ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಬೀದಿಗೆ ತಂದ ಸರ್ಕಾರ: ಕಾಂಗ್ರೆಸ್‌ ಆಕ್ರೋಶ

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
Last Updated 8 ಮಾರ್ಚ್ 2021, 5:12 IST
ಅಕ್ಷರ ಗಾತ್ರ

ಮಧುಗಿರಿ: ಮೂರು ತಿಂಗಳಿನಿಂದದೆಹಲಿಯಲ್ಲಿ ರೈತರು ಹಗಲಿರುಳು ಹೋರಾಟ ಮಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸೌಜನ್ಯಕ್ಕಾದರೂ ಭೇಟಿ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರಿದರು.

ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಸದಸ್ಯರಿಗೆ ಅಭಿನಂದನಾ ಸಮಾರಂಭ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್‌ ಹಾಗೂ ದಿನ ಬಳಕೆಯ ವಸ್ತುಗಳ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ನರೇಗಾ ಸೇರಿದಂತೆ 7 ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಬದಲಾವಣೆ ಮಾಡಿದರೆ ಬಿಜೆಪಿ ವಿರುದ್ಧ ಜನರು ಬೀದಿಗಿಳಿಯುತ್ತಾರೆ
ಎಂದರು.

‘ಶಾಸಕರು ಅಂದಾಕ್ಷಣ ಛೀ, ಥೂ, ಕಳ್ಳ ಅನ್ನೋ ಪರಿಸ್ಥಿತಿಯನ್ನು ಬಿಜೆಪಿ ಶಾಸಕರು ತಂದುಕೊಟ್ಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧ ಪ‍ಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಬದುಕಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಪಡಿತರ ಅಕ್ಕಿ ವಿತರಣೆಯಲ್ಲಿ ಎರಡು ಕೆ.ಜಿ ಕಡಿತಗೊಳಿಸಲು ಮುಂದಾಗಿದ್ದಾರೆ. ಬಡವರು ತಿನ್ನುವ ಅಕ್ಕಿ ಕಿತ್ತುಕೊಂಡರೆ ಒಳ್ಳೆಯದಾಗಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ರಾಜ್ಯಕ್ಕೆ ದಾರಿದ್ರ್ಯ ಬಡಿದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಏನು ಕೇಳಿದರೂ ಕೊರೊನಾ ನೆಪ ಹೇಳುತ್ತಿದ್ದಾರೆ. ಕೋವಿಡ್‌ ಹೆಸರಿನಲ್ಲಿ ಬಿಜೆಪಿ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂದು ಗುಡುಗಿದರು.

ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, 7 ವರ್ಷಗಳಿಂದ ಬಿಜೆಪಿ ಆಡಳಿತವನ್ನು ನೋಡಿ ಜನರು ರೋಸಿ ಹೋಗಿದ್ದಾರೆ. ಬಡತನ ನಿರ್ಮೂಲನೆಯಾಗಿಲ್ಲ. ಉದ್ಯೋಗ ಸೃಷ್ಟಿ ಆಗಲಿಲ್ಲ ಎಂದರು.

‘ನಾನು ಮತ್ತು ಕೆ.ಎನ್.ರಾಜಣ್ಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಒಂದೇ. ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಶಾಸಕರನ್ನಾಗಿ ಆಯ್ಕೆ ಮಾಡಬೇಕು’ ಎಂದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಹಾಗೂ ಏಕಾಶಿಲಾ ಬೆಟ್ಟಕ್ಕೆ ರೋಪ್‌ ವೇ ಯೋಜನೆ ಪೂರ್ಣಗೊಳಿಸಬೇಕು. ಎತ್ತಿನಹೊಳೆ ಯೋಜನೆಯ ಮೂಲಕ ಮಧುಗಿರಿಯ 54 ಹಾಗೂ ಕೊರಟಗೆರೆಯ 34 ಕೆರೆಗಳಿಗೆ ನೀರು ಹರಿಯಲಿದೆ. ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯನ್ನು ಜನರು ಮರೆತರೆ ತಿನ್ನುವ ಅನ್ನಕ್ಕೆ ಹುಳು ಬೀಳುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವರಾದ ಟಿ.ಬಿ ಜಯಚಂದ್ರ, ಚಲುವರಾಯಸ್ವಾಮಿ, ಎಂ.ಆರ್.ಸೀತಾರಾಮ್, ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಷಡಕ್ಷರಿ, ಶಫೀಅಹಮದ್, ಎಂ.ಸಿ.ವೇಣುಗೋಪಾಲ್ ಮಾತನಾಡಿದರು. ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್. ರಾಜೇಂದ್ರ, ಜಿ.ಪಂ.ಸದಸ್ಯ ಶಾಂತಲಾ ರಾಜಣ್ಣ, ಜಿ.ಜೆ.ರಾಜಣ್ಣ, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ತಾ.ಪಂ. ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್ ರಾಜಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT