ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂರು ಶವ ಪತ್ತೆ ಪ್ರಕರಣ: ನಿಧಿಗಾಗಿ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ

Published 26 ಮಾರ್ಚ್ 2024, 4:49 IST
Last Updated 26 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರು ಸಹಿತ ಬೆಳ್ತಂಗಡಿ ತಾಲ್ಲೂಕಿನ ಮೂವರನ್ನು ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

ಚಿನ್ನದ ನಿಧಿ ಹುಡುಕಿ ಕೊಡುವಂತೆ ನೀಡಿದ್ದ ₹6 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ. ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರು ಮಂದಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

ನಿಧಿ ಆಸೆ ತೋರಿಸಿ ಹಣ ಪಡೆದುಕೊಂಡು ಕೊಲೆಗೆ ಸಂಚು ರೂಪಿಸಿದ್ದ ನಗರದ ಶಿರಾಗೇಟ್ ನಿವಾಸಿ ಪಾತರಾಜು (ರಾಜಗುರು) (35), ಸತ್ಯಮಂಗಲ ಗ್ರಾಮದ ಗಂಗರಾಜು (35) ಬಂಧಿತ ಆರೋಪಿಗಳು.

ಈ ಇಬ್ಬರ ಜತೆಗೆ ಕೊಲೆಯಲ್ಲಿ ಭಾಗಿಯಾಗಿರುವ ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್ (24), ಸಂತೇಪೇಟೆಯ ನವೀನ್ (24), ವೆಂಕಟೇಶಪುರದ ಕೃಷ್ಣ (22), ಹೊಂಬಯ್ಯನಪಾಳ್ಯದ ಗಣೇಶ (19), ನಾಗಣ್ಣನಪಾಳ್ಯದ ಕಿರಣ್ (23), ಕಾಳಿದಾಸ ನಗರದ ಸೈಮನ್ (18) ಎಂಬ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೆಳ್ತಂಗಡಿ ತಾಲ್ಲೂಕು ಮದಡ್ಕ ಸಮೀಪದ ಕೂವೆಟ್ಟು ಗ್ರಾಮದ ಇಶಾಕ್ ಸೀಮಮ್ (54), ಪೆರ್ಮಾನ ಗ್ರಾಮದ ಶಾಹುಲ್ ಹಮೀದ್ (45), ಶಿರ್ಲಾಲು ಗ್ರಾಮದ ಸಿದ್ದಿಕ್ (34) ಕೊಲೆಯಾದವರು.

ಘಟನೆ ಹಿನ್ನೆಲೆ: ತುಮಕೂರಿನ ಪಾತರಾಜುಗೆ ಸ್ನೇಹಿತರ ಮೂಲಕ ಬೆಳ್ತಂಗಡಿ ತಾಲ್ಲೂಕಿನ ಇಶಾಕ್ ಸೀಮಮ್ ಪರಿಚಯವಾಗಿದ್ದು, ಚಿನ್ನದ ನಿಧಿ ಪತ್ತೆಮಾಡಿ ಕೊಡುವುದಾಗಿ ನಂಬಿಸಿದ್ದಾನೆ. ಇಶಾಕ್‌ ಅವರಿಂದ ಆರೇಳು ತಿಂಗಳ ಹಿಂದೆ ₹6 ಲಕ್ಷ ಹಣ ಪಡೆದುಕೊಂಡಿದ್ದು, ನಿಧಿ ಬಗ್ಗೆ ಕೇಳಿದಾಗಲೆಲ್ಲ ಹುಡುಕುತ್ತಿರುವುದಾಗಿ ಹೇಳಿಕೊಂಡು ಬಂದಿದ್ದಾರೆ. ನಿಧಿ ಹುಡುಕಿ ಕೊಡದಿದ್ದಾಗ ಹಣ ವಾಪಸ್‌ಗೆ ಒತ್ತಾಯಿಸಿದ್ದಾರೆ. ಹಣ ಕೊಡದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾರೆ. ಕೊನೆಗೆ ತುಮಕೂರಿಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.

ಇಶಾಕ್ ತನ್ನ ಸ್ನೇಹಿತರಾದ ಶಾಹುಲ್, ಸಿದ್ದಿಕ್ ಜತೆಗೆ ಕಾರಿನಲ್ಲಿ ತುಮಕೂರಿಗೆ ಬಂದಿದ್ದಾರೆ. ನಗರದಲ್ಲಿ ಕೆಲ ಸಮಯ ಸುತ್ತಾಡಿಸಿ, ಚಿನ್ನ ಕೊಡುವುದಾಗಿ ಹೇಳಿ ನಂಬಿಸಿ ತಾಲ್ಲೂಕಿನ ಬೀರನಕಲ್ಲು ಬೆಟ್ಟದ ಬಳಿಗೆ ಮಾರ್ಚ್ 22ರಂದು ರಾತ್ರಿ ಕರೆದುಕೊಂಡು ಹೋಗಿದ್ದಾರೆ. ಪಾತರಾಜು, ಗಂಗರಾಜು ಹಾಗೂ ಇತರೆ ಆರು ಮಂದಿ ಸೇರಿಕೊಂಡು ಮಚ್ಚು, ಲಾಂಗ್, ಡ್ಯಾಗರ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅವರು ಬಂದಿದ್ದ ಕಾರಿನಲ್ಲೇ ಶವ ತೆಗೆದುಕೊಂಡು ಹೋಗಿ ಕುಚ್ಚಂಗಿ ಕೆರೆ ಅಂಗಳದಲ್ಲಿ ನಿಲ್ಲಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಡಿವೈಎಸ್‌ಪಿ ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಅಮರೇಶ್‌ಗೌಡ, ದಿನೇಶ್ ಕುಮಾರ್, ಅವಿನಾಶ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಮೋಹನ್, ಸಾಗರ್ ಅಸ್ಕಿ, ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ನರಸಿಂಹರಾಜು, ರಮೇಶ್, ದುಶ್ಯಂತ್ ನೇತೃತ್ವದ ತಂಡ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

ಹೆಚ್ಚುವರಿ ‍ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ.ಮರಿಯಪ್ಪ, ಬಿ.ಎಸ್.ಅಬ್ದುಲ್ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT