ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮಾಡಿ ಓದಿದ ರಾಜೇಶ್ವರಿಗೆ ಕೆಎಎಸ್ ಕನಸು

ಆಸಕ್ತಿಯಿಂದ ಓದಿ ಚಿನ್ನದ ಪದಕ ಗಳಿಸಿದ ಸಾಧಕರ ಮಾತುಗಳು
Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟ ಪಂಗಡಕ್ಕೆ ಸೇರಿರುವ ಎಚ್‌.ರಾಜೇಶ್ವರಿ ಅವರಿಗೆ ಓದಿಗೆ ಪೂರಕವಾದ ವಾತಾವರಣ ಮನೆಯಲ್ಲಿ ಇಲ್ಲ. ಅಪ್ಪ ಎರಡನೇ ಮದುವೆಯಾಗಿ ದೂರವಾಗಿದ್ದಾರೆ. ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಜ್ಜಿಯ(ಅಮ್ಮನ ಅಮ್ಮ) ಮನೆಯೇ ರಾಜೇಶ್ವರಿ ಅವರಿಗೆ ಆಶ್ರಯ ತಾಣ.

‘ಓದಿನಿಂದ ಜೀವನವನ್ನು ಕಟ್ಟಿಕೊಳ್ಳಬಹುದು’ ಎಂದು ಗುರುಗಳು ಹೇಳುತ್ತಿದ್ದ ಮಾತುಗಳು ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆಯ ರಾಜೇಶ್ವರಿ ಮನಮುಟ್ಟಿದವು. ಅವರು ಓದಿಗೆ ಕಡೆಗೆ ಹೆಚ್ಚು ಲಕ್ಷ್ಯ ಕೊಡಲು ಆರಂಭಿಸಿದರು. ಆ ಆಸಕ್ತಿಯ ಓದು ಅವರ ಕೈಯಲ್ಲಿ ಇಂದು ಮೂರು ಚಿನ್ನದ ಪದಕಗಳನ್ನು ತಂದುಕೊಟ್ಟಿದೆ.

ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡಿ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಉತ್ತಮ ಅಂಕ ಗಳಿಸಿ ಪದಕಗಳನ್ನು ಪಡೆದಿದ್ದಾರೆ. ಎಚ್‌.ರಾಜೇಶ್ವರಿ ಅವರು ರಾಜ್ಯಪಾಲರಿಂದ ಚಿನ್ನದ ಪದಕ ಸ್ವೀಕರಿಸುವಾಗ ಸಭೀಕರ ಸಾಲಿನಲ್ಲಿದ್ದ, ರಾಜೇಶ್ವರಿಯ ಅಜ್ಜಿ ಗೌರಮ್ಮ ಸೆರಗಿನಿಂದ ಆನಂದಭಾಷ್ಪ ಒರೆಸಿಕೊಳ್ಳುತ್ತಿದ್ದರು. ಮೊಮ್ಮಗಳು ಪುಸ್ತಕಗಳಿಗಾಗಿ ಕಾಸು ಕೇಳಿದಾಗ, ಇದೇ ಗೌರಮ್ಮ ‘ಅವರಿವರ ಬಳಿ ಕೇಳಿ, ಹಣ ಹೊಂದಿಸಿ ಕೊಡುತ್ತಿದ್ದರು’ ಎಂದು ರಾಜೇಶ್ವರಿ ಭಾವುಕರಾಗಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಚಿತ್ರದುರ್ಗದ ಸರ್ಕಾರಿ ಕಾಲೇಜಿನಲ್ಲಿ ಸದ್ಯ ಬಿ.ಇಡಿ. ಕೋರ್ಸ್‌ ಮಾಡುತ್ತಿದ್ದೇನೆ. ಮೊದಲು ಶಿಕ್ಷಕಿ ಆಗಬೇಕು. ಜತೆಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿ ಕೆ.ಎ.ಎಸ್‌. ಅಧಿಕಾರಿ ಆಗಬೇಕು ಎಂಬ ಗುರಿಯಿದೆ. ಆದರೆ, ರಾಜ್ಯ ಸರ್ಕಾರದಿಂದ ವಾರ್ಷಿಕವಾಗಿ ಸಿಗುವ ₹2,500 ವಿದ್ಯಾರ್ಥಿವೇತನ ವಿದ್ಯಾಭ್ಯಾಸದ ಪರಿಕರಗಳನ್ನು ಖರೀದಿಸಲು ಸಾಲುತ್ತಿಲ್ಲ ಎಂದು ಕಷ್ಟವನ್ನು ಅವರು ಹೇಳಿಕೊಂಡರು.

ಮನೆಯಲ್ಲಿ ತೆಲುಗು, ಮನದಲ್ಲಿ ಕನ್ನಡ: ಪಾವಗಡ ತಾಲ್ಲೂಕಿನ ರಾಯಚರ್ಲು ಹಳ್ಳಿಯ ಆರ್‌.ವಿ.ಶ್ರೀಧರ್‌ ಅವರ ಮನೆಯಿಂದ ಒಂದೇ ಕಿ.ಮೀ. ನಡೆದರೆ, ರಾಜ್ಯದ ಗಡಿ ಸಿಗುತ್ತದೆ, ಮುಂದಿನದು ಆಂಧ್ರಪ್ರದೇಶ. ಇವರ ಮನೆಭಾಷೆ ತೆಲುಗು. ತೆಲುಗಿನ ಪ್ರಭಾವಳಿ ನಡುವೆಯೇ ಕನ್ನಡ ಅಧ್ಯಯನವನ್ನು ಆಸಕ್ತಿಯಿಂದ ಮಾಡಿದ ಶ್ರೀಧರ್‌ ಅವರ ಕೊರಳು ಈಗ ಬಂಗಾರದ ಪದಕವನ್ನು ಅಲಂಕರಿಸಿದೆ.

ಪ್ರಾಥಮಿಕ ಶಾಲಾ ಹಂತದಿಂದ ಪದವಿ ಹಂತದ ವರೆಗೆ ಸಿಕ್ಕ ಕನ್ನಡ ಭಾಷಾ ಶಿಕ್ಷಕರು ಪ್ರಭಾವ ಬೀರಿದರು. ಅವರಿಂದಾಗಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಈ ಸ್ನಾತಕೋತ್ತರ ಪದವಿಯೊಂದಿಗೆ ಕನ್ನಡ ಭಾಷೆಯಲ್ಲಿ ಜೆಆರ್‌ಎಫ್‌(ಜ್ಯೂನಿಯರ್‌ ರಿಸರ್ಜ್‌ ಫೆಲೋಷಿಪ್‌)ಗೆ ಅರ್ಹತೆ ಗಳಿಸಿದ್ದೇನೆ. ಮುಂದೆ ಹಳಗನ್ನಡದ ಸಾಹಿತ್ಯದ ಕುರಿತು ಪಿಎಚ್‌.ಡಿ. ಮಾಡಬೇಕು ಅಂದುಕೊಂಡಿದ್ದೇನೆ ಎನ್ನುತ್ತಾ, ‘ನೀವೂ ಕೇಳಿ ಹಳಗನ್ನಡವ’ ಎಂದು ಪಂಪನ ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸನ ಕರ್ನಾಟ ಭಾರತ ಕಥಾ ಮಂಜರಿ, ರನ್ನನ ಗದಾಯುದ್ಧ ಕಾವ್ಯದಲ್ಲಿನ ಇಷ್ಟದ ಸಾಲುಗಳನ್ನು ಸ್ಪುಟಿಕವಾಗಿ ಹಂಚಿಕೊಂಡರು.

ಗಣಿತದ ಸಾಧಕನಿಗೆ ಸಾಹಿತ್ಯದ ಅಭಿರುಚಿ: ಎಂ.ಎಸ್ಸಿ.ಗಣಿತದಲ್ಲಿ 5 ಪದಕಗಳನ್ನು ಗಳಿಸಿರುವ ಎಚ್‌.ಎಸ್.ಮನೋಹರ್‌ ಅವರಿಗೆ ಸಾಹಿತ್ಯದಲ್ಲಿಯೂ ಆಸಕ್ತಿ.

ಎಸ್‌.ಎಲ್‌.ಭೈರಪ್ಪ ಅವರ ಕಾದಂಬರಿಗಳೆಂದರೆ ನನಗೆ ಇಷ್ಟ. ಪಠ್ಯದ ಓದಿನೊಂದಿಗೆ ಅಮ್ಮ ನಡೆಸುವ ಸ್ಟೇಷನರಿ ಅಂಗಡಿ ನೋಡಿಕೊಳ್ಳಲು, ಕಾದಂಬರಿ ಓದಲು ಸಮಯ ಹೊಂದಿಸಿಕೊಳ್ಳುತ್ತಿದ್ದೆ ಎಂದು ಮನೋಹರ್‌ ಹೇಳಿದರು.

ಬಿ.ಎಸ್ಸಿ. ಸೇರಿದಾಗಲೇ ಅಪ್ಪ ನಮ್ಮನ್ನು ಅಗಲಿದರು. ಅವರಿದ್ದರೆ ಈ ಮೆಡಲ್‌ಗಳನ್ನು ನೋಡಿ ತುಂಬಾನೇ ಸಂತಸ ಪಡೆಯುತ್ತಿದ್ದರು ಎಂದಾಗ ಪಕ್ಕದಲ್ಲೇ ಇದ್ದ ಮನೋಹರ್‌ ಅವರ ಅಮ್ಮ ಟಿ.ಶೋಭಾ ಭಾವುಕರಾದರು. ಸಿಹಿಮುತ್ತನ್ನು ಮನೋಹರ್‌ ಗಲ್ಲಕ್ಕೆ ನೀಡಿ, ಸಂತಸದ ವಾತಾವರಣ ಸೃಷ್ಟಿಸಿದರು.

***

ಕಾಲಿಲ್ಲದ ಮಂಜುಳಾಗೆ ಚಿನ್ನ

ತುಮಕೂರಿನ ಚಿಕ್ಕಪೇಟೆಯ ನಿವಾಸಿ ಟಿ.ಎಸ್‌.ಮಂಜುಳಾ ಅವರು ಅಂಗವಿಕಲೆ. ಕಾಲು ಊನದ ವೈಕಲ್ಯ ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. ಸಾಮಾಜಿಕ ಕಾರ್ಯ(ಎಂ.ಎಸ್‌.ಡಬ್ಲ್ಯೂ.)ದಲ್ಲಿ ಅವರು ಚಿನ್ನದ ಪದಕ ಗಳಿಸಿದ್ದಾರೆ.

ಬಿ.ಎಸ್‌.ಡಬ್ಲ್ಯೂ.ನಲ್ಲಿಯೂ(2018) ಇವರು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

***

ಪಿಎಚ್‌.ಡಿ. ಪಡೆದ ದಂಪತಿ

ಉಡುಪಿಯ ಡಿ.ಎಸ್‌.ಅಮೃತೇಶ್ ಆಚಾರ್ಯ ಹಾಗೂ ಅವರ ಪತ್ನಿ ಎಂ.ವಿಜಯಲಕ್ಷ್ಮಿ ಅವರಿಗೆ ಪಿಎಚ್‌.ಡಿ. ಪದವಿ ಪ್ರದಾನ ಮಾಡಲಾಯಿತು.

ಅಮೃತೇಶ್‌ ಸಂಸ್ಕೃತದ ‘ಅಲಂಕಾರ ಶಾಸ್ತ್ರ’ದಲ್ಲಿ ಹಾಗೂ ವಿಜಯಲಕ್ಷ್ಮಿ ಅವರು ಅರ್ಥಶಾಸ್ತ್ರದ ‘ಆರೋಗ್ಯ ವಿಮೆ’ಯಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ, ಈ ಪದವಿ ಗಳಿಸಿದ್ದಾರೆ. ಇಬ್ಬರೂ ಬೋಧನಾ ವೃತ್ತಿಯನ್ನು ಮಾಡುತ್ತಲೇ ಈ ಪದವಿ ಗಳಿಸಿದ್ದಾರೆ. ಅವರು ಮಗಳನ್ನು ಘಟಿಕೋತ್ಸವಕ್ಕೆ ಕರೆತಂದಿದ್ದರು.

***

ಪಾಠ ಮಾಡುವ ಶೈಲಿಗೆ ಮಾರುಹೋದೆ

ಪಿಯು ಓದುತ್ತಿರುವಾಗಲೇ ನನಗೆ ರಾಜ್ಯಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು. ನಮ್ಮ ಅಧ್ಯಾಪಕರು ಪಾಠ ಮಾಡುತ್ತಿದ್ದ ಶೈಲಿ ಹಾಗೂ ಅವರುಗಳು ವಿಷಯವನ್ನು ಮನದಟ್ಟು ಮಾಡುತ್ತಿದ್ದ ಪರಿಯನ್ನು ನೋಡಿ ನಾನೂ ಅವರಂತೆ ಅಧ್ಯಾಪಕಿ ಆಗಬೇಕು ಅಂದುಕೊಂಡೆ. ನನ್ನ ಈ ಆಸೆಗೆ ನೀರೆರೆದು ಪೋಷಿಸಿದವರು ನಮ್ಮ ವಿಭಾಗದ ಮುಖ್ಯಸ್ಥರಾದ ಮೀನಾಕ್ಷಿ ಮೇಡಂ, ಅವರ ಮಾರ್ಗದರ್ಶನದಿಂದ ಚಿನ್ನದ ಪದಕಗಳನ್ನು ಗಳಿಸಲು ಸಾಧ್ಯವಾಯಿತು. ಮುಂದೆ ಪಿಎಚ್‌ಡಿ ಮಾಡಬೇಕು ಅಂದುಕೊಂಡಿರುವೆ.

- ಎಂ.ಭಾನುಮತಿ, 2 ಚಿನ್ನದ ಪದಕ, ರಾಜ್ಯಶಾಸ್ತ್ರ

***

ಪರಿಸ್ಥಿತಿಯೇ ಸಾಧನೆಗೆ ಪ್ರೇರಣೆ

ನನಗೆ ನನ್ನ ಮನೆಯ ಪರಿಸ್ಥಿತಿಯೇ ಸಾಧನೆ ಮಾಡಲು ಪ್ರೇರಣೆ. ನಮ್ಮ ತಂದೆ ಲಾರಿ ಚಾಲಕರಾಗಿ ಕೆಲಸ ಮಾಡುತ್ತಾರೆ. ಅಲ್ಲದೇ ಕಷ್ಟವನ್ನು ನೋಡಿ ಬೆಳೆದವನು ನಾನು. ಆದ ಕಾರಣ ಓದು ಮುಗಿದ ತಕ್ಷಣ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಪದಕ ಬರುವ ನಿರೀಕ್ಷೆ ಇರಲಿಲ್ಲ, ಇದರಿಂದ ನಮ್ಮ ತಂದೆ– ತಾಯಿ ಹೆಚ್ಚು ಸಂತೋಷವಾಗಿದ್ದಾರೆ. ನನ್ನ ಈ ಸಾಧನೆಗೆ ಅಧ್ಯಾಪಕರ ಹಾಗೂ ಸ್ನೇಹಿತರ ಪ್ರೋತ್ಸಾಹವೂ ಕಾರಣ.

- ಎಸ್‌.ಸಾಧಿಕ್‌ ಪಾಷಾ, 2 ಚಿನ್ನದ ಪದಕ, ಎಂ.ಎಸ್‌.ಡಬ್ಲ್ಯೂ.

***

ತಂದೆಗೆ ಸಹಾಯಮಾಡುವ ಉದ್ದೇಶ

ನಮ್ಮದು ವ್ಯವಸಾಯದ ಹಿನ್ನೆಲೆಯ ಕುಟುಂಬ. ಸತತ ಬರಗಾಲದಿಂದ ನಮ್ಮ ಪಾವಗಡದ ಕಡೆ ಸರಿಯಾಗಿ ಏನನ್ನೂ ಬೆಳೆಯದ ಪರಿಸ್ಥಿತಿ ಇದೆ. ಆದ ಕಾರಣ ನಾನು ಓದಿನ ಕಡೆ ಹೆಚ್ಚು ಗಮನ ಹರಿಸಿದೆ. ದುಡಿಯಬೇಕು, ನಮ್ಮ ತಂದೆಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ಓದಿದೆ. ಇದರಿಂದ ಚಿನ್ನದ ಪದಕ ಬರುತ್ತದೆ ಎನ್ನುವ ನಿರೀಕ್ಷೆ ನನಗೆ ಇರಲಿಲ್ಲ. ಪ್ರಸ್ತುತ ಪಾವಗಡದ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಪ್ರಾಣಿ ವಿಜ್ಞಾನದಲ್ಲಿ ಸಂಶೋಧನೆ ಮಾಡಬೇಕು ಅಂದುಕೊಂಡಿರುವೆ.

- ಪಿ.ಎನ್‌.ಶೋಭಾ, 2 ಚಿನ್ನದ ಪದಕ, ಪ್ರಾಣಿವಿಜ್ಞಾನ

***

ರ‍್ಯಾಂಕ್ ವಿಜೇತರ ಪಟ್ಟಿ ಓದುವಾಗ ಗೊಂದಲ

ಚಿನ್ನದ ಪದಕ ಪ್ರದಾನ ಹಾಗೂ ರ‍್ಯಾಂಕ್ ವಿಜೇತರ ಪಟ್ಟಿ ಓದುವಾಗ ಕ್ಷಣ ಕಾಲ ಗೊಂದಲ ಉಂಟಾಯಿತು. ಹೆಸರುಗಳನ್ನು ಹಿಂದು–ಮುಂದು ಓದಿದ ಕಾರಣ ಪ್ರಮಾಣಪತ್ರಗಳು ಅದಲು ಬದಲಾಗಿ ಬೇರೆ, ಬೇರೆ ವಿದ್ಯಾರ್ಥಿಗಳ ಕೈಗೆ ಸೇರಿದವು. ಇದರಿಂದ ಗೊಂದಲ ಉಂಟಾದರೂ ಪರೀಕ್ಷಾಂಗ ವಿಭಾಗದ ಕುಲಸಚಿವರು ಕೈಸನ್ನೆ ಮಾಡಿ ಕಾರ್ಯಕ್ರಮ ಮುಂದುವರೆಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT