ಗುರುವಾರ , ಜನವರಿ 30, 2020
19 °C

ಪ್ರಧಾನಿ ಭೇಟಿ ವೇಳೆ ಹೊಳೆಯುತ್ತಿದ್ದ ಬಿ.ಎಚ್‌. ರಸ್ತೆ ದುಸ್ಥಿತಿಯತ್ತ ಮರಳುತ್ತಿದೆ

ಪೀರ್‌ಪಾಷ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಜ.2ರಂದು ಬಂದಾಗ ಲಕಲಕನೆ ಹೊಳೆಯುತ್ತಿದ್ದ ಬಿ.ಎಚ್‌.ರಸ್ತೆಯು ಈಗ ಮತ್ತೆ ದುಸ್ಥಿತಿಗೆ ಮರಳುತ್ತಿದೆ.

ಬಟವಾಡಿಯಿಂದ ಭದ್ರಮ್ಮ ವೃತ್ತದ ವರೆಗೆ ಹಾಕಿರುವ ಡಾಂಬರಿನ ತೇಪೆ ಈಗ ಅಲ್ಲಲ್ಲಿ ಕಿತ್ತು ಬರುತ್ತಿದೆ. ಈ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.  

ಭದ್ರಮ್ಮ ವೃತ್ತದ ಸುತ್ತ ಮೆತ್ತಿರುವ ಡಾಂಬರು ಸಡಿಲಗೊಂಡು, ಅದರಲ್ಲಿನ ಜಲ್ಲಿಯ ಹರಳುಗಳು ರಸ್ತೆ ತುಂಬ ಹರಡಿಕೊಂಡಿವೆ. ಪ್ರಧಾನಿ ಬರುವ ದಿನ ನುಣುಪಾಗಿದ್ದ ರಸ್ತೆ ಈಗ ಒರಟಾಗಿದೆ. ಪ್ರಧಾನಿ ಸಂಚರಿಸಿದ ದಾರಿಯಲ್ಲಿ ಈಗ ಮತ್ತೆ ದೂಳಿನ ಪದರ ಸೃಷ್ಟಿಯಾಗುತ್ತಿದೆ. 

ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಾಮಗಾರಿಗಳಿಗಾಗಿ ರಸ್ತೆ ಬದಿಯಲ್ಲಿ ಅಗೆದಿದ್ದ ಗುಂಡಿಗಳನ್ನು ಪ್ರಧಾನಿ ಭೇಟಿ ವೇಳೆ ಮುಚ್ಚಲಾಗಿತ್ತು. ಈಗ ಅವು ಪುನಃ ಪ್ರತ್ಯಕ್ಷವಾಗುತ್ತಿವೆ.  ಇದರಿಂದ ಕಳೆದ ವರ್ಷದಂತೆ ಈ ವರ್ಷವೂ ವಾಹನ ಸವಾರರಿಗೆ ದೂಳಿನ ಮಜ್ಜನ ಆಗುತ್ತಿದೆ.

ಪ್ರಧಾನಿಯು ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಹೋಗಲು ತಿರುವು ಪಡೆದ ಭದ್ರಮ್ಮ ವೃತ್ತದ ವರೆಗೆ ಮಾತ್ರ ರಸ್ತೆಗೆ ಡಾಂಬರು ಹಾಕಲಾಗಿದೆ. ಅಲ್ಲಿಂದ ಮುಂದೆ ಸಾಗುವ ರಸ್ತೆಯಲ್ಲಿ ಗುಂಡಿಗಳ ದರ್ಶನವಾಗುತ್ತದೆ.

ಅರ್ಧ ಕಾಮಗಾರಿ: ಬಟವಾಡಿಯಿಂದ ಗುಬ್ಬಿ ಗೇಟ್‌ ವರೆಗಿನ ಬಿ.ಎಚ್‌.ರಸ್ತೆ ಅಭಿವೃದ್ಧಿಗಾಗಿ ಟೆಂಡರ್‌ ಆಗಿದೆ. ಈ ಕಾಮಗಾರಿಯನ್ನು ಕೆ.ರಾಮಲಿಂಗೇಗೌಡ ಎಂಬುವವರು ಗುತ್ತಿಗೆ ಪಡೆದಿದ್ದಾರೆ. ಕಾಮಗಾರಿ ಮಾತ್ರ ಈವರೆಗೂ ಅರ್ಧ ಮಾತ್ರ (ಭದ್ರಮ್ಮ ವೃತ್ತದ ವರೆಗೆ) ಆಗಿದೆ. 

‘ಪ್ರಧಾನಿ ಕಾರ್ಯಕ್ರಮಕ್ಕಾಗಿ ತುರ್ತಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಯಿತು. ಹಾಗಾಗಿ ಅರ್ಧ ಕೆಲಸ ಆಗಿದೆ. ಉಳಿದರ್ಧ ರಸ್ತೆ ಕಾಮಗಾರಿಯನ್ನು ಇನ್ನು ಹದಿನೈದು ದಿನಗಳಲ್ಲಿ ಆರಂಭಿಸುತ್ತೇವೆ. ಕೆಲಸ ಶುರು ಮಾಡಿದ ಹದಿನೈದು ದಿನಗಳ ಒಳಗೆ ಗುಬ್ಬಿ ಗೇಟ್‌ ವರೆಗಿನ ರಸ್ತೆ ಹೊಸ ರೂಪ ಪಡೆಯಲಿದೆ’ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾತು.

‘ಬಡವಾಡೆಯಿಂದ ಭದ್ರಮ್ಮ ವೃತ್ತದ ವರೆಗೆ 40 ಮಿಲಿಮೀಟರ್‌ ದಪ್ಪದ ಡಾಂಬರು ಹಾಕಿದ್ದೇವೆ. ಈ ರಸ್ತೆ ಸರಾಸರಿ 8.5 ಮೀಟರ್‌ ಅಗಲ, 6 ಕಿ.ಮೀ. ಉದ್ದವಿದೆ’ ಎಂದು ಹೆಸರು ಉಲ್ಲೇಖಿಸಬೇಡಿ ಎಂಬ ಷರತ್ತಿನ ಮೇರೆಗೆ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಒಬ್ಬರು ತಿಳಿಸಿದರು.

*

ಸ್ಥಳೀಯಾಡಳಿತ ಅವಸರವಾಗಿ ರಸ್ತೆಯನ್ನು ಅಭಿವೃದ್ಧಿಪಡಿಸಿದೆ. ಕಾಮಗಾರಿ ಮೇಲ್ನೋಟಕ್ಕೆ ಕಳಪೆಯಾಗಿ ಕಾಣುತ್ತಿದೆ. ಇದನ್ನು ಎಲ್ಲರೂ ಪ್ರಶ್ನಿಸಿ, ತೆರಿಗೆ ಹಣದ ಪೋಲನ್ನು ತಡೆಯಬೇಕು ಎನ್ನುತ್ತಾರೆ ಅಮರಜ್ಯೋತಿ ನಗರದ ಲೋಕೋಪಯೋಗಿ ಇಲಾಖೆ ನಿವೃತ್ತ ಎಂಜಿನಿಯರ್‌ ಡಿ.ದೇವರಾಜು.

ಗಣ್ಯವ್ಯಕ್ತಿ ಒಬ್ಬರಿಗಾಗಿ ಮಾತ್ರ ಕಾಮಗಾರಿಗಳನ್ನು ನಡೆಸಬಾರದು. ಪ್ರಧಾನಿ ಬಂದ ದಿನ ರಸ್ತೆ ಹೇಗಿತ್ತೋ, ಅದೇ ಸುಸ್ಥಿತಿಯನ್ನು ವರ್ಷಪೂರ್ತಿ ಕಾಪಾಡಿಕೊಂಡರೆ, ಎಲ್ಲರಿಗೂ ಅನುಕೂಲ ಆಗುತ್ತದೆ ಅಲ್ಲವೇ? ಎಂದು ಜಯನಗರದ ಬಿ.ಎಲ್‌.ಕುಮುದಾಮಣಿ ಹೇಳಿದ್ದಾರೆ. 

ಪ್ರಧಾನಿಗಾಗಿ ರಸ್ತೆಯ ರೂಪವನ್ನು ಮೂರು ದಿನಗಳಲ್ಲಿ ಬದಲಿಸಿದರು. ಎಲ್ಲ ಕಾಮಗಾರಿಗಳು ಇಷ್ಟೇ ತ್ವರಿತಗತಿಯಲ್ಲಿ ನಡೆದರೆ, ನಗರದಲ್ಲಿ ಮೂಲಸೌಕರ್ಯಗಳ ಕೊರತೆಯೇ ಇರುವುದಿಲ್ಲ ಎನ್ನುತ್ತಾರೆ ಬೆಳಗುಂಬದ ಆಟೋ ಚಾಲಕ ಎನ್‌.ರಂಗನಾಥ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು