ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಆಸ್ತಿ ದಾಖಲೆ ತಿದ್ದುಪಡಿಗೆ ‘ತ್ವರಿತ’ ಸೇವೆ

ಪಾಲಿಕೆಯಲ್ಲಿ ‘ತ್ವರಿತ ಸೇವೆ ಅದಾಲತ್’ ಆರಂಭ
Published 9 ಡಿಸೆಂಬರ್ 2023, 4:32 IST
Last Updated 9 ಡಿಸೆಂಬರ್ 2023, 4:32 IST
ಅಕ್ಷರ ಗಾತ್ರ

ತುಮಕೂರು: ನಗರದ ಸಾರ್ವಜನಿಕರು ಹಲವು ದಾಖಲೆಗಳಲ್ಲಿ ಸಣ್ಣ, ಪುಟ್ಟ ತಿದ್ದುಪಡಿಗಳಿಗಾಗಿ ಮಹಾನಗರ ಪಾಲಿಕೆಯ ಕಚೇರಿ ಮುಂಭಾಗ ಶುಕ್ರವಾರ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು.

ಪಾಲಿಕೆಯ ವತಿಯಿಂದ ಇದೇ ಮೊದಲ ಬಾರಿಗೆ ‘ತ್ವರಿತ ಸೇವೆ ಅದಾಲತ್‌’ ಹಮ್ಮಿಕೊಂಡಿದ್ದು, ಸಾರ್ವಜನಿಕರು ಅಗತ್ಯ ಸೇವೆ ಪಡೆಯಲು ತಮ್ಮೆಲ್ಲ ದಾಖಲೆಗಳನ್ನು ಹಿಡಿದು ಪಾಲಿಕೆಯತ್ತ ಬಂದಿದ್ದರು. ವಿವಿಧ ಸೇವೆಗಳಿಗಾಗಿ 6 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಪಾಲಿಕೆಯಿಂದ ಅದಾಲತ್ ನಡೆಸುವಂತೆ ಸದಸ್ಯರು ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೂ ಅಧಿಕಾರಿಗಳು ಅದಾಲತ್ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ.

ಆಸ್ತಿಗಳ ಅಳತೆಯ ಅದಲು-ಬದಲು ಸರಿಪಡಿಸುವುದು, ಹೆಸರು, ವಿಳಾಸ ತಿದ್ದುಪಡಿ, ಅನಧಿಕೃತ ಯುಜಿಡಿ, ನೀರು ಸಂಪರ್ಕಗಳನ್ನು ಅಧಿಕೃತಗೊಳಿಸುವುದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಾಕಷ್ಟು ಸಂಖ್ಯೆಯ ಜನರು ಬಂದಿದ್ದರು. ಮೊದಲ ಸಲ ಇಂತಹ ಪ್ರಯತ್ನ ಮಾಡಿದ್ದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗರ್ಭಿಣಿಯರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೇಂದ್ರ ಆರಂಭಿಸಲಾಗಿತ್ತು.

‘ತುಂಬಾ ದಿನಗಳಿಂದ ಪಾಲಿಕೆಯ ಕಚೇರಿಗೆ ಅಲೆದಾಡಿ ಸಾಕಾಗಿತ್ತು. ಇವತ್ತಾದರೂ ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂಬ ನಂಬಿಕೆಯಿಂದ ಬಂದಿದ್ದೆ. ನಮೂನೆ 3ರಲ್ಲಿ ಸೈಟ್‌ ನಂಬರ್‌ ಬಿಟ್ಟು ಹೋಗಿತ್ತು. ಅದನ್ನು ಮತ್ತೆ ಸೇರಿಸಿದ್ದಾರೆ’ ಎಂದು ಶಿರಾ ಗೇಟ್‌ ನಿವಾಸಿ ರಂಗಪ್ಪ ಪ್ರತಿಕ್ರಿಯಿಸಿದರು.

‘ಬರಿ ತಿದ್ದುಪಡಿಗಾಗಿ ಅದಾಲತ್‌ ಮಾಡಿದರೆ ಸಾಲದು. ಪಾಲಿಕೆಯ ವ್ಯಾಪ್ತಿಯಲ್ಲಿ ತ್ವರಿತವಾಗಿ ಸಿಗಬಹುದಾದ ಎಲ್ಲ ಸೇವೆಗಳಿಗಾಗಿ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಹೋಟೆಲ್‌, ಅಂಗಡಿಗಳಿಗೆ ಪರವಾನಗಿ ನೀಡುವ ಕೆಲಸ ವೇಗ ಪಡೆದುಕೊಳ್ಳಬೇಕು. ಮುಂದಿನ ಅದಾಲತ್‌ನಲ್ಲಿ ಹೆಚ್ಚಿನ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್‌ ಪಾಷ ಒತ್ತಾಯಿಸಿದರು.

ಪಾಲಿಕೆ ಮೇಯರ್‌ ಎಂ.ಪ್ರಭಾವತಿ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ಯಾವ ವಿಷಯದ ಬಗ್ಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂಬುದನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಐದು ವಾರ್ಡ್‌ಗಳಿಗೆ ಒಂದು ದಿನ ಇಂತಹ ಅದಾಲತ್‌ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ಜೆ.ಕುಮಾರ್‌, ಎಚ್.ಮಲ್ಲಿಕಾರ್ಜುನಯ್ಯ, ಮಂಜುನಾಥ್‌ ಇತರರು ಹಾಜರಿದ್ದರು.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ವರಿತ ಸೇವೆ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು
ತುಮಕೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ವರಿತ ಸೇವೆ ಅದಾಲತ್‌ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದರು

ಪ್ರತಿ ಶುಕ್ರವಾರ ಅದಾಲತ್‌

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ‘ಮನೆಯ ಬಾಗಿಲಿಗೆ ಕಂದಾಯ ಸೇವೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದರು. ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗುತ್ತಿದೆ. ಆದಷ್ಟು ಬೇಗ ಅದನ್ನು ಅನುಷ್ಠಾನಕ್ಕೆ ತರಲಾಗುವುದು. ಪ್ರತಿ ತಿಂಗಳು ನಾಲ್ಕನೇ ಶುಕ್ರವಾರ ಪಾಲಿಕೆಯ ಕಚೇರಿ ಆವರಣದಲ್ಲಿ ಇದೇ ರೀತಿಯಾಗಿ ‘ತ್ವರಿತ ಸೇವೆ ಅದಾಲತ್‌’ ಏರ್ಪಡಿಸಲಾಗುವುದು ಎಂದು ಹೇಳಿದರು. ಅದಾಲತ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅದಾಲತ್‌ನಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದ ವಿಭಾಗದಲ್ಲಿನ ನ್ಯೂನತೆ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

₹2 ಲಕ್ಷ ತೆರಿಗೆ ಸಂಗ್ರಹ

ಪಾಲಿಕೆಯಿಂದ ಹಮ್ಮಿಕೊಂಡಿದ್ದ ತ್ವರಿತ ಸೇವೆ ಅದಾಲತ್‌ನಲ್ಲಿ ನೀರು ಸಂಪರ್ಕ ಸಕ್ರಮ ಮಾಡಿದ್ದು ಮತ್ತು ಟ್ರೇಡ್‌ ಲೈಸೆನ್ಸ್‌ಗೆ ಅನುಮತಿ ನೀಡಿದ್ದು ₹2 ಲಕ್ಷ ತೆರಿಗೆ ಸಂಗ್ರಹವಾಗಿದೆ. ನೀರು ಸಂಪರ್ಕ ಸಕ್ರಮಗೊಳಿಸಲು ಪಾಲಿಕೆಯಿಂದ ಪ್ರತಿಯೊಂದು ನಲ್ಲಿಗೆ ₹2500 ತೆರಿಗೆ ವಿಧಿಸಲಾಗಿದೆ. ನೀರು ಸಂಪರ್ಕದಲ್ಲಿ ₹1.61 ಲಕ್ಷ ಹಾಗೂ ಟ್ರೇಡ್‌ ಲೈಸೆನ್ಸ್‌ಗಾಗಿ ₹38 ಸಾವಿರ ಸಂಗ್ರಹವಾಗಿದೆ. ಅದಾಲತ್‌ನಲ್ಲಿ ಕಂದಾಯ ಶಾಖೆ ಚುನಾವಣೆ ಸೇರಿದಂತೆ ಒಟ್ಟು ಐದು ಶಾಖೆಗಳಲ್ಲಿ 698 ಅರ್ಜಿಗಳು ಸಲ್ಲಿಕೆಯಾಗಿದ್ದು ಇದರಲ್ಲಿ 347 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT