ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ನೀರಿನ ಘಟಕ ಯಂತ್ರ ದುರಸ್ತಿಗೆ ಅಸ್ತು, ಅಧಿಕಾರಿಗಳಿಗೆ ಸಾರ್ವಜನಿಕರ ತರಾಟೆ

Last Updated 13 ಜುಲೈ 2020, 18:31 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಫಿಲ್ಟರ್ ಬದಲಾವಣೆಗೆ 14ನೇ ಹಣಕಾಸು ಯೋಜನೆಯಡಿ ಉಳಿಕೆಯಾದ ₹7.19 ಲಕ್ಷ ಬಳಸಿಕೊಳ್ಳಲು ಅನುಮೋದನೆ ದೊರೆತಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.

ನಗರದಲ್ಲಿ ಕಳೆದ ಆರು ತಿಂಗಳಿನಿಂದ ಕಲುಷಿತ ನೀರನ್ನು ಪೂರೈಕೆ ಮಾಡುತ್ತಿರುವ ಬಗ್ಗೆ ‘ಗುಬ್ಬಿವಾಸಿಗಳಿಗಿಲ್ಲ ಶುದ್ಧ ಕುಡಿಯುವ ನೀರು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಜುಲೈ 13ರಂದು ವರದಿ ಪ್ರಕಟವಾಗಿತ್ತು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಕುಡಿಯುವ ನೀರಿನ ಫಿಲ್ಟರ್‌ ಬದಲಾವಣೆಗೆ ಮುಂದಾಗಿದ್ದಾರೆ.

ಪ.ಪಂ ಅಧಿಕಾರಿಗಳಿಗೆ ತರಾಟೆ: ಪತ್ರಿಕಾ ವರದಿಯನ್ನು ಓದಿದ ಪಟ್ಟಣದ ಸಾರ್ವಜನಿಕರು, ನಾಗರಿಕ ಹಿತ ರಕ್ಷಣಾ ಸಂಘದ ಸದಸ್ಯರು, ಮುಖಂಡರು ಮತ್ತು ಜನಪ್ರತಿನಿಧಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ತರಾಟೆ ತೆಗೆದುಕೊಂಡರು. ಕೆಟ್ಟು ನಿಂತಿರುವ ಯಂತ್ರವನ್ನು ಕೂಡಲೇ ದುರಸ್ತಿ ಮಾಡಿಸಿ. ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಪಟ್ಟು ಹಿಡಿದದರು.

‘ಏಳೆಂಟು ತಿಂಗಳ ಹಿಂದೆ ನೀರು ಶುದ್ಧೀಕರಣ ಯಂತ್ರ ಕೆಟ್ಟು ಹೋಗಿದೆ. ಆ ದಿನದಿಂದ ಇಲ್ಲಿವರೆಗೆ ಕೆರೆಯ ನೀರಿಗೆ ಅವೈಜ್ಞಾನಿಕವಾಗಿ ಅಲಂ ಮತ್ತು ಕ್ಲೋರಿನ್ ಬಳಸಿ ನೀರು ಸರಬರಾಜು ಮಾಡಿದ್ದಾರೆ ಹೊರತು ನೀರನ್ನು ಶುದ್ಧೀಕರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಸಾರ್ವಜನಿಕರಆರೋಗ್ಯದ ಮೇಲೆ ವ್ಯತಿರಿಕ್ತಪರಿಣಾಮ ಉಂಟಾಗಿ ರೋಗಗಳಿಗೆ ತುತ್ತಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಸಮಸ್ಯೆ ಆಲಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥಪ್ರಸಾದ್, ‘ಜಿಲ್ಲಾಧಿಕಾರಿಯಿಂದ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಏಳು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸ ಲಾಗುವುದು. ಹದಿನೈದು ದಿನಗಳ ಒಳಗೆ ಯಂತ್ರವನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು. ಅಲ್ಲಿವರೆಗೆ ಈಗ ಸರಬರಾಜು ಮಾಡುವ ನೀರನ್ನು ಕುಡಿಯಲು ಬಳಸದೆ ಗೃಹೋಪಯೋಗಿ ಕೆಲಸಗಳಿಗೆ ಮಾತ್ರ ಬಳಸಿ ಸಹಕರಿ’ ಎಂದು ಮನವಿ ಮಾಡಿದರು.

ಮುಖಂಡರಾದ ಎಚ್.ಟಿ ಭೈರಪ್ಪ, ಶಂಕರ್ ಕುಮಾರ್ ಸಿ.ಆರ್, ವಿಜಯ್ ಕುಮಾರ್, ಮಂಜುನಾಥ್, ಲೋಕೇಶ್ ಬಿ., ಹನುಮಂತಯ್ಯ, ರಾಘವೇಂದ್ರ, ರಮೇಶ್ ಗೌಡ, ನರಸಿಂಹಮೂರ್ತಿ, ಸಂಜಯ್, ಪ.ಪಂ ಸದಸ್ಯರಾದ ಕುಮಾರ್ ಬಿ, ರೇಣುಕಾಸ್ವಾಮಿ, ಶೌಕತ್ ಆಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT