ತುರುವೇಕೆರೆ: ‘ಉತ್ತಮ ಆಡಳಿತಗಾರನಾಗಿದ್ದ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಅವರನ್ನು ಅವಧಿಗೂ ಮುನ್ನವೇ ಸರ್ಕಾರ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದು ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ನಿರ್ದೇಶಕ ಮಂಚೇನಹಳ್ಳಿ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿಗೆ ತಹಶೀಲ್ದಾರ್ ಆಗಿ ಬಂದ ನಂತರ ಉತ್ತಮ ಆಡಳಿತ ನೀಡಿದ್ದಾರೆ. ಬಡವರ, ರೈತರ ಹಲವು ಸಮಸ್ಯೆ ಬಗೆಹರಿಸಿ ಉತ್ತಮ ಆಡಳಿತಗಾರಾಗಿದ್ದರು’ ಎಂದರು.
‘ಕಾಡುಗೊಲ್ಲ ಸಮುದಾಯದ ಸ್ಥಿತಿ ಶೋಚನೀಯವಾಗಿದೆ. ಮೂಲ ಸೌಕರ್ಯ ಕುಂಠಿತಗೊಂಡಿದ್ದು, ಸರ್ಕಾರಗಳು ಗಮನ ಹರಿಸುತ್ತಿಲ್ಲ. ಆದರೆ ವೈ.ಎಂ.ರೇಣುಕುಮಾರ್ ತಹಶೀಲ್ದಾರ್ ಆಗಿ ಬಂದ ನಂತರ ತಾಲ್ಲೂಕಿನಲ್ಲಿ ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು’ ಎಂದರು.
ತಾಲ್ಲೂಕಿನ 56 ಗೊಲ್ಲರಹಟ್ಟಿಗಳ ಪೈಕಿ 20ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಕರ್ಯಗಳ ಕೊರತೆ ಆಲಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸ್ಥಳದಲ್ಲಿಯೇ ನೀಡಿದ್ದರು. ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜಿ.ಶೇಖರಯ್ಯ, ತಾಲ್ಲೂಕು ಅಲೆಮಾರಿ ಸಮಿತಿ ಸದಸ್ಯ ಆಶೋಕ್, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಕಾಡುಗೊಲ್ಲ ಯುವಸೇನೆ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಕೆ.ಎಂ.ಜಯರಾಮ್, ಆರ್.ರಮೇಶ್, ಕೃಷ್ಣಮೂರ್ತಿ, ವೇಣು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.