ಭಾನುವಾರ, ಸೆಪ್ಟೆಂಬರ್ 19, 2021
27 °C
ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕದಲ್ಲಿ 75 ಸಾವಿರ ಟನ್ ಕಸ l ಹೆಚ್ಚುತ್ತಲೇ ಇದೆ ಪ್ಲಾಸ್ಟಿಕ್ ತ್ಯಾಜ್ಯ

ಕಸದ ಗುಡ್ಡ ಕರಗಿಸುವುದೇ ಸವಾಲು!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಜ್ಜಗೊಂಡನಹಳ್ಳಿ ಕಸವಿಲೇವಾರಿ ಘಟಕದಲ್ಲಿ 75 ಸಾವಿರ ಟನ್ ಕಸ ಗುಡ್ಡದಂತೆ ಸಂಗ್ರಹವಾಗಿದೆ. ಇದನ್ನು ಕರಗಿಸುವುದೇ ತುಮಕೂರು ಮಹಾನಗರ ಪಾಲಿಕೆಗೆ ಸವಾಲಾಗಿದೆ. ಈ ಗುಡ್ಡಗಳಂತಿರುವ ಕಸದ ರಾಶಿಯ ಮೇಲೆ ಹುಲ್ಲುಗಳು ಬೆಳೆದಿವೆ. ಘಟಕದ ಹಿಂದಿನ ಗೇಟಿನವರೆಗೂ ಕಸವನ್ನು ರಾಶಿ ರಾಶಿಯಾಗಿ ಗುಡ್ಡೆ ಹಾಕಲಾಗಿದೆ.

ಕಸದ ರಾಶಿಗಳು ಒಣಗಿ ಬೆಂಡಾಗಿವೆ. ಮತ್ತೊಂದು ಕಡೆ ಈ ಕಸದ ಗುಡ್ಡಗಳ ಮೇಲೆ ಹುಲ್ಲುಗಳು ಬೆಳೆದಿವೆ. ಈ ರಾಶಿಗಳು ಯಾವ ಕಾಲದ್ದೋ ಎನ್ನುವ ಭಾವನೆಯನ್ನು ಈ ವಾತಾವರಣ ಮೂಡಿಸುತ್ತದೆ. 

‘ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 130ರಿಂದ 140 ಟನ್ ಕಸ ಸಂಗ್ರಹವಾಗುತ್ತಿದೆ. ಘಟಕಕ್ಕೆ ಕಸವನ್ನು ಈ ಹಿಂದೆ ತಂದು ಸುರಿಯಲಾಗುತ್ತಿತ್ತು ಅಷ್ಟೇ. ಇತ್ತೀಚಿನ ನಾಲ್ಕೈದು ವರ್ಷಗಳಿಂದ ಮಾತ್ರ ಸಂಸ್ಕರಣೆಗೆ ಕ್ರಮಕೈಗೊಳ್ಳಲಾಗಿದೆ. ಆದ್ದರಿಂದ ಎಲ್ಲ ಕಸವನ್ನು ವಿಲೇವಾರಿ ಮಾಡಲು ಸಮಯಬೇಕು’ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸುವರು.

ಸದ್ಯ ಅಜ್ಜಗೊಂಡನಹಳ್ಳಿ ಘಟಕದಲ್ಲಿ ನಿತ್ಯ 100 ಟನ್ ಕಸ ಸಂಸ್ಕರಣೆಯ ಯಂತ್ರ ವಿದೆ. 27 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 

ಪ್ಲಾಸ್ಟಿಕ್ ಸವಾಲು: ನಿತ್ಯ ಸರಾಸರಿ ಐದರಿಂದ ಆರು ಟನ್ ಪ್ಲಾಸ್ಟಿಕ್ ಕಸ ಘಟಕಕ್ಕೆ ಸೇರುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಕಸ ವಿಲೇವಾರಿಯೂ ಪಾಲಿಕೆಗೆ ಸವಾಲು ಎನಿಸಿದೆ. ಪ್ಲಾಸ್ಟಿಕ್ ಕಸವೂ ರಾಶಿ ರಾಶಿಯಾಗಿ ಬಿದ್ದಿದೆ.

2020ರ ಮಾರ್ಚ್‌ನಲ್ಲಿ ಘಟಕಕ್ಕೆ ಬೆಂಕಿ ಬಿದ್ದಿತ್ತು. ಸಂಜೆ ವೇಳೆಗೆ ಬೆಂಕಿ ಹರಡಿ ಹೊಗೆ ಆಕಾಶದೆತ್ತರಕ್ಕೆ ಹಬ್ಬಿತ್ತು. ರಾಶಿಗಟ್ಟಲೇ ಕಸ ವಿಲೇವಾರಿ ಆಗಿಲ್ಲ. ಈ ಕಸದ ಗುಡ್ಡೆಗೆ ಪಾಲಿಕೆ ಸಿಬ್ಬಂದಿಯೇ ಬೆಂಕಿ ಹಾಕಿದ್ದಾರೆ ಎಂದು ಆ ಸಂದರ್ಭದಲ್ಲಿ ಸುತ್ತಮುತ್ತಲ ಹಳ್ಳಿ ಗಳ ಜನರು ಆರೋಪಿಸಿದ್ದರು.

‘ಕುರುಕುರೆ, ಕಾಫಿ ಪೌಡರ್, ದಿನಬಳಕೆಯ ವಸ್ತುಗಳು ಹೀಗೆ ಎಲ್ಲವನ್ನೂ ಪ್ಲಾಸ್ಟಿಕ್ ಕವರ್‌ನಿಂದ ಪ್ಯಾಕ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮಾರಾಟ ಮಾಡುವರ ವಿರುದ್ಧ ದಂಡ ಹಾಕಿದ್ದೇವೆ. ಆದರೂ ಪ್ಲಾಸ್ಟಿಕ್ ಕಡಿಮೆ ಆಗಿಲ್ಲ. ಸರ್ಕಾರ ಮಟ್ಟದಲ್ಲಿಯೇ ಉತ್ಪಾದನೆ ಮತ್ತು ಪ್ಯಾಕಿಂಗ್ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸುವರು.

‘ಡಾಂಬರ್‌ಗೆ (ಟಾರ್‌) ಮಿಶ್ರಣ ಮಾಡಲು ಪ್ಲಾಸ್ಟಿಕ್ ಕಸ ಕಳುಹಿಸಿಕೊಡುತ್ತಿದ್ದೇವೆ. ಪೈಪ್ ಕಂಪನಿಯವರು ಸಹ ಕೊಂಡೊ ಯ್ಯುವರು. ಆದರೆ ಅವರು ತೆಗೆದು ಕೊಂಡು ಹೋಗುವ ‍ಪ್ರಮಾಣ ಮತ್ತು ಉತ್ಪತ್ತಿ ಆಗುತ್ತಿರುವ ಪ್ರಮಾಣಕ್ಕೆ ಅಜಗಜ ವ್ಯತ್ಯಾಸ ಇದೆ’ ಎನ್ನುತ್ತಾರೆ.

ಸಂಸ್ಕರಣೆಗೆ ಬೇಕು ನಾಲ್ಕು ವರ್ಷ

ತಲಾ 100 ಟನ್ ಸಾಮರ್ಥ್ಯದ ಕಸ ಸಂಸ್ಕರಣೆ ಯಂತ್ರಗಳನ್ನು ಸ್ವಚ್ಛಭಾರತ ಮಿಷನ್‌ನಡಿ ಅಳವಡಿಸಲು ಈಗಾಗಲೇ ಕಾರ್ಯಾದೇಶ ಆಗಿದೆ. ಈ ಮೊದಲಿನಿಂದಲೂ ಅಲ್ಲಿ ಕಸವನ್ನು ಸಂಗ್ರಹಿಸಿದ್ದಾರೆ. ಅದನ್ನು ಈಗ ವಿಲೇವಾರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಸಂಗ್ರಹವಾಗಿರುವ 75 ಸಾವಿರ ಟನ್ ಕಸವನ್ನು ಸಂಸ್ಕರಣೆ ಮತ್ತು ವಿಲೇವಾರಿ ಮಾಡಲು ಕನಿಷ್ಠ ನಾಲ್ಕು ವರ್ಷವಾದರೂ ಬೇಕು ಎಂದು ಮಾಹಿತಿ ನೀಡುವರು ಪಾಲಿಕೆ ಆಯುಕ್ತೆ ರೇಣುಕಾ.

ಈ 200 ಟನ್ ಸಾಮರ್ಥ್ಯದ ಯಂತ್ರಗಳನ್ನು ಅಳವಡಿಸಿದ ನಂತರ ಕಸ ಸಂಸ್ಕರಣೆ ಮತ್ತಷ್ಟು ವೇಗ ಪಡೆಯಲಿದೆ. ನಾಗರಿಕರು ಸಹ ಕಸವನ್ನು ರಸ್ತೆಬದಿಗಳಿಗೆ ಎಸೆಯದೆ ಪಾಲಿಕೆಯ ಕಸ ಸಂಗ್ರಹದ ವಾಹನಗಳಿಗೆ ನೀಡಬೇಕು ಎಂದು ಹೇಳಿದರು.

ಎರೆಹುಳು ಗೊಬ್ಬರಕ್ಕೆ ಬೇಡಿಕೆ

 ಅಜ್ಜಗೊಂಡನಹಳ್ಳಿಯ 3 ಎರೆಹುಳು ಘಟಕಗಳಿಂದ ಮೂರು ತಿಂಗಳಿಗೆ ಸರಾಸರಿ ಆರು ಟನ್ ಗೊಬ್ಬರ ಉತ್ಪತ್ತಿ ಆಗುತ್ತಿದೆ. ಈ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರೈತರು ಇಲ್ಲಿಗೆ ಬಂದು ಖರೀದಿಸುವರು ಎಂದು ಘಟಕದ ಸಿಬ್ಬಂದಿಯೊಬ್ಬರು ತಿಳಿಸುವರು.

ಒಂದು ಕೆ.ಜಿ ಎರೆಹುಳು ಗೊಬ್ಬರವನ್ನು ₹ 3ಕ್ಕೆ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ₹ 2ಕ್ಕೆ ಮಾರಾಟ ಮಾಡಲಾಗುತ್ತಿದೆ. ಒಂದು ದಿನಕ್ಕೆ ಐದರಿಂದ ಆರು ಟನ್ ಕಾಂಪೋಸ್ಟ್ ಗೊಬ್ಬರ ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಳೆಯಾದರೆ ದುರ್ವಾಸನೆ

‘ಸ್ವಲ್ಪ ಮಳೆಯಾದಾಗಲೂ ಸಹಿಸಲು ಅಸಾಧ್ಯವಾದ ವಾಸನೆ ಹರಡುತ್ತದೆ. ನೊಣಗಳ ಕಾಟದಿಂದ ಆಹಾರ ಪದಾರ್ಥಗಳು ಬೇಗ ಹಾಳಾಗುತ್ತಿವೆ. ದುರ್ವಾಸನೆಯಿಂದ ತಲೆನೋವು ಸಾಮಾನ್ಯವಾಗಿವೆ. ಸಂಗ್ರಹವಾಗಿರುವ ಕಸ ಆದಷ್ಟು ಬೇಗ ವಿಲೇವಾರಿ ಆಗಬೇಕು. ಕಸದಿಂದಾಗಿ ನೊಣ, ಹದ್ದು–ಕಾಗೆಗಳ ಕಾಟವೂ ಹೆಚ್ಚಾಗಿದೆ’ ಎಂದು ಕಟ್ಟಿಗೆಹಳ್ಳಿ, ಲಿಂಗೇನಹಳ್ಳಿಯ ನಾಗರಿಕರು ದೂರುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು