ಗುರುವಾರ , ಫೆಬ್ರವರಿ 25, 2021
24 °C
ಲಾಕ್‌ಡೌನ್: ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಶುಲ್ಕ ಸಂಗ್ರಹ ಕುಸಿತ

ತುಮಕೂರು ಪಾಲಿಕೆಗೆ ಆರ್ಥಿಕ ಮುಗ್ಗಟ್ಟು

ಪೀರ್‌ಪಾಷ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ನೀರು ಬಳಕೆದಾರರಿಂದ ಮಹಾನಗರ ಪಾಲಿಕೆಗೆ ಏಪ್ರಿಲ್‌ ತಿಂಗಳಿನಲ್ಲಿ ಸಂಗ್ರಹವಾಗಿರುವ ನೀರಿನ ಶುಲ್ಕ ₹ 80 ಲಕ್ಷ. ಪ್ರತಿ ತಿಂಗಳು ಸರಾಸರಿ ₹ 2 ಕೋಟಿ ಶುಲ್ಕ ಪಾಲಿಕೆಯ ಬೊಕ್ಕಸಕ್ಕೆ ಬರುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ನೀರಿನ ವರಮಾನ ಕುಸಿದಿದೆ.

ಶುಲ್ಕದಿಂದಲೇ ಸಿಬ್ಬಂದಿ ವೇತನ ಹಾಗೂ ನಿರ್ವಹಣಾ ವೆಚ್ಚವನ್ನು ಸರಿದೂಗಿಸುತ್ತಿದ್ದ ಪಾಲಿಕೆಗೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.

ಬಹುತೇಕ ಜನರು ಪಾಲಿಕೆಯ ಸೇವಾ ಕೇಂದ್ರಗಳಿಗೆ ಹೋಗಿ ಬಿಲ್‌ ಕಟ್ಟುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಶುಲ್ಕ ಪಾವತಿಗೆ ಪಾಲಿಕೆಯ ಜಾಲತಾಣಗಳ ಲಿಂಕ್‌ ನೀಡಿದ್ದರೂ, ಬಳಕೆದಾರರಿಂದ ನಿರೀಕ್ಷಿಸಿದಷ್ಟು ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ, ಬಹುತೇಕ ಜನರು ನೀರಿನ ಶುಲ್ಕ ಪಾವತಿಸದೆ ಸುಮ್ಮನಾಗಿದ್ದಾರೆ.

ಲಾಕ್‌ಡೌನ್‌ನಿಂದ ಶುಲ್ಕ ಸಂಗ್ರಹಕ್ಕೆ ದೊಡ್ಡ ಹೊಡೆದ ಬಿದ್ದಿದೆ. ಇದರಿಂದ ನೀರು ಸರಬರಾಜು ವಿಭಾಗದ ಸಿಬ್ಬಂದಿ, ಪೌರಕಾರ್ಮಿಕರ ಸಂಬಳ ನೀಡಲು ಸಹ ಹಣಕಾಸಿನ ಕೊರತೆ ಎದುರಾಗಲಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಲಾಕ್‌ಡೌನ್‌ ಇದ್ದರೂ, ಪಾಲಿಕೆಯ ಬೊಕ್ಕಸ ತುಂಬಿಸಲು ಕರ ಸಂಗ್ರಹಿಸುವ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ ನೀರು, ಒಳಚರಂಡಿ ನಿರ್ವಹಣೆ ಶುಲ್ಕ ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇದಕ್ಕೂ ನಿರೀಕ್ಷಿಸಿದ ಮಟ್ಟದ ಸ್ಪಂದನೆ ಸಿಗುತ್ತಿಲ್ಲ. ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಶೇ 41ರಷ್ಟು ನೀರಿನ ಶುಲ್ಕ ಮಾತ್ರ ಸಂಗ್ರಹ ಆಗಿದೆ ಎಂದು ಅವರು ಹೇಳಿದರು.

ಆಸ್ತಿ ತೆರಿಗೆ ಪಾವತಿಗೆ ಅವಕಾಶ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರು 2020–21ನೇ ಸಾಲಿನ ತೆರಿಗೆಗಳನ್ನು ಪಾವತಿಸುವ ದಿನಾಂಕವನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ.

ಆಸ್ತಿ ಮಾಲೀಕರು www.tumakurucitycorp.org ಅಥವಾ www.karnatakaone.fov.in ಜಾಲತಾಣದ ಮೂಲಕವೂ ತೆರಿಗೆ ಪಾವತಿಸಬಹುದು. ಮನೆ ಬಾಗಿಲಿಗೆ ಬರುವ ಕರವಸೂಲಿಗಾರರಿಗೆ ಆಸ್ತಿ ತೆರಿಗೆ, ನೀರಿನ ಶುಲ್ಕ, ಒಳಚರಂಡಿ ನಿರ್ವಹಣೆ ಶುಲ್ಕ ಪಾವತಿಸುವಂತೆ ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಮನವಿ ಮಾಡಿದ್ದಾರೆ.

ಈ ಹಿಂದೆ ಪ್ರತಿ ತಿಂಗಳು ₹ 10 ಕೋಟಿ ವರೆಗೂ ಆಸ್ತಿ ತೆರಿಗೆ ಸಂಗ್ರಹ ಆಗುತ್ತಿತ್ತು. ಏಪ್ರಿಲ್ ತಿಂಗಳಿನಲ್ಲಿ ₹ 3 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಅಂಕಿ–ಅಂಶ

3.80 ಲಕ್ಷ
ತುಮಕೂರು ನಗರದ ಜನಸಂಖ್ಯೆ

₹ 2 ಕೋಟಿ

ಪ್ರತಿ ತಿಂಗಳು ಸಂಗ್ರಹ ಆಗುತ್ತಿದ್ದ ನೀರಿನ ಶುಲ್ಕ

₹ 80 ಲಕ್ಷ

ಏಪ್ರಿಲ್‌ ತಿಂಗಳಿನಲ್ಲಿ ಸಂಗ್ರಹವಾದ ನೀರಿನ ಶುಲ್ಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು