ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗದ ಎಲ್‌ಇಡಿ ದೀಪ: ಕತ್ತಲೆಯಲ್ಲಿ ತುಮಕೂರು

ವರ್ಷಕ್ಕೆ ₹4.55 ಕೋಟಿ ಪಾವತಿ; ನಾಮ್‌ ಕಾ ವಾಸ್ತೆ ಎಲ್‌ಇಡಿ ವಿದ್ಯುತ್‌ ದೀಪ; ಪ್ರಮುಖ ರಸ್ತೆಗಳಲ್ಲಿಯೇ ಕತ್ತಲು
Last Updated 3 ನವೆಂಬರ್ 2022, 6:03 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಎಲ್‌ಇಡಿ ದೀಪ ಅಳವಡಿಸಿದ್ದು, ಸಾಕಷ್ಟು ಕಡೆಗಳಲ್ಲಿ ಅವು ಸರಿಯಾಗಿ ಬೆಳಗುತ್ತಿಲ್ಲ. ಅಗತ್ಯ ಪ್ರಮಾಣದಲ್ಲಿ ಬೆಳಕು ನೀಡುತ್ತಿಲ್ಲ.

ವಿದ್ಯುತ್ ಉಳಿತಾಯ ಮಾಡಲು, ಪಾಲಿಕೆ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಹೊಸ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಎಲ್‌ಇಡಿ ದೀಪ ಅಳವಡಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ನಗರದ ಎಲ್ಲ ರಸ್ತೆಗಳಲ್ಲೂ ಎಲ್‌ಇಡಿ ದೀಪಗಳನ್ನು ಹಾಕಲಾಗಿದೆ. ಈ ಕೆಲಸ ಪೂರ್ಣಗೊಳಿಸಿದ ರಾಜ್ಯದ ಮೊದಲ ನಗರವಾಗಿದೆ ಎಂದು ನಿರ್ಗಮಿತ ಮೇಯರ್‌ ಬಿ.ಜಿ.ಕೃಷ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ನಗರದಲ್ಲಿ ಬೆಳಕು ನೀಡುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಯಾರಿಂದಲೂ ಸ್ಪಷ್ಟ ಉತ್ತರ ಇಲ್ಲವಾಗಿದೆ.

ರೈಲ್ವೆ ನಿಲ್ದಾಣದ ರಸ್ತೆ, ಬಸ್‌ ನಿಲ್ದಾಣದ ಮುಂಭಾಗ, ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂದೆ, ಬಿ.ಎಚ್‌.ರಸ್ತೆ, ಕುಣಿಗಲ್‌ ರಸ್ತೆ, ಕೆಎಚ್‌ಬಿ ಕಾಲೊನಿ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್‌ ದೀಪಗಳು ಕೈ ಕೊಟ್ಟಿವೆ. ಅಳವಡಿಸಿದ ಎಲ್ಲಡೆ ದೀಪಗಳು ಬೆಳಗುತ್ತಿಲ್ಲ. ಒಂದು ರಸ್ತೆಯಲ್ಲಿ ಹತ್ತು ದೀಪಗಳು ಇದ್ದರೆ ನಾಲ್ಕೈದು ಬೆಳಗಿದರೆ ಹೆಚ್ಚು. ಉಳಿದ ದೀಪಗಳು ಈಗಾಗಲೇ ಕೆಟ್ಟು ನಿಂತಿವೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್‌ ಬಿಲ್‌ ಕಡಿಮೆ ಬರಲಿದೆ ಎಂಬ ಉದ್ದೇಶದಿಂದ ಪಾಲಿಕೆಯ ಅಧಿಕಾರಿಗಳು ಎಲ್‌ಇಡಿ ಅಳವಡಿಸಲು ಮುಂದಾಗಿದ್ದು, ಪಾಲಿಕೆಗೆ ಇದರಿಂದ ವಿದ್ಯುತ್‌ ವೆಚ್ಚ ಕಡಿಮೆಯಾಗಿದೆ. ಆದರೆ, ಇದು ಜನರಿಗೆ ನೆರವಾಗಿಲ್ಲ. ಎಲ್ಲ ಕಡೆಗಳಲ್ಲಿ ಎಲ್‌ಇಡಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಂಪೂರ್ಣವಾಗಿ ಈ ಕೆಲಸ ನಡೆದಿಲ್ಲ. ಹಲವೆಡೆ ಇನ್ನೂ ಕತ್ತಲಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ. ಇದನ್ನು ಜನರು ಪ್ರಶ್ನಿಸಿದರೆ ಒಂದು ಕಾರಣ ನೀಡಿ ಸುಮ್ಮನಾಗುತ್ತಾರೆ.

ಎಲ್‌ಇಡಿ ದೀಪಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದು ಗುತ್ತಿಗೆ ಪಡೆದಿದೆ. ನಗರದಾದ್ಯಂತ ಸುಮಾರು 34 ಸಾವಿರ ಎಲ್‌ಇಡಿ ದೀಪ ಅಳವಡಿಸಲಾಗಿದೆ. ಈ ಸಂಸ್ಥೆಗೆ ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ಜಿಎಸ್‌ಟಿ ಒಳಗೊಂಡಂತೆ ₹65 ಲಕ್ಷ ಪಾವತಿಸಲಾಗುತ್ತಿದೆ.

ವರ್ಷಕ್ಕೆ ₹4.55 ಕೋಟಿ ನೀಡಲಾಗುತ್ತದೆ. ಗುತ್ತಿಗೆ ಪಡೆದ ಸಂಸ್ಥೆ ಏಳು ವರ್ಷಗಳ ಕಾಲ ನಿರ್ವಹಣೆ ಮಾಡಿ, ನಂತರ ಪಾಲಿಕೆಗೆ ಹಸ್ತಾಂತರಿಸಲಿದೆ. ಅಂದರೆ 7 ವರ್ಷಗಳಿಗೆ ಪಾಲಿಕೆಯಿಂದ ಗುತ್ತಿಗೆದಾರರಿಗೆ ಒಟ್ಟು ₹31.85 ಕೋಟಿ ಕೊಡಲಾಗುತ್ತದೆ. ದೀಪಗಳಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಗುತ್ತಿಗೆ ಪಡೆದ ಸಂಸ್ಥೆಗೆ ದಂಡ ವಿಧಿಸಿ, ದಂಡದ ಹಣವನ್ನು ಬಿಲ್‌ನಲ್ಲಿ ಕಡಿತ ಮಾಡಿ ಉಳಿದ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಅಧಿಕಾರಿಗಳ ವಿವರಣೆ.

ಎಲ್‌ಇಡಿ ದೀಪ ಅಳವಡಿಕೆಯಿಂದಾಗಿ ಪಾಲಿಕೆಗೆ ವಿದ್ಯುತ್‌ ಬಿಲ್‌ ಕಡಿಮೆಯಾಗಿದೆ. ಈ ಹಿಂದೆ ಪ್ರತಿ ತಿಂಗಳು ₹90 ಲಕ್ಷದಿಂದ ₹1 ಕೋಟಿಯವರೆಗೆ ವಿದ್ಯುತ್ ಶುಲ್ಕ ಪಾವತಿಸಲಾಗುತಿತ್ತು. ಆದರೆ ಈಗ ₹40 ಲಕ್ಷದಿಂದ ₹50 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಸಮರ್ಥನೆ ನೀಡುತ್ತಿದ್ದಾರೆ.

ಟ್ರಾನ್ಸ್‌ಫಾರ್ಮರ್‌ಗಳಿಗೆ ಮೀಟರ್‌ ಅಳವಡಿಸಿದ್ದು, ಮೀಟರ್‌ ಮೂಲಕ ದೀಪಗಳನ್ನು ಆನ್‌ ಮತ್ತು ಆಫ್‌ ಮಾಡಲಾಗುತ್ತಿದೆ. ಪ್ರತಿ ಟಿ.ಸಿ ವ್ಯಾಪ್ತಿಗೆ 100 ದೀಪಗಳು ಬರಲಿವೆ. ಹಲವೆಡೆ ಹಳೆಯ ವಿದ್ಯುತ್‌ ಕಂಬಗಳನ್ನು ತೆಗೆದು ಹಾಕಿ, ಹೊಸ ಕಂಬ ಅಳವಡಿಸಲಾಗಿದೆ. ಸ್ಮಾರ್ಟ್‌ ಸಿಟಿಯಿಂದ ಮತ್ತೆ ಹೊಸದಾಗಿ ಹೆಚ್ಚುವರಿ ವಿದ್ಯುತ್‌ ಕಂಬಗಳನ್ನು ಹಾಕುತ್ತಿದ್ದು, ಅವುಗಳಿಗೆ ಪಾಲಿಕೆಯಿಂದ ಎಲ್‌ಇಡಿ ದೀಪ ಅಳವಡಿಸುವ ಕೆಲಸ ಮಾಡಲಾಗುತ್ತಿದೆ.

ಹಲವು ಕಡೆಗಳಲ್ಲಿ ಕೇಬಲ್ ಸಮಸ್ಯೆಯಿಂದಾಗಿ ವಿದ್ಯುತ್‌ ದೀಪಗಳು ಉರಿಯಲು ಸಮಸ್ಯೆಯಾಗುತ್ತಿದೆ. ಇನ್ನೂ ಹಲವೆಡೆ ದೀಪಗಳು ಸರಿಯಾದ ನಿರ್ವಹಣೆ ಇಲ್ಲದೆ ಬೆಳಗುತ್ತಿಲ್ಲ. ಕೆಲವು ಕಡೆಗಳಲ್ಲಿ ಹಗಲಲ್ಲೂ ದೀಪಗಳನ್ನು ಆರಿಸುತ್ತಿಲ್ಲ. ಹಗಲು, ರಾತ್ರಿ ಎನ್ನದೇ ದೀಪಗಳು ಉರಿಯುತ್ತಿದ್ದು, ಇದರಿಂದಾಗಿ ಬೇಗನೇ ಹಾಳಾಗುತ್ತಿವೆ ಎಂಬ ಆರೋಪವೂ ಕೇಳಿ ಬಂದಿದೆ.

ಹಳೆ ಉಪಕರಣ ಎಲ್ಲಿ?
ಹೊಸದಾಗಿ ಎಲ್‌ಇಡಿ ದೀಪ ಅಳವಡಿಸಲು ಗುತ್ತಿಗೆ ನೀಡಿದ್ದು, ಅದರಂತೆ ಗುತ್ತಿಗೆ ಪಡೆದ ಸಂಸ್ಥೆ ಬೀದಿ ದೀಪಗಳನ್ನು ಅಳವಡಿಸಿದೆ. ಆದರೆ ಹಿಂದೆ ಅಳವಡಿಸಿದ್ದ ವಿದ್ಯುತ್ ದೀಪ ಹಾಗೂ ಇತರ ಪರಿಕರಗಳು ಏನಾದವು ಎಂಬ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ.

ಹಿಂದೆಯೂ ಕೋಟ್ಯಂತರ ರೂಪಾಯಿ ಖರ್ಚುಮಾಡಿ ವಿದ್ಯುತ್ ದೀಪ ಅಳವಡಿಸಲಾಗಿತ್ತು. ಆ ಪರಿಕರಗಳು ಎಲ್ಲಿವೆ ಎಂಬುದು ಯಾರಿಗೂ
ಗೊತ್ತಿಲ್ಲ. ಅವುಗಳನ್ನು ಗುತ್ತಿಗೆದಾರರೇ ತೆಗೆದುಕೊಂಡು ಹೋದರೆ, ಇಲ್ಲವೆ ಅಧಿಕಾರಿಗಳು ಮಾರಾಟ ಮಾಡಿಕೊಂಡರೆ? ಎಂಬ ವಿಚಾರ ಯಾರಿಗೂ ಗೊತ್ತಿಲ್ಲ.

ಹಳೆಯ ವಿದ್ಯುತ್ ದೀಪಗಳ ಪರಿಕರಗಳ ಮಾರಾಟ ಹಾಗೂ ಹೊಸದಾಗಿ ದೀಪ ಅಳವಡಿಸುವಲ್ಲೂ ಕೋಟ್ಯಂತರ ರೂಪಾಯಿ ಹಗರಣ ನಡೆದಿದ್ದು, ತನಿಖೆ ನಡೆದರಷ್ಟೇ ಸತ್ಯ ಹೊರ ಬರಲಿದೆ ಎಂದು ಪಾಲಿಕೆ ಬಿಜೆಪಿ ಪಾಲಿಕೆ ಸದಸ್ಯರೊಬ್ಬರು ಒತ್ತಾಯಿಸಿದರು.

*

ದೂರು ನೀಡಿದವರಿಗೆ ಸ್ಪಂದನೆ: ವಿದ್ಯುತ್‌ ದೀಪ ಹಾಳಾದ ಬಗ್ಗೆ ದೂರು ಬಂದಲ್ಲಿ, ಅವುಗಳನ್ನು ಸರಿಪಡಿಸಲಾಗುತ್ತಿದೆ. ಎಲ್‌ಇಡಿ ಅಳವಡಿಕೆಯಿಂದಾಗಿ ಪಾಲಿಕೆಯಿಂದ ಪಾವತಿಯಾಗುತ್ತಿದ್ದ ವಿದ್ಯುತ್‌ ಬಿಲ್‌ ಅರ್ಧದಷ್ಟು ಕಡಿಮೆಯಾಗಿದೆ. ಮುಂದೆ ಹೆಚ್ಚಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
ವಿನಯ್, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್

*

ಅಗತ್ಯ ಇದ್ದ ಕಡೆಗಳಲ್ಲಿ ಸಮಸ್ಯೆ: ಅಗತ್ಯವಾಗಿ ಬೇಕಾದ ಕಡೆಗಳಲ್ಲಿ ದೀಪಗಳ ಸಮಸ್ಯೆಯಾಗಿದೆ. ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಆಟೊ ನಿಲ್ದಾಣದಲ್ಲಿ ದೀಪ ಉರಿಯುತ್ತಿಲ್ಲ. ಸ್ವಲ್ಪ ಮುಂದೆ ಹೋದರೆ ಸಾಲಾಗಿ ದೀಪಗಳು ಉರಿಯುತ್ತವೆ. ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲೂ ಇದೇ ಸಮಸ್ಯೆಯಾಗಿದೆ. ಎರಡೂ ದೀಪಗಳು ಹಾಳಾಗಿವೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.
–ಮೋಹನ್‌ ಕೃಷ್ಣರಾಜ್‌ ಅರಸ್‌, ಆಟೊ ಚಾಲಕ

ಕೆಲವು ಕಡೆಗಳಲ್ಲಿ ಆನ್‌ ಮಾಡಲ್ಲ: ವಿದ್ಯುತ್‌ ಬಿಲ್‌ ಕಡಿಮೆಯಾಗಲಿ ಎನ್ನುವ ಉದ್ದೇಶದಿಂದಲೇ ಕೆಲವು ಕಡೆಗಳಲ್ಲಿ ಚೆನ್ನಾಗಿದ್ದರೂ ದೀಪಗಳನ್ನು ಆನ್‌ ಮಾಡುತ್ತಿಲ್ಲ. ಇದರಿಂದ ದೀಪ ಅಳವಡಿಸಿದ್ದರೂಯಾರಿಗೂ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಹೆಸರಿಗೆ ಮಾತ್ರ ಆಗೊಮ್ಮೆ, ಹೀಗೊಮ್ಮೆ ಬಂದು ಪರಿಶೀಲನೆ ನಡೆಸುತ್ತಾರೆ.
–ರಾಮು, ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT