ತುಮಕೂರು: ಶಿವಕುಮಾರ ಸ್ವಾಮೀಜಿಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದರೆ ‘ದಾಸೋಹ ತತ್ವ’ ಅನುಸರಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಪ್ರತಿಪಾದಿಸಿದರು.

ನಗರದ ಸಿದ್ಧಗಂಗಾ ಮಠದಲ್ಲಿ ಬುಧವಾರ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ಶಿವಕುಮಾರ ಸ್ವಾಮೀಜಿ ಸಾಧನೆ, ಅಧ್ಯಾತ್ಮ ಸ್ಮರಿಸಿದರು. ಮಠದ ಸೇವೆಯನ್ನು ಕೊಂಡಾಡಿದರು. ಶಿವಕುಮಾರ ಸ್ವಾಮೀಜಿಯನ್ನು ನೆನಪಿಸಿಕೊಂಡರಷ್ಟೇ ಸಾಲದು, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುವ, ಅವರ ತತ್ವ, ಆದರ್ಶಗಳನ್ನು ಪರಿಪಾಲಿಸುವ ಅಗತ್ಯವನ್ನು ಜನರ ಮುಂದಿಟ್ಟರು. ಅಧ್ಯಾತ್ಮವನ್ನು ಸೇವೆಯನ್ನಾಗಿಸಿದರು. ಸೇವೆಯನ್ನು ಭಕ್ತಿಯಾಗಿ ಬದಲಿಸಿದ ಮಹಾನ್ ಸಂತ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಅನ್ನದ ಕೊರತೆ ಇದ್ದಾಗ ಸ್ವಾಮೀಜಿ ಅನ್ನದಾಸೋಹ ಮಾಡಿದ್ದಾರೆ. ಅನ್ನ, ಅಕ್ಷರ, ಆಶ್ರಯದಂತಹ ತ್ರಿವಿಧ ದಾಸೋಹವನ್ನು ದಾನವೆಂದು ಪರಿಗಣಿಸಿ ನೀಡಿಲ್ಲ. ಅದೊಂದು ಹಕ್ಕು ಎಂಬಂತೆ ಪ್ರೀತಿಯಿಂದ ಉಣಬಡಿಸಿದ್ದಾರೆ. ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ನಾಡಿನ ಮಹಾ ಸಂತರು, ತ್ಯಾಗಮಯಿ. ಅವರ ನಿಧನದ ನಂತರವೂ ಪ್ರಸ್ತುತತೆ ಮತ್ತಷ್ಟು ಬಲಗೊಳ್ಳುತ್ತಿದೆ. ಅನಿಶ್ಚಿತತೆ ಆವರಿಸಿರುವ ಪ್ರಸ್ತುತ ಸನ್ನಿವೇಶದಲ್ಲಿ, ಆಸೆಯ ಯುಗದಲ್ಲಿ ಅವರು ಹಾಕಿಕೊಟ್ಟ ಮಾರ್ಗ ನೈತಿಕ ದಿಕ್ಕನ್ನು ಸೂಚಿಸುತ್ತದೆ. ಸದಾ ಪ್ರಜ್ವಲಿಸುವ ದೀಪವಾಗಿದ್ದಾರೆ ಎಂದು ಸ್ಮರಿಸಿದರು.

ಗ್ರಾಮೀಣ ಪ್ರದೇಶದ ಸಹಸ್ರಾರು ಬಡವರ ಮಕ್ಕಳು ಮಠದಲ್ಲಿ ಮನೆಯನ್ನು ಕಂಡುಕೊಂಡಿದ್ದಾರೆ. ಸಿದ್ಧಗಂಗಾ ಮಠ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾಮಾಜಿಕ ಕ್ರಾಂತಿಯ ನಾಯಕತ್ವವನ್ನು ವಹಿಸಿಕೊಂಡು ಮುನ್ನಡೆದಿದೆ. ಸ್ವಾಮೀಜಿ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಕೇಂದ್ರದ ಜತೆಗೆ ಸಾಮಾಜಿಕ ಚಳವಳಿಯ ಕೇಂದ್ರವಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಕಸಿತ ಭಾರತದತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ. ಅವರ ನಾಯಕತ್ವದಲ್ಲಿ ಹಿಂದೂ ಸಮಾಜದ ಪುನರುಜ್ಜೀವನಗೊಂಡಿದೆ. ಆಧುನಿಕ ಜಗತ್ತಿನಲ್ಲಿ ದೇಶ ಎತ್ತರದಲ್ಲಿ ನಿಂತಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ‘12ನೇ ಶತಮಾನದಲ್ಲಿ ಬಸವಣ್ಣ ನೀಡಿದ ಸಂದೇಶವನ್ನು ಸಂವಿಧಾನದ ಪೀಠಿಕೆಯಲ್ಲಿ ಕಾಣಬಹುದಾಗಿದೆ. ಅದನ್ನೇ ಶಿವಕುಮಾರ ಸ್ವಾಮೀಜಿ ಸಹ ಪರಿಪಾಲನೆ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಜಾತಿ, ವರ್ಗ, ಧರ್ಮ ರಹಿತವಾಗಿ ದಾಸೋಹ ಮಾಡಿದ್ದಾರೆ. ಶಾಂತಿ, ನೆಮ್ಮದಿಯಿಂದ ಜೀವಿಸುವಂತಹ ಸಂದೇಶ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಆಶ್ರಯದಾತರಾಗಿದ್ದರು ಎಂದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ‘ಸೂರ್ಯ, ಚಂದ್ರ ಇರುವವರೆಗೂ ಶಿವಕುಮಾರ ಸ್ವಾಮೀಜಿ ಸ್ಮರಣೆ ಮಾಡಲಾಗುತ್ತದೆ. ಮಹಾತಪಸ್ವಿ ನೀಡಿದ ಸಂದೇಶಗಳನ್ನು ಸದಾ ಸ್ಮರಿಸಿ ಪಾಲಿಸಬೇಕಿದೆ’ ಎಂದು ಹೇಳಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ಸ್ವಾಮೀಜಿ ಸೇವೆಯನ್ನು ಎಷ್ಟು ಸ್ಮರಿಸಿದರು ಸಾಲದು. ಮಾನವರ ಕಲ್ಯಾಣಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದ್ದಾರೆ. ನಿಜವಾದ ಕಾಯಕಯೋಗಿ’ ಎಂದು ತಿಳಿಸಿದರು.

ಕಿರಿಯ ಸ್ವಾಮೀಜಿ ಶಿವಸಿದ್ಧೇಶ್ವರ ಸ್ವಾಮೀಜಿ, ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಮಂಜುನಾಥ್, ರಾಜ್ಯದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಬಿ.ಸುರೇಶ್ಗೌಡ, ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು.

ಸಮಾಜಕ್ಕೆ ಸಮರ್ಪಣೆ

ತುಮಕೂರು: ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಲ್ಲಿ ಎಲ್ಲವನ್ನೂ ತೊರೆದವರು. ಸಂಘ ಬೇಡ ರಾಜ್ಯ ಬೇಡ ಎಂದವರು. ಎಲ್ಲವನ್ನೂ ದೂರ ಸರಿಸಿ ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಸಿದ್ಧಲಿಂಗ ಸ್ವಾಮೀಜಿ ತಮ್ಮ ಗುರುವನ್ನು ನೆನಪಿಸಿಕೊಂಡರು. ಪ್ರಾಮಾಣಿಕತೆ ನಿಷ್ಠೆಯ ಸಂದೇಶ ನೀಡಿ ಹೋಗಿದ್ದಾರೆ. 111 ವರ್ಷಗಳು ತಪಸ್ಸಿನಂತೆ ಜೀವನ ನಡೆಸಿದರು. ಅದರಲ್ಲಿ 89 ವರ್ಷಗಳು ಸಂತರಾಗಿದ್ದರು. ದೇಶದಲ್ಲಿ ಇಷ್ಟೊಂದು ದೀರ್ಘ ಸಮಯ ಯಾರೊಬ್ಬರೂ ಸಂತರಾಗಿಲ್ಲ. ನಾಡಿನ ಲಕ್ಷಾಂತರ ಮಂದಿಗೆ ಶಿಕ್ಷಣ ಕೊಟ್ಟಿದ್ದಾರೆ. ಅವರು ನೀಡಿದ ಸಂದೇಶ ಪರಿಪಾಲಿಸಲಾಗುತ್ತಿದೆ. ಅವರ ಮಾರ್ಗದಲ್ಲೇ ಮುನ್ನಡೆದಿದ್ದೇವೆ ಎಂದು ಹೇಳಿದರು. ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್ ಸಂಸ್ಥಾಪಕ ಮಧುಸೂದನ ಸಾಯಿ ‘ಸ್ವಾಮೀಜಿ ದಾಸೋಹದ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ್ದು ರೋಮಾಂಚನ ಉಂಟುಮಾಡಿದೆ. ಒಂದು ರೀತಿಯಲ್ಲಿ ವಿಶೇಷ ಅನುಭವ ನೀಡಿತು’ ಎಂದು ತಿಳಿಸಿದರು.

ಎಲ್ಲೆಡೆ ದಾಸೋಹ

ಮಠಕ್ಕೆ ಬಂದಿದ್ದ ಸಹಸ್ರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತಮ್ಮ ಗುರುವಿಗೆ ನಮಿಸಲು ಹಾಗೂ ಅನ್ನ ಅಕ್ಷರ ಆಶ್ರಯ ನೀಡಿದ ಸ್ಮಾಮೀಜಿಯನ್ನು ಸ್ಮರಿಸಲು ನಾಡಿನ ವಿವಿಧೆಡೆಗಳಿಂದ ಭಕ್ತರು ಬಂದಿದ್ದರು. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಿಸಿ ಗುರುವನ್ನು ನೆನಪು ಮಾಡಿಕೊಂಡರು. ಸ್ವಾಮೀಜಿ ಸ್ಮರಿಸುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.

ಬಿಗಿ ಭದ್ರತೆ

ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಭಾಗವಹಿಸಿದ್ದರಿಂದ ಮಠದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸ್ವಾಮೀಜಿ ಗದ್ದುಗೆಯಿಂದ ಕಾರ್ಯಕ್ರಮ ನಡೆಯುವ ಸ್ಥಳದ ವರೆಗೆ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿತ್ತು. ವಿಶ್ವವಿದ್ಯಾಲಯ ಹೆಲಿಪ್ಯಾಡ್ನಿಂದ ಮಠದ ವರೆಗೂ ವಾಹನ ಸಂಚಾರ ನಿಷೇಧಿಸಿ ಭದ್ರತೆ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.