ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಳ್ಳತನ ತಡೆಗೆ ಕಣ್ಗಾವಲು: ಡಾ.ಕೆ.ವಂಶಿಕೃಷ್ಣ

ಲಾಕ್‌ಹೌಸ್ ಮಾನಿಟರಿಂಗ್ ಸಿಸ್ಟಮ್ ಮೊಬೈಲ್ ಅಪ್ಲಿಕೇಷನ್ (ಎಲ್‍ಎಚ್‍ಎಂಎಸ್) ತುಮಕೂರು ಪೊಲೀಸ್ ಆ್ಯಪ್
Last Updated 6 ಆಗಸ್ಟ್ 2020, 14:49 IST
ಅಕ್ಷರ ಗಾತ್ರ

ತುಮಕೂರು: ಬೀಗ ಹಾಕಿದ ಮನೆಗಳಲ್ಲಿ ನಡೆಯುವ ಕಳ್ಳತನ ತಡೆಯಲು ಜಿಲ್ಲಾ ಪೊಲೀಸರು ‘ಲಾಕ್‌ಹೌಸ್ ಮಾನಿಟರಿಂಗ್ ಸಿಸ್ಟಮ್ ಮೊಬೈಲ್ ಅಪ್ಲಿಕೇಷನ್ (ಎಲ್‍ಎಚ್‍ಎಂಎಸ್) ತುಮಕೂರು ಪೊಲೀಸ್ ಆ್ಯಪ್’ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಆ್ಯಪ್ ಅನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ‘ಜಿಲ್ಲೆಯಲ್ಲಿ ಇದು ಯಶಸ್ವಿಯಾದರೆ ಇಡಿ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ ನಡೆದಿದೆ. ರಾಜ್ಯಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದಾಗ ಪೊಲೀಸ್ ಮಹಾನಿರ್ದೇಶಕರು ಇದಕ್ಕೆ ಅನುಮೋದನೆ ನೀಡಿದರು’ ಎಂದರು.

ಮನೆಗಳಿಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಮಾಲೀಕರು ಮೊಬೈಲ್ ಆ್ಯಪ್ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿನೀಡಿ, ನೋಂದಾಯಿಸಿಕೊಂಡರೆ ಇಲಾಖೆಯಿಂದ ಅಂತಹ ಮನೆಗಳ ಮೇಲೆ ಸಿ.ಸಿ ಟಿ.ವಿ ಕ್ಯಾಮೆರಾ ಟೆಕ್ನಾಲಜಿ ಮೂಲಕ ನಿಗಾವಹಿಸಲಾಗುತ್ತದೆ. ಆ್ಯಪ್‍ನಲ್ಲಿ ಹೆಸರು, ಮನೆ ಸಂಖ್ಯೆ ಇತ್ಯಾದಿ ವಿವರಗಳನ್ನು ಭರ್ತಿಮಾಡಿ ಮನೆಯಿಂದ ಹೊರ ಹೋಗುವ ಮುನ್ನ ನೋಂದಾಯಿಸಿಕೊಳ್ಳಬೇಕು. ಯಾವಾಗಿನಿಂದ ಎಷ್ಟು ದಿನ ಮನೆಗೆ ಬೀಗ ಹಾಕಿ ಹೋಗುತ್ತೇವೆ ಎನ್ನುವ ಮಾಹಿತಿ ನೀಡಬೇಕು ಎಂದು ವಿವರಿಸಿದರು.

ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆಯ ಈ ಉಚಿತ ಸೇವೆಯನ್ನು ಉಪಯೋಗಿಸಿಕೊಂಡು ತಮ್ಮ ಆಸ್ತಿಗಳ ರಕ್ಷಿಸಿಕೊಳ್ಳಬೇಕು. ತುಮಕೂರು ಸ್ಮಾರ್ಟ್‍ಸಿಟಿ ಸಹಕಾರದಲ್ಲಿ ಇಲಾಖೆಯು ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಗರಿಷ್ಠ 15 ದಿನಗಳವರೆಗೆ ಈ ಸೇವೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ತುಮಕೂರು ನಗರದ ಆಯಕಟ್ಟಿನ ಸ್ಥಳಗಳು ಸೇರಿದಂತೆ ಅಂಗಡಿ, ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತಗಳಲ್ಲಿ 5 ಸಾವಿರ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತುಂಬಾ ಅಗತ್ಯವಿರುವ ಕಡೆಗಳಲ್ಲಿ ಇನ್ನೂ 300 ಕಡೆ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಕುಣಿಗಲ್ ತಾಲ್ಲೂಕಿನಲ್ಲಿ ಈಗಾಗಲೇ ಈ ಪ್ರಯೋಗಕ್ಕೆ ಮುಂದಾಗಿದ್ದು, ಉಳಿದ ತಾಲ್ಲೂಕು ಕೇಂದ್ರಗಳಲ್ಲೂ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜಿ.ಉದೇಶ್, ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜೇಗೌಡ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT