ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಜಾಲಿ ಮರ ಕಳ್ಳರ ಪಾಲು

ಚಿಕ್ಕಮಾಲೂರು ಕೆರೆ ಬಳಿ ಬೆಳೆದು ನಿಂತಿರುವ ವೃಕ್ಷಗಳು
Published : 3 ಸೆಪ್ಟೆಂಬರ್ 2020, 8:31 IST
ಫಾಲೋ ಮಾಡಿ
0
ಜಾಲಿ ಮರ ಕಳ್ಳರ ಪಾಲು
ಕೊಡಿಗೇನಹಳ್ಳಿ ಹೋಬಳಿ ಚಿಕ್ಕಮಾಲೂರು ಗ್ರಾಮದ ಕೆರೆಯಲ್ಲಿ ಬೆಳೆದು ನಿಂತಿರುವ ಜಾಲಿಮರಗಳು

ಕೊಡಿಗೇನಹಳ್ಳಿ: ಚಿಕ್ಕಮಾಲೂರು ಕೆರೆಯಲ್ಲಿ ಬೆಳೆದು ನಿಂತಿರುವ ಬೃಹತ್ ಗಾತ್ರದ ಜಾಲಿಮರಗಳು ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ಸರ್ಕಾರಕ್ಕೆ ಸೇರಬೇಕಾಗಿದ್ದ ಲಕ್ಷಾಂತರ ರೂಪಾಯಿ ಮರಗಳ್ಳರ ಪಾಲಾಗುತ್ತಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT
ADVERTISEMENT

ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಮದಲ್ಲಿ ಪೂರ್ವಿಕರು ಗ್ರಾಮದ ಕೃಷಿ ಮತ್ತು ಅಂತರ್ಜಲ ವೃದ್ಧಿಗಾಗಿ 253 ಎಕರೆ ಜಾಗದಲ್ಲಿ ಕೆರೆ ನಿರ್ಮಿಸಿದ್ದರು. ಈ ಭಾಗ ಬಯಲು ಪ್ರದೇಶವಾಗಿರುವ ಕಾರಣ ಪ್ರಾಕೃತವಾಗಿ ಹಾಗೂ ಆರ್ಥಿಕವಾಗಿ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆ 25ರಿಂದ 30 ವರ್ಷಗಳ ಹಿಂದೆ ಕೆರೆ ಪ್ರದೇಶದಲ್ಲಿ ಸುಮಾರು 25 ಸಾವಿರ ಜಾಲಿಗಿಡಗಳನ್ನು ನೆಟ್ಟಿತ್ತು. ಈಗ ದೊಡ್ಡದಾಗಿ ಬೆಳೆದು ನಿಂತಿವೆ. ಈಗ ಈ ಮರಗಳು ಲೂಟಿಕೋರರ ಪಾಲಾಗುತ್ತಿವೆ.

ಆರಂಭದಲ್ಲಿ ಮರಗಳನ್ನು ಸಂರಕ್ಷಿಸಲು ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಯಿಂದ ಕಾವಲುಗಾರರನ್ನು ನೇಮಿಸಲಾಗಿತ್ತು. ನಂತರ ಕಾವಲುಗಾರರು ಇಲ್ಲವಾಗಿದ್ದು, ಬೆಳೆದು ನಿಂತಿರುವ ಬೃಹತ್ ಗಾತ್ರದ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕೊಯ್ದು ಮಾರಾಟ ಮಾಡುತ್ತಿದ್ದಾರೆ.

ಮರಗಳನ್ನು ಕಡಿದು ಸಾಗಿಸುವ ವಿಚಾರವನ್ನು ಗ್ರಾಮ ಪಂಚಾಯಿತಿಗೆ ಹಲವು ಬಾರಿ ತಿಳಿಸಿದ್ದೇವೆ. ಆದರೆ, ಅವರು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯ ಇಲಾಖೆ ಗಮನಕ್ಕೆ ತನ್ನಿ’ ಎನ್ನುತ್ತಾರೆ. ಅರಣ್ಯ ಇಲಾಖೆ ಗಮನಕ್ಕೆ ತಂದರೆ ‘ಇದು ಗ್ರಾಮ ಪಂಚಾಯಿತಿಗೆ ಸೇರಿದ್ದು. ಅವರ ಗಮನಕ್ಕೆ ತನ್ನಿ’ ಎನ್ನುತ್ತಾರೆ. ಯಾರೊಬ್ಬರೂ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದರಿಂದ ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ ಎನ್ನುವಂತಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ದೂರಿದರು.

ADVERTISEMENT

ಬಲಿತು ನಿಂತಿರುವ ಮರಗಳನ್ನು ಹರಾಜು ಹಾಕಿ ಉಳಿದ ಮರಗಳನ್ನು ರಕ್ಷಿಸಲು ಕಾವಲುಗಾರರನ್ನು ನೇಮಿಸಬೇಕು. ಇಲ್ಲವಾದರೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿ ಲೂಟಿಕೋರರ ಪಾಲಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾವಲುಗಾರ ನೇಮಿಸಲು ಚರ್ಚೆ
ಕೆರೆ ಸುತ್ತಮುತ್ತಲ ಪ್ರದೇಶ ಗ್ರಾ.ಪಂ ವ್ಯಾಪ್ತಿಗೆ ಬರುತ್ತದೆ. ಹರಾಜು ಪ್ರಕ್ರಿಯೆ ನಡೆಸಲು ಗ್ರಾ.ಪಂ ಸಭೆ ನಡೆಸಿ ಅದರ ನಡಾವಳಿ ಪತ್ರ ನಮಗೆ ನೀಡಿದರೆ ನಾವು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಅನಮತಿ ನೀಡುತ್ತೇವೆ. ಸದ್ಯ ಗ್ರಾ.ಪಂ.ನವರು ಕಾವಲುಗಾರರನ್ನು ನೇಮಿಸಿ ಆಸ್ತಿ ರಕ್ಷಿಸಲು ಪಿಡಿಒ ಬಳಿ ಚರ್ಚಿಸಲಾಗುವುದು.
-ಎಚ್.ತಾರಕೇಶ್ವರಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ, ಮಧುಗಿರಿ

ಅರಣ್ಯ ಇಲಾಖೆ ನಮಗೆ ಅನುಮತಿ ನೀಡಲಿ
ಮರಗಳನ್ನು ಹರಾಜು ಹಾಕಿಸಲು ಮತ್ತು ರಕ್ಷಣೆಗೆ ಕಾವಲುಗಾರರನ್ನು ನೇಮಿಸಿಕೊಳ್ಳುವ ಸಲುವಾಗಿ ಅನುಮತಿ ಪತ್ರಕ್ಕಾಗಿ ಚಿಕ್ಕಮಾಲೂರು ಗ್ರಾಮ ಪಂಚಾಯಿತಿಯಿಂದ ಮಧುಗಿರಿ ಅರಣ್ಯ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಅಲ್ಲಿಂದ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ನಾವು ಕೆರೆಯಲ್ಲಿನ ಜಾಲಿಮರಗಳ ಹರಾಜು ಮತ್ತು ಕಾವಲುಗಾರರನ್ನು ನೇಮಿಸಲು ಮುಂದಾಗಿಲ್ಲ. ಅರಣ್ಯ ಇಲಾಖೆಯಿಂದ ನಮಗೆ ಅನುಮತಿ ಸಿಕ್ಕರೆ ವಾರದೊಳಗೆ ಸರಿಪಡಿಸಲಾಗುವುದು.
-ಧನಂಜಯ, ಪಿಡಿಒ, ಚಿಕ್ಕಮಾಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0