ಕೊರಟಗೆರೆ: ಪಂಚಾಯತ್‌ರಾಜ್ ಇಲಾಖೆಯ ಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಮೀಸಲಾತಿ ಕೈಬಿಟ್ಟು, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಗುತ್ತಿಗೆದಾರ ಸಂಘದಿಂದ ಪ್ರತಿಭಟನೆ ನಡೆಯಿತು.
ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟು ₹60 ಲಕ್ಷ ಅನುದಾನದ 7 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕೊರಟಗೆರೆ ಎಂಜಿನಿಯರ್ ಮುಷೀರ್, ಮಧುಗಿರಿ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ್ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ. ಕೊರಟಗೆರೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ನೀಡಿರುವ ಮೀಸಲಾತಿ ಅನುದಾನದ ಅಂಕಿ–ಅಂಶದ ಆದೇಶವನ್ನು ಬದಿಗಿಟ್ಟು ಇಬ್ಬರು ಕೆಲಸ ಮಾಡಿದ್ದಾರೆ ಎಂದು ಗುತ್ತಿಗೆದಾರ ಲಕ್ಷ್ಮಿನಾರಾಯಣ್ ಆರೋಪಿಸಿದರು.
7 ಕಾಮಗಾರಿಯಲ್ಲಿ 2 ಎಸ್‌ಸಿ, 1 ಎಸ್‍ಟಿ ಮತ್ತು 4 ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಕೊರಟಗೆರೆ ಎಇಇ ರವಿಕುಮಾರ್ ಮಧುಗಿರಿ ಮತ್ತು ಕೊರಟಗೆರೆ ಕಚೇರಿಗಳಿಗೆ ಆದೇಶದ ಪ್ರತಿಗಳನ್ನು ಕಳುಹಿಸಿದ್ದಾರೆ. ಆದರೂ ಇದನ್ನು ಉಲ್ಲಂಘಿಸಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘₹60 ಲಕ್ಷ ಅನುದಾನದ 7 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ತಡೆ ನೀಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಈ ಲೋಪವಾಗಿದೆ. ಮಧುಗಿರಿ, ಕೊರಟಗೆರೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಇದೆ. ಕೆಲಸದ ಒತ್ತಡದಿಂದ ಇಂತಹ ಲೋಪವಾಗಿದೆ’ ಎಂದು ಮಧುಗಿರಿ ಎಂಜಿನಿಯರ್ ದಯಾನಂದ್ ಪ್ರತಿಕ್ರಿಯೆ ನೀಡಿದರು.