ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

ಅದ್ದೂರಿ ಕ್ಯಾಮೇನಹಳ್ಳಿ ಆಂಜನೇಯ ರಥೋತ್ಸವ
Published 16 ಫೆಬ್ರುವರಿ 2024, 13:46 IST
Last Updated 16 ಫೆಬ್ರುವರಿ 2024, 13:46 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿಯ ಎದುರು ಮುಖದ ಆಂಜನೇಯ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ತಾಲ್ಲೂಕು, ಜಿಲ್ಲೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 1.30ಕ್ಕೆ ತಹಶೀಲ್ದಾರ್ ಕೆ. ಮಂಜುನಾಥ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬೆಳಿಗ್ಗೆಯಿಂದಲೇ ರಥೋತ್ಸವಕ್ಕೆಂದು ಭಕ್ತರು ಸಾಲುಗಟ್ಟಿ ಬಂದರು. ಮಧ್ಯಾಹ್ನ ರಥೋತ್ಸವ ಪ್ರಾರಂಭದ ವೇಳೆ ಗರುಡ ಪಕ್ಷಿಯೊಂದು ರಥದ ಸುತ್ತ ಪ್ರದಕ್ಷಣೆ ಹಾಕಿತು. ನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ರಥೋತ್ಸವ ಪ್ರಾರಂಭವಾಗುವ ಸಮಯಕ್ಕೆ ಗರುಡ ಬರುವುದು ವಾಡಿಕೆ.

ರಥದ ಮುಂದೆ ಯುವಕ, ಯುವತಿಯರು ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನೂತನ ವಧುವರರು ಜಾತ್ರೆಯಲ್ಲಿ ಓಡಾಡುತ್ತಿದ್ದದ್ದು ಕಂಡು ಬಂತು. ಬಾಳೆ ಹಣ್ಣಿಗೆ ಧವನ ಸಿಕ್ಕಿಸಿ ರಥಕ್ಕೆ ಎಸೆಯುತ್ತ ಭಕ್ತರು ಭಕ್ತಿ ಸಮರ್ಪಿಸಿದರು.

ಪ್ರತಿ ವರ್ಷ ಸಂಕ್ರಾತಿ ನಂತರ ನಡೆಯುವ ಕ್ಯಾಮೇನಹಳ್ಳಿ ಎದುರು ಮುಖದ ಆಂಜನೇಯ ರಥೋತ್ಸವ ಈ ಭಾಗದಲ್ಲಿ ಹೆಚ್ಚು ಜನ ಮನ್ನಣೆ ಪಡೆದಿದೆ. ಸುತ್ತಮುತ್ತಲ ಗ್ರಾಮಗಳಾದ ಬಿದಲೋಟಿ, ಕ್ಯಾಮೇನಹಳ್ಳಿ, ಹೊನ್ನಾರನಹಳ್ಳಿ, ತಿಮ್ಮನಹಳ್ಳಿ, ತುಂಬಗಾನಹಳ್ಳಿ ಗ್ರಾಮಗಳಲ್ಲಿ ಹಬ್ಬದ ವಾತಾವರಣ ಇರುತ್ತದೆ.

ತಾಲ್ಲೂಕಿನ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ, ದೊಡ್ಡಪಾಳ್ಯ, ಹೊಸಪಾಳ್ಯ, ಅವುದಾರನಹಳ್ಳಿ ಗ್ರಾಮಗಳಿಂದ ರಥೋತ್ಸವಕ್ಕೂ ಮೂರು ದಿನಗಳ ಮುನ್ನ ಆರತಿ ಸೇವೆ ನಡೆಸಲಾಗುತ್ತದೆ. ಮಹಿಳೆಯರು 10 ಕಿಲೋಮಿಟರ್ ಕಾಲ್ನಡಿಗೆಯಲ್ಲಿ ಆರತಿ ಹೊತ್ತು ಬಂದು ಸೇವೆ ಸಲ್ಲಿಸಿ ಆ ದಿನ ಅಲ್ಲಿಯೇ ತಂಗಿದ್ದು ಮರು ದಿನ ವಾಪಸ್ಸಾಗುವರು.

ಮೂರು ಸಾವಿರ ವರ್ಷಗಳ ಇತಿಹಾಸ ಇರುವ ಕ್ಯಾಮೇನಹಳ್ಳಿ ಜಾತ್ರೆಯಲ್ಲಿ ಸಂಜೆ ತೇರು ನಡೆಯುವುದು ಮತ್ತೊಂದು ವಿಶೇಷ. ಹೊನ್ನಾರನಹಳ್ಳಿ, ತಿಮ್ಮನಹಳ್ಳಿ ಗ್ರಾಮಗಳಿಂದ ಆರತಿ ಉತ್ಸವ ನಡೆಯುತ್ತದೆ. ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಮುಂದಾಳತ್ವದಲ್ಲಿ ಸಂಜೆ ತೇರಿನ ಉತ್ಸವ ನಡೆಯುತ್ತದೆ.

ಅಕ್ಕಿರಾಂಪುರ, ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾತ್ರಿ ರಥೋತ್ಸವದ ಅಂಗವಾಗಿ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT