ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಕ್ಷೇತ್ರ: ದಿನಕ್ಕೊಂದು ಹೆಸರು ಮುನ್ನೆಲೆಗೆ; ಗೊಂದಲದಲ್ಲಿ ಕಾರ್ಯಕರ್ತರು

ತುಮಕೂರು ಲೋಕಸಭಾ ಕ್ಷೇತ್ರ: ಕುತೂಹಲ ಮೂಡಿಸಿದ ಅಭ್ಯರ್ಥಿಗಳ ಹೆಸರು
Published 16 ಜನವರಿ 2024, 21:10 IST
Last Updated 16 ಜನವರಿ 2024, 21:10 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಗೆ ಇನ್ನೂ ಮೂರ‍್ನಾಲ್ಕು ತಿಂಗಳು ಇರುವಾಗಲೇ ತುಮಕೂರು ಕ್ಷೇತ್ರ ನಾನಾ ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ.

ಕಳೆದ ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ಈ  ಕ್ಷೇತ್ರದಿಂದ ಈ ಬಾರಿ ದಿನಕ್ಕೊಂದು ಹೆಸರು ಚಾಲ್ತಿಗೆ ಬರುತ್ತಿದೆ. ಮೂರು ಪಕ್ಷಗಳು ಸರದಿಯಂತೆ ಕೆಲವು ದಿನಗಳಿಂದ ಬೇರೆ, ಬೇರೆ ನಾಯಕರ ಹೆಸರು ತೇಲಿ ಬಿಡುತ್ತಿವೆ. ಇದರಿಂದ ಚುನಾವಣೆಗೂ ಮುಂಚೆಯೇ ಕ್ಷೇತ್ರ ರಂಗೇರಿದೆ.

ಬಿಜೆಪಿ–ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಈ ಕ್ಷೇತ್ರ ಯಾರ ಮಡಿಲಿಗೆ ಬೀಳಲಿದೆ ಎಂಬುವುದು ಇನ್ನೂ ನಿರ್ಧಾರವಾಗಿಲ್ಲ. ಬಿಜೆಪಿ ಸಂಸದ ಜಿ.ಎಸ್.ಬಸವರಾಜು ನಿವೃತ್ತಿ ಘೋಷಿಸಿದ್ದಾರೆ.

ಆರಂಭದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಹೆಸರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಕೇಳಿಬಂದಿತ್ತು. ಕಾಂಗ್ರೆಸ್ ಸೇರಬಹುದು ಎಂಬ ವದಂತಿ ದಟ್ಟವಾಗಿತ್ತು. ಕಾಂಗ್ರೆಸ್‌ ಕಣಕ್ಕಿಳಿಸಲಿದೆ ಎಂದು ಹೇಳಲಾಗಿತ್ತು. ಈಚೆಗೆ ಸೋಮಣ್ಣ ದೆಹಲಿಗೆ ಹೋಗಿ ವರಿಷ್ಠರನ್ನು ಕಂಡು ಬಂದ ನಂತರ ಅವರದೇ ಸಮುದಾಯದ ಜೆ.ಸಿ.ಮಾಧುಸ್ವಾಮಿ ಹೆಸರು ತೇಲಿ ಬಿಡಲಾಗಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರನ್ನು ಸಂಸದ ಜಿ.ಎಸ್.ಬಸವರಾಜು ಪ್ರಸ್ತಾಪಿಸಿದ್ದಾರೆ.

ಇದಕ್ಕೂ ಮೊದಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಚರ್ಚೆಗೆ ಎಳೆದು ತರಲಾಯಿತು. ಎಚ್‌.ಡಿ.ದೇವೇಗೌಡರೇ ಮತ್ತೆ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂದೂ ಹೇಳಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಎಸ್.ಪಿ.ಮುದ್ದಹನುಮೇಗೌಡ ಹೆಸರು ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಅವರು ಇತ್ತೀಚೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಮಗೆ ಟಿಕೆಟ್ ಸಿಗಲಿದೆ ಎಂಬ ಉತ್ಸಾಹದಲ್ಲಿದ್ದಾರೆ.

‘ಎಚ್.ಡಿ.ದೇವೇಗೌಡ ಕುಟುಂಬದವರು ಸ್ಪರ್ಧಿಸಿದರೆ ನಾನೂ ಕಣಕ್ಕಿಳಿಯುತ್ತೇನೆ’ ಎಂದು ಹೇಳುತ್ತಿದ್ದ ಸಚಿವ ಕೆ.ಎನ್.ರಾಜಣ್ಣ ಈಗ ಹಿಂದೆ ಸರಿದಿದ್ದಾರೆ. ‘ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಹೇಳಿದರೆ ಮಾತ್ರ ಸ್ಪರ್ಧಿಸುವೆ’ ಎನ್ನುತ್ತಿದ್ದಾರೆ.

ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ತಮ್ಮ ಮಗ ಸಂತೋಷ್ ಜಯಚಂದ್ರಗೆ ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ. ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್‌ ಮೌರ್ಯ ಅವರಿಗೆ ಟಿಕೆಟ್ ನೀಡುವಂತೆ ಕುರುಬ ಸಮುದಾಯ ಒತ್ತಾಯಿಸುತ್ತಿದೆ. ಹೀಗೆ ದಿನಕ್ಕೊಂದು ಹೆಸರು ಹೊರ ಬರುತ್ತಿರುವ ಕಾರಣ ಮೂರು ಪಕ್ಷಗಳ ಕಾರ್ಯಕರ್ತರು ಗೊಂದಲದಲ್ಲಿ ಬಿದ್ದಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್‌ ‘ಸಮರ್ಥ’ ಅಭ್ಯರ್ಥಿಗಾಗಿ ಶೋಧ ನಡೆಸಿವೆ. ಈ ಬಾರಿಯೂ ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರನ್ನೇ ಕಣಕ್ಕಿಳಿಸಲು ಎರಡೂ ಪಕ್ಷಗಳು ಚಿಂತನೆ ನಡೆಸಿವೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಈ ಎರಡು ಸಮುದಾಯದ ಅಭ್ಯರ್ಥಿಗಳ ಹೆಸರುಗಳೇ ಪ್ರಮುಖವಾಗಿ ಚರ್ಚೆಯಾಗುತ್ತಿವೆ.

ಈ ಕ್ಷೇತ್ರದಿಂದ ಕುರುಬ ಸಮುದಾಯದ ಸಿ.ಎನ್.ಭಾಸ್ಕರಪ್ಪ ಜನತಾ ಪಕ್ಷದಿಂದ ಆಯ್ಕೆ ಆಗಿರುವುದನ್ನು ಹೊರತುಪಡಿಸಿದರೆ ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಗೆದ್ದಿರುವುದೇ ಹೆಚ್ಚು. ಅದರಲ್ಲೂ ಹೆಚ್ಚಾಗಿ ಲಿಂಗಾಯತ ಸಮುದಾಯದವರೇ ಆಯ್ಕೆಯಾಗುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT