಾಗ್ಯಲಕ್ಷ್ಮಿ, ಮಾತೃವಂದನಾ ಕಾರ್ಯಕ್ರಮ, ಆರೋಗ್ಯ ಇಲಾಖೆ ಸಿಬ್ಬಂದಿಗೆ ನೆರವು ನೀಡುವುದು... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

‘ಮಹಿಳೆಯರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕೆಲಸ ಮಾಡುವಲ್ಲಿ ಖುಷಿ ಇದೆ. ಇದರೊಂದಿಗೆ ಕಂದಾಯ, ಆರೋಗ್ಯ, ಶಿಕ್ಷಣ ಇಲಾಖೆಯ ಜವಾಬ್ದಾರಿಗಳು ಹೊರೆಯಾಗುತ್ತಿವೆ. ಶಾಲೆ ತೊರೆದ 18 ವರ್ಷದ ಒಳಗಿನ ಮಕ್ಕಳ ಮಾಹಿತಿಯನ್ನು ಗ್ರಾಮ ಪಂಚಾಯಿತಿಯಿಂದ ಕೇಳಲಾಗಿದೆ. ಇದಕ್ಕೆ ರೂಪಿಸಿದ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ನಿಗದಿತ ಗುರಿ ಸಾಧನೆ ಮಾಡದವರಿಗೆ ಗೌರವಧನ ನೀಡುವುದಿಲ್ಲ ಎಂಬ ಬೆದರಿಕೆ ಹಾಕಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ ಉಪಾಧ್ಯಕ್ಷೆ ಎಸ್‌.ಭಾಗ್ಯಮ್ಮ.

ಕೆಲಸಕ್ಕೆ ತಕ್ಕ ವೇತನ ಸಿಬ್ಬಂದಿಗೆ ಸಿಗುತ್ತಿಲ್ಲ. ಕಾರ್ಯಕರ್ತೆಯರಿಗೆ ₹ 10 ಸಾವಿರ ಹಾಗೂ ಸಹಾಯಕಿಯರಿಗೆ ₹ 5 ಸಾವಿರ ಗೌರವಧನ ನಿಗದಿ ಮಾಡಲಾಗಿದೆ. ಸರ್ಕಾರವೇ ರೂಪಿಸಿದ ಕನಿಷ್ಠ ವೇತನದ ನಿಯಮ ಕೂಡ ಇಲ್ಲಿ ಪಾಲನೆಯಾಗುತ್ತಿಲ್ಲ. ತಿಂಗಳಲ್ಲಿ ನಾಲ್ಕೈದು ಸಭೆ ಕರೆದರೂ ಎರಡು ಬಾರಿಗೆ ಮಾತ್ರ ಭತ್ಯೆ ನೀಡಲಾಗುತ್ತದೆ. ಈ ಭತ್ಯೆಯ ಮೊತ್ತ ₹ 30ರಿಂದ ಹೆಚ್ಚಿಸಿಲ್ಲ. ಕನಿಷ್ಠ ವೇತನ, ಉದ್ಯೋಗ ಭದ್ರತೆ, ಪಿಂಚಣಿ ಸೌಲಭ್ಯಕ್ಕೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈವರೆಗೂ ಸರ್ಕಾರ ಕಣ್ತೆರೆದು ನೋಡಿಲ್ಲ ಎಂಬುದು ಸಿಬ್ಬಂದಿಯ ಆರೋಪ.

***

ಗೌರವಧನದಲ್ಲಿ ಮೊಟ್ಟೆ ಖರೀದಿ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ‘ಮೂರು ತಿಂಗಳಿಗೊಮ್ಮೆ ಗೌರವಧನ ಬರುತ್ತದೆ. ಕೆಲಸಕ್ಕೆ ನೀಡುವ ಧನದಲ್ಲಿ ‘ಮೊಟ್ಟೆ ಭಾಗ್ಯ’ದ ಬಾಕಿ ತೀರಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ...’

ಇದು ಜಿಲ್ಲೆ ಅಂಗನವಾಡಿ ಕಾರ್ಯಕರ್ತೆಯರ ನೋವಿನ ನುಡಿ. ಮೊಟ್ಟೆ ಹಣವನ್ನು ಮಾರುಕಟ್ಟೆ ದರಕ್ಕೆ ತಕ್ಕಂತೆ ನೀಡುವುದಿಲ್ಲ. ಮುಂಚಿತವಾಗಿ ಹಣವನ್ನಾದರೂ ನೀಡಿದಲ್ಲಿ ನಾವು ಚೌಕಾಸಿ ಮಾಡಿ ಖರೀದಿಸುತ್ತೇವೆ. ಉದ್ರಿ ತೆಗೆದುಕೊಳ್ಳುವ ಕಾರಣ ಅಂಗಡಿಯವರು ಹೇಳುವ ದರಕ್ಕೆ ಮೊಟ್ಟೆ ಖರೀದಿಸಬೇಕಿದೆ. ಈ ಹಣವನ್ನು ಪಾವತಿಸಲು ಅಂಗನವಾಡಿ ಕಾರ್ಯಕರ್ತೆಯರು ಪರದಾಡಬೇಕಾಗಿದೆ.

‘ಮೊಳಕಾಲ್ಮುರು ತಾಲ್ಲೂಕಿನಲ್ಲಿ ಎರಡು ತಿಂಗಳ ಮೊಟ್ಟೆ ಹಣ ಬಾಕಿ ಇದೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಸುಮಾರು ಆರು ತಿಂಗಳ ಬಾಕಿ ಉಳಿದುಕೊಂಡಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಸದಸ್ಯರೊಬ್ಬರು ಹೇಳಿದರು.

ಸಾಮಾನ್ಯವಾಗಿ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆಗೆ ಮಾಸಿಕ ಕನಿಷ್ಠ ₹ 5 ಸಾವಿರ ಬೇಕಾಗುತ್ತದೆ. ಕೆಲ ಸಾರಿ ಈ ಬಾಕಿ ತೀರಿಸಲು ಸಂಬಳ ಸಾಲುವುದಿಲ್ಲ. ಅನುದಾನ ಜಿಲ್ಲಾ ಪಂಚಾಯಿತಿಯಿಂದ ತಾಲ್ಲೂಕು ಪಂಚಾಯಿತಿಗೆ, ಅಲ್ಲಿಂದ ಖಜಾನೆಗೆ ನಂತರ ಬ್ಯಾಂಕ್ ಖಾತೆಗೆ ಬರಲು ತಿಂಗಳು ಕಾಲಾವಕಾಶ ಹಿಡಿಯುತ್ತದೆ. ಆದ್ದರಿಂದ ಆನ್‌ಲೈನ್ ಪಾವತಿ ವ್ಯವಸ್ಥೆ ಜಾರಿಗೆ ತರುವುದು ಉತ್ತಮ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಅಭಿಪ್ರಾಯ.

‘ಮೊಳಕಾಲ್ಮುರು ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇದಕ್ಕೆ ಸರ್ಕಾರ ಮಾಸಿಕ ₹ 1,500 ಕೊಡುತ್ತದೆ. ಉಳಿದ ಬಾಡಿಗೆಯನ್ನು ಕಾರ್ಯಕರ್ತೆಯರು ಸಹಾಯಕಿಯರು ಭರಿಸಬೇಕು. ಈಚೆಗೆ ಸರ್ಕಾರ ಬಾಡಿಗೆ ಕೊಡುವುದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆಯಬೇಕಿದೆ. ಸ್ವಂತ ಕಟ್ಟಡಕ್ಕೆ ನಿವೇಶನ ಮಂಜೂರು ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿರುವ ಕೊಠಡಿಗಳನ್ನು ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆಯ ಕಾರ್ಯದರ್ಶಿ ಅರವಿಂದ ಬಾಯಿ ಹೇಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೊರಗಡೆ ಸ್ಥಳ ನೀಡಲಾಗಿದೆ. ವಿದ್ಯುತ್ ಸಂಪರ್ಕ ಅನೇಕ ಕೇಂದ್ರಗಳಿಗೆ ಇಲ್ಲ. ಸಂಪರ್ಕವಿದ್ದರೂ ವಿದ್ಯುತ್‌ ಬಿಲ್‌ ಅನ್ನು ಸಿಬ್ಬಂದಿ ಭರಿಸಬೇಗಿದೆ ಎಂಬ ದೂರುಗಳು ಇವೆ.

***

ಅಂಗನವಾಡಿ ಕೇಂದ್ರಗಳಿಗೆ ಕಟ್ಟಡದ ಸಮಸ್ಯೆ ಎದುರಾಗಿಲ್ಲ. ಬಾಡಿಗೆ ಕಟ್ಟಡ ಪಡೆದು ಕೇಂದ್ರ ನಡೆಸಲಾಗುತ್ತಿದೆ. ನಗರ ಪ್ರದೇಶದ ನಿಗದಿತ ಸ್ಥಳದಲ್ಲಿ ನಿವೇಶನ ಲಭ್ಯವಾಗುತ್ತಿಲ್ಲ.

ರಾಜಾ ನಾಯ್ಕ್‌, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

***

ಅಂಕಿ–ಅಂಶ

* 2,333: ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು 

* 333: ಕಿರು ಅಂಗನವಾಡಿ ಕೇಂದ್ರ

* 2,308: ಜಿಲ್ಲೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು

* 1,945: ಕಾರ್ಯನಿರ್ವಹಿಸುತ್ತಿರುವ ಸಹಾಯಕಿಯರು 

*198: ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳು 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.