ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ತಂದ ಬದನೆ ಬೇಸಾಯ

ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ಸು ಕಂಡ ಸಹೋದರರು
Last Updated 6 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಹುಲಿಯೂರುದುರ್ಗ: ‘ಮಳೆ ಬರುವಂತಿಲ್ಲ ಬೆಳೆ ತೆಗೆಯುವಂತಿಲ್ಲ’ ಎನ್ನುವ ಅತಂತ್ರ ಪರಿಸ್ಥಿತಿ ರೈತರದ್ದಾಗಿದೆ. ಮಳೆಯ ಕಣ್ಣಾಮುಚ್ಚಾಲೆಯಿಂದ ಬೇಸತ್ತು ಸಾಂಪ್ರದಾಯಿಕ ಬೆಳೆಗಳಾದ ಭತ್ತ, ರಾಗಿಗೆ ಪರ್ಯಾಯವಾಗಿ ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ಸು ಕಾಣುತ್ತಿದ್ದಾರೆ ಈ ಸಹೋದರರು.

ಕೆ.ಹೊನ್ನಮಾಚನಹಳ್ಳಿಯ ಎಚ್.ಜಿ.ಶ್ರೀಧರ್ ಹಾಗೂ ಎಚ್.ಜಿ.ಆನಂದ್ ಬದನೆ ಬೆಳೆದು ಲಾಭ ಕಾಣುವ ಮೂಲಕ ಕೃಷಿಯಲ್ಲಿ ಪರಿವರ್ತನೆಯ ದಾರಿ ಹಿಡಿದಿದ್ದಾರೆ.

ರಾಮೇದೇವರ ಪಾಳ್ಯದ ಲಿಂಗೇಶ್ ಎಂಬುವವರು ಬದನೆ ಕೃಷಿಯಲ್ಲಿ ಪಡೆದ ಯಶಸ್ಸು ಇವರಿಗೆ ಪ್ರೇರಣೆ ಆಯಿತು. ಹದಿನೈದು ಗುಂಟೆಯಲ್ಲಿ ಬೆಳೆದ ಬದನೆ ₹ 1 ಲಕ್ಷ ಆದಾಯ ತಂದುಕೊಟ್ಟಿದ್ದು ಇವರನ್ನೂ ಬದನೆ ಬೇಸಾಯದಲ್ಲಿ ತೊಡಗುವಂತೆ ಮಾಡಿತು.

ಪರೀಕ್ಷಾರ್ಥವಾಗಿ 20 ಗುಂಟೆಯಲ್ಲಿ ಬೆಳೆದ ಬದನೆ ಅವರ ಭರವಸೆ ಹುಸಿಗೊಳಿಸಲಿಲ್ಲ. ಮೂರು ತಿಂಗಳ ಫಸಲು ಅವರಿಗೆ ₹ 25 ಸಾವಿರ ಲಾಭ ತಂದು ಕೊಟ್ಟಿದೆ. ಇನ್ನೂ 2-3 ತಿಂಗಳು ದೊರೆಯಲಿರುವ ಫಸಲಿನಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಮೊದಲು ಮೂರು ಎಕರೆ ರಾಗಿ ಬೆಳೆದು ₹ 50 ಸಾವಿರವಷ್ಟೇ ಗಳಿಕೆ ಕಂಡಿದ್ದ ಇವರನ್ನು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ತಂದಿರುವ ಬದನೆ ಕೃಷಿಯ ವಿಸ್ತರಣೆಗೆ ಮುಂದಾಗುವಂತೆ ಮಾಡಿದೆ.

ತೊರೆಯ ಅಂಚಿನ ಮೂರು ಎಕರೆ ವಿಸ್ತೀರ್ಣದಲ್ಲಿ ಬದನೆ ನಾಟಿಗೆ ಮುಂದಾಗಿದ್ದಾರೆ. ಮರಳಿನ ಕೊಳವೆಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿದ್ದು, ಹನಿ ನೀರಾವರಿ ಮೂಲಕ ದೊಡ್ಡಮಟ್ಟದಲ್ಲಿ ಬದನೆ ಕೃಷಿ ಕೈಗೊಂಡಿದ್ದಾರೆ.

ಮರಳು ಮಿಶ್ರಿತ ಗೋಡು, ಕೆಬ್ಬೆಯ ಅದುರು ಮಣ್ಣು ಹೆಚ್ಚು ಸೂಕ್ತ ಎನ್ನುತ್ತಾರೆ ಈ ಸಹೋದರರು. ಕೊಟ್ಟಿಗೆ ಗೊಬ್ಬರ ಸೇರಿಸಿದ ಮಣ್ಣಿನ ರೈಸರ್ ಬೆಡ್ ಮೇಲೆ ಸರಿಯಾದ ಅಂತರದಲ್ಲಿ ನಾಟಿ ಮಾಡುವುದು ಅವಶ್ಯಕ ಎನ್ನುತ್ತಾರೆ.

ಬದನೆ ಕೃಷಿಯ ನಿರ್ವಹಣಾ ವೆಚ್ಚಗಳು ಕಡಿಮೆ ಎಂದರೂ ಹೂವು, ಕಾಯಿ ಕೊರಕ ಕೊಟ್ಟೆ ಹುಳುಗಳ ಬಾಧೆ ಹೆಚ್ಚು. ನಿಯಂತ್ರಣಕ್ಕಾಗಿ ವಾರದಲ್ಲಿ ಎರಡು ಬಾರಿ ಕ್ರಿಮಿನಾಶಕ ಸಿಂಪಡಿಸಬೇಕು. ಮೇಲು ಗೊಬ್ಬರವಾಗಿ ಡಿಎಪಿ, ಕಬ್ಬಿನ ಉಪ್ಪು, 20- 20, ಸಿಎನ್‌ಎನ್ ಹಾಗೂ ಲಘು ಪೋಷಕಾಂಶಗಳನ್ನು ದ್ರವ ರೂಪದಲ್ಲಿ ಡ್ರಿಪ್ ಮೂಲಕ ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

*

ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ವಾರಕ್ಕೆ ಒಮ್ಮೆ 20ರಿಂದ 30 ಚೀಲ ಬದನೆಯಕಾಯಿ ಪೂರೈಸುತ್ತಿದ್ದೇವೆ. ಚೀಲವೊಂದಕ್ಕೆ ಕನಿಷ್ಠ ₹ 150 ಸಿಗುತ್ತಿದೆ. ಕೆಲವೊಮ್ಮೆ ₹ 350ರವರೆಗೆ ಬೆಲೆ ಹೆಚ್ಚುತ್ತದೆ. ಮಂಡಿ ಮಾಲೀಕರು ಪ್ರತಿ ₹ 1000ಕ್ಕೆ ₹ 100 ಕಮೀಷನ್ ಪಡೆಯುತ್ತಾರೆ.
- ಎಚ್.ಜಿ.ಶ್ರೀಧರ್

*
ತೊಟ್ಟು ಕಪ್ಪಾಗದಂತೆ ಎಚ್ಚರ ವಹಿಸಬೇಕು. ಹುಳುಕಿಲ್ಲದ ಹೊಳಪಿನ ಬದನೆಗೆ ಬೇಡಿಕೆ ಹೆಚ್ಚು. ಕೆಂಪು ಬಣ್ಣದ ಗುಂಡು ಬದನೆ ಬೆಳೆಯುವ ಉದ್ದೇಶ ಇದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೆಚ್ಚಿನ ಖರ್ಚು ವೆಚ್ಚಗಳ ಹೊರತಾಗಿಯೂ ಬದನೆ ಕೃಷಿ ಲಾಭದಾಯಕವಾಗಿದೆ.
- ಲಿಂಗೇಶ್, ರಾಮೇದೇವರ ಪಾಳ್ಯ

ನಾಳಿನ ಮಾರುಕಟ್ಟೆಗೆ ರವಾನಿಸಲು ಇಂದೇ ಸಜ್ಜುಗೊಳಿಸುತ್ತಿರುವ ಎಚ್.ಜಿ. ಶ್ರೀಧರ್
ನಾಳಿನ ಮಾರುಕಟ್ಟೆಗೆ ರವಾನಿಸಲು ಇಂದೇ ಸಜ್ಜುಗೊಳಿಸುತ್ತಿರುವ ಎಚ್.ಜಿ. ಶ್ರೀಧರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT