ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪಚುನಾವಣೆ: ಹಳ್ಳಿಗಳಲ್ಲೂ ಮತದಾನದ್ದೇ ಚರ್ಚೆ

ಮೂರು ಪಕ್ಷಗಳ ಕಾರ್ಯಕರ್ತರಿಂದ ಮತದಾನದ ಅಂತಿಮ ಕ್ಷಣದವರೆಗೂ
Last Updated 4 ನವೆಂಬರ್ 2020, 3:33 IST
ಅಕ್ಷರ ಗಾತ್ರ

ತುಮಕೂರು: ಶಿರಾ ಉಪಚುನಾವಣೆಯ ಮತದಾನ ಪ್ರಕ್ರಿಯೆಯು ಮಂಗಳವಾರ ಹಳ್ಳಿ ಹಳ್ಳಿಗಳಲ್ಲಿ ಗರಿಗೆದರಿತ್ತು. ಬೆಳಿಗ್ಗೆ 7ಕ್ಕೆ ಮತದಾನ ಆರಂಭ ಆದಾಗ ಜನರು ನಿಧಾನವಾಗಿ ಮತಗಟ್ಟೆಗಳಿಗೆ ಬರಲು ಆರಂಭಿಸಿದರು. 12ರ ನಂತರ ಮತದಾನ ಪ್ರಕ್ರಿಯೆ ಬಿರುಸು ಪಡೆಯಿತು.

ಮತಗಟ್ಟೆ ಕೇಂದ್ರಗಳ ಮುಂದೆ ಮತದಾರರು ಸಾಲುಗಟ್ಟಿದ್ದರೆ ಮತಚಲಾಯಿಸಿ ಬಂದವರು ಕಟ್ಟೆಗಳಲ್ಲಿ ಕುಳಿತು ಲೆಕ್ಕಾಚಾರಗಳಲ್ಲಿ ತೊಡಗಿದ್ದರು. ಹಳ್ಳಿ ಹಳ್ಳಿಗಳಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ಬದಿ, ಮತದಾನ ಕೇಂದ್ರದ ಸಮೀಪ ಕುಳಿತು ಅಂತಿಮ ಕ್ಷಣದಲ್ಲಿ ಮತದಾರರ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದರು.

ಶಾಸಕರಾಗಿದ್ದ ದಿ.ಬಿ.ಸತ್ಯನಾರಾಯಣ ಸ್ವಗ್ರಾಮ ಭುವನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಬೆಳಿಗ್ಗೆಯೇ ಸತ್ಯನಾರಾಯಣ ಸಮಾಧಿಗೆ ಪೂಜೆ ಸಲ್ಲಿಸಿ, ಜೆಡಿಎಸ್ ಪರ ಘೋಷಣೆಗಳನ್ನು ಕೂಗಿದರು.

ದ್ವಾರಾಳು ಗ್ರಾಮದಲ್ಲಿ ಮತಚಲಾಯಿಸಿದ ಜನರು ಹಳ್ಳಿ ಕಟ್ಟೆಗಳಲ್ಲಿ ಗುಂಪು ಗುಂಪಾಗಿ ಚರ್ಚೆ ನಡೆಸಿದ್ದರು. ಈ ಗುಂಪಿನಲ್ಲಿ ಮೂರು ಪಕ್ಷಗಳ ಮುಖಂಡರೂ ಇದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಮತಗಟ್ಟೆಯಲ್ಲಿ ಜೆಡಿಎಸ್ ಹೆಚ್ಚು ಮತ ಪಡೆದಿತ್ತು. ಈ ಬಾರಿ ಮೂರು ಪಕ್ಷಗಳಿಗೂ ಮತ ಬೀಳುತ್ತವೆ ಎನ್ನುವ ಮಾತಿನೊಂದಿಗೆ ಜನರು ಚರ್ಚೆ ಮುಗಿಸಿದರು.

ದ್ವಾರಾಳು ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಧ್ಯಾಹ್ನವೇ ಪಿಪಿ ಕಿಟ್‌ಗಳನ್ನು ಧರಿಸಿ ಮತಗಟ್ಟೆಯಲ್ಲಿ ಇದ್ದರು. ಜನರು ಒಬ್ಬೊಬ್ಬರಾಗಿ ಸೇರುವ ಮೂಲಕ ಮತದಾರರ ಸಾಲು ಹೆಚ್ಚುತ್ತಲೇ ಹೋಯಿತು.

ಶಿರಾ ನಗರದ ಮತಗಟ್ಟೆಗಳ ಬಳಿಯೂ ಇದೇ ವಾತಾವರಣ ಇತ್ತು. ಮೂರು ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದರು. ತಾವರೆಕೆರೆ, ಮದ್ದನಾಯಕನಹಳ್ಳಿ, ಕಗ್ಗಲಡು, ಗೌಡಗೆರೆ ಹೀಗೆ ಬಹುತೇಕ ಗ್ರಾಮಗಳಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಕೊನೆ ಕ್ಷಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು.

ಮನೆಗಳಿಗೆ ತೆರಳಿ ವಯಸ್ಸಾದವರನ್ನು ಬೈಕ್, ಆಟೊಗಳಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ಕರೆತರುತ್ತಿದ್ದರು. ಮತಗಟ್ಟೆಗೆ ಬಂದ ಅಂಗವಿಕಲರು, ಮತಗಟ್ಟೆ ಮೆಟ್ಟಿಲು ಹತ್ತುವುದು ಕಷ್ಟ ಎನ್ನುವವರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು.

ಒಟ್ಟಿಗೆ ಚರ್ಚೆ: ಗೋಮಾರದನಹಳ್ಳಿಯಲ್ಲಿ ಮೂರು ಪಕ್ಷಗಳ ಕಾರ್ಯಕರ್ತರು ಅಕ್ಕಪಕ್ಕದಲ್ಲಿಯೇ ಕುಳಿತು ತಮ್ಮ ಪಕ್ಷಗಳ ಬಲಾಬಲ ಲೆಕ್ಕ ಹಾಕುತ್ತಿದ್ದರು. ವಿಶೇಷ ಅಂದರೆ ಈ ಮೂರು ಪಕ್ಷ ಕಾರ್ಯಕರ್ತರಾಗಿ ಕೆಲಸ ಮಾಡಿದವರು ಅಣ್ಣ ತಮ್ಮಂದಿರು, ಬಂಧು ಬಳಗ, ನೆಂಟರಿಷ್ಟರೇ ಆಗಿದ್ದಾರೆ.

ಮೂರು ಪಕ್ಷಗಳ ಕಾರ್ಯಕರ್ತರು ತಮಗೆ ಈ ಮತಗಟ್ಟೆಯಲ್ಲಿ ಹೆಚ್ಚು ಮತ ಬೀಳುತ್ತದೆ ಎಂದು ಚರ್ಚೆ ಆರಂಭಿಸಿದರು. ಆ ಚರ್ಚೆಯಲ್ಲಿ ತಮ್ಮ ಪಕ್ಷ ಏಕೆ ಗೆಲ್ಲುತ್ತದೆ, ಯಾವ ಕಾರಣದಿಂದ ಗೆಲ್ಲಬೇಕು ಎನ್ನುವ ಸಾಧ್ಯತೆ ಮತ್ತು ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಿದರು. ನಂತರ ಹೋಬಳಿಯಲ್ಲಿ ತಮ್ಮ ಪಕ್ಷಗಳ ಬಲಾಬಲಗಳ ಬಗ್ಗೆ ಮಾತನಾಡಿದರು.

ಸಂಜೆ 5ರ ನಂತರ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ‘71 ಕೋವಿಡ್ ರೋಗಿಗಳ ಮತದಾನಕ್ಕೆ ಅವಕಾಶ ನೀಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎರಡು ಆಂಬುಲೆನ್ಸ್‌ಗಳಲ್ಲಿ ಕೋವಿಡ್ ರೋಗಿಗಳನ್ನು ಮತಗಟ್ಟೆಗೆ ಕರೆತಂದು ಮತದಾನಕ್ಕೆ ಅವಕಾಶ ನೀಡಲಾಗಿದೆ’ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಕೋವಿಡ್ ನೋಡೆಲ್ ನಿಯಂತ್ರಣಾಧಿಕಾರಿ ಡಾ.ಸನತ್ ತಿಳಿಸಿದರು.

ಆರೋಗ್ಯ ದೃಷ್ಟಿಯಿಂದ ಕೆಲ ಕೋವಿಡ್ ಸೋಂಕಿತರು ಮತಗಟ್ಟೆಗಳಿಗೆ ಬರಲು ನಿರಾಕರಿಸಿದ್ದಾರೆ. ಅಂತಹವರ ಧ್ವನಿ ಮುದ್ರಣ ಮಾಡಿಕೊಳ್ಳಲಾಗಿದೆ ಎಂದರು.

***

ಸಮಯವಾರು ಮತದಾನದ ವಿವರ

9 ಗಂಟೆ;ಶೇ 8.25
11 ಗಂಟೆ;ಶೇ 23.63
1 ಗಂಟೆ;ಶೇ 44.13
3 ಗಂಟೆ;ಶೇ 62.10
5 ಗಂಟೆ;ಶೇ 77.34

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT