ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ತಾಪಮಾನ: ಬಸವಳಿದ ಜನ

40ರ ಗಡಿ ದಾಟಿದೆ ತಾಪಮಾನ, ಮನೆಯಿಂದ ಹೊರ ಬರಲು ಹಿಂದೇಟು
Published 8 ಏಪ್ರಿಲ್ 2024, 4:31 IST
Last Updated 8 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ತುಮಕೂರು: ಬೆಳಗ್ಗೆ 8 ಗಂಟೆಯಿಂದಲೇ ಶುರುವಾಗುವ ಮೈಸುಡುವ ಬಿಸಿಲಿಗೆ ಜಿಲ್ಲೆಯ ಜನ ಬಸವಳಿದಿದ್ದಾರೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಈ ಹಿಂದಿನ ಯಾವ ವರ್ಷವೂ ಕಾಣಿಸಿಕೊಳ್ಳದಷ್ಟು ತಾಪಮಾನ ಈ ಬಾರಿ ದಾಖಲಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40ರ ಗಡಿ ದಾಟಿದೆ. ಬಿಸಿಲಿನ ಜತೆಗೆ ಸೆಕೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮನೆಯ ಒಳಗಡೆ ಇದ್ದರೆ ಸೆಕೆ, ಹೊರ ಬಂದರೆ ಬಿಸಿಲು. ಒಂದು ಹೆಜ್ಜೆ ಮುಂದಿಡಲು ಆಗದಂತೆ ಮಾಡಿದೆ.

ಸಂಜೆ 5 ಗಂಟೆಯಾದರೂ ಬಿಸಿಲಿನ ಝಳ ಕಡಿಮೆಯಾಗುತ್ತಿಲ್ಲ. ಮಧ್ಯಾಹ್ನದ ನಂತರ ರಸ್ತೆಗಳು ಬಿಕೋ ಎನ್ನುತ್ತವೆ. ನಗರದ ವಿವಿಧ ಕಡೆಗಳಲ್ಲಿ ಮಣ್ಣಿನಿಂದ ತಯಾರಾದ ಮಡಿಕೆ, ನೀರಿನ ಬಾಟಲ್‌ಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಜಾಸ್ತಿಯಾಗಿದೆ. ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳ ಸೇವನೆಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಕಳೆದ ವರ್ಷ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿತ್ತು. ಈ ಬಾರಿ ಏಪ್ರಿಲ್‌ ಆರಂಭವಾದರೂ ಮಳೆಯ ಸಿಂಚನವಾಗಿಲ್ಲ. ಜನರು ಬಿಸಿಲಿನಿಂದ ಮುಕ್ತಿ ಪಡೆಯಲು ಮಳೆಗಾಗಿ ಕಾದು ಕುಳಿತಿದ್ದಾರೆ. ಹೆಚ್ಚಿದ ತಾಪಮಾನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ‘ಚರ್ಮದ ಸಮಸ್ಯೆ, ಜ್ವರದ ಪ್ರಕರಣಗಳು ಹೆಚ್ಚಾಗಬಹುದು’ ಎಂದು ವೈದ್ಯರು ಅಂದಾಜಿಸಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

ಬೀದಿ ಬದಿ ವ್ಯಾಪಾರಿಗಳು ಹೈರಾಣ: ಸಾಮಾನ್ಯ ಜನರಿಗಿಂತ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲಿನ ತಾಪ ತುಸು ಹೆಚ್ಚಾಗಿ ತಟ್ಟಿದೆ. ವ್ಯಾಪಾರ ಸರಿಯಾಗಿ ನಡೆಯದೆ ನೆತ್ತಿಯ ಜತೆಗೆ ಹೊಟ್ಟೆಯೂ ಸುಡುವಂತಾಗಿದೆ. ಬಿಸಿಲಿನ ಹೊಡೆತಕ್ಕೆ‌ ಜನ ಮನೆಯಿಂದ ಹೊರ ಬರುತ್ತಿಲ್ಲ. ಇದರಿಂದ ಫುಟ್‌ಪಾತ್‌ನಲ್ಲಿ ವ್ಯಾಪಾರ ನಡೆಸುವವರು ಹೈರಾಣಾಗಿದ್ದಾರೆ.

ಆಯಾ ದಿನದ ವ್ಯಾಪಾರವನ್ನೇ ನಂಬಿ ಬದುಕುವ ನೂರಾರು ಜನರನ್ನು ಬಿಸಿಲು ಸಂಕಷ್ಟಕ್ಕೆ ತಳ್ಳಿದೆ. ಬಿಸಿಲಿನ ಮಧ್ಯೆಯೂ ಚಿಕ್ಕದೊಂದು ಕೊಡೆಯನ್ನು ಸೂರ್ಯನಿಗೆ ಅಡ್ಡ ಇಟ್ಟು ನೆರಳು ಪಡೆಯುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಹಿಂದಿನಂತೆ ವ್ಯಾಪಾರ ಆಗುತ್ತಿಲ್ಲ.

‘ಅಲ್ಪ-ಸ್ವಲ್ಪ ವ್ಯಾಪಾರವಾದರೆ ಸಾಕು ಅಂತ ಬೆಳಗ್ಗೆಯೇ ಬರುತ್ತೇವೆ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಜನ ಬರುತ್ತಿಲ್ಲ. ಬೇಸಿಗೆ ಸಮಯದಲ್ಲಿ ಪ್ರತಿ ಬಾರಿ ಇದೇ ರೀತಿ ಆಗುತ್ತದೆ. ಕಳೆದ ವರ್ಷಕ್ಕಿಂತ ಈ ಸಲ ಬಿಸಿಲು ಜಾಸ್ತಿಯಾಗಿದೆ’ ಎಂದು ರೈಲು ನಿಲ್ದಾಣದ ರಸ್ತೆಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಸೋಮೇಶ್‌ ಪ್ರತಿಕ್ರಿಯೆ ನೀಡಿದರು.

ತುಮಕೂರಿನಲ್ಲಿ ಭಾನುವಾರ ಸಾರ್ವಜನಿಕರೊಬ್ಬರು ಮಣ್ಣಿನ ಮಡಿಕೆ ತೆಗೆದುಕೊಂಡು ಹೋದರು
ತುಮಕೂರಿನಲ್ಲಿ ಭಾನುವಾರ ಸಾರ್ವಜನಿಕರೊಬ್ಬರು ಮಣ್ಣಿನ ಮಡಿಕೆ ತೆಗೆದುಕೊಂಡು ಹೋದರು

ಡೆಂಗಿ ಹೆಚ್ಚಾಗುವ ಆತಂಕ

ಬೇಸಿಗೆ ಸಮಯದಲ್ಲಿ ಜನ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಬೆಳಗ್ಗೆ 11 ಗಂಟೆಯ ನಂತರ ಆಚೆ ಓಡಾಡಬಾರದು. ಶುದ್ಧ ಕುಡಿಯುವ ನೀರಿನ ಸೇವನೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬಿಸಿಲು ಹೀಗೆ ಮುಂದುವರಿದರೆ ಡೆಂಗಿ ಜ್ವರದ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಡಾ.ಚಂದ್ರಶೇಖರ್‌ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT