ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟ್ಯಾಂಕರ್– ಟ್ರ್ಯಾಕ್ಟರ್‌ ನಡುವೆ ಯುದ್ಧ

ಟ್ರಾಕ್ಟರ್ ಗೆದ್ದರೆ ರೈತರ ಉಳಿವು: ಪ್ರಗತಿಪರ ಚಿಂತಕ ಶಿವಸುಂದರ್ ಅಭಿಪ್ರಾಯ
Last Updated 21 ಜನವರಿ 2021, 2:08 IST
ಅಕ್ಷರ ಗಾತ್ರ

ತುಮಕೂರು: ‘ದೇಶದಲ್ಲಿ ಟ್ಯಾಂಕರ್– ಟ್ರ್ಯಾಕ್ಟರ್‌ (ರೈತರು) ನಡುವೆ ಯುದ್ಧ ನಡೆದಿದೆ. ಇದರಲ್ಲಿ ಗೆದ್ದರೆ ರೈತರು ಉಳಿಯುತ್ತಾರೆ. ಇಲ್ಲವಾದರೆ ಸರ್ವನಾಶ ಖಚಿತ’ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಎಚ್ಚರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಬುಧವಾರ ಹಮ್ಮಿಕೊಂಡಿದ್ದ ‘ಇತ್ತೀಚಿನ ರೈತ ವಿರೋಧಿ ಕೃಷಿ ಮಸೂದೆಗಳ ಹಿಂದಿರುವ ಹುನ್ನಾರಗಳು ಹಾಗೂ ದೆಹಲಿಯಲ್ಲಿ ಅನ್ನದಾತರು ನಡೆಸುತ್ತಿರುವ ಹೋರಾಟದ ದೃಷ್ಟಿಕೋನ’ ಕುರಿತ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.

ಕೃಷಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಒಕ್ಕಲೆಬ್ಬಿಸಿ, ಕೃಷಿ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುವ ಹುನ್ನಾರ ನಡೆದಿದೆ. ದೊಡ್ಡ ಕಂಪನಿಗಳು ಚುನಾವಣೆ ಸಮಯದಲ್ಲಿ ಬಿಜೆಪಿಗೆ ಕೋಟಿಗಟ್ಟಲೆ ಹಣ ನೀಡಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ₹27 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆ ಋಣ ತೀರಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಉಳ್ಳವರ ಹಿತ ಕಾಯಲು ನಮ್ಮನ್ನು ಮಾರಾಟ ಮಾಡುತ್ತಿದ್ದು, ಮುಂದೆ ದೇಶವನ್ನೇ ಮಾರಾಟ ಮಾಡುತ್ತಾರೆ. ಅದಾನಿ, ಅಂಬಾನಿಯಂತಹವರಿಗಾಗಿ ಕೃಷಿ ಕಾಯ್ದೆ ರೂಪಿಸಲಾಗಿದೆ ಎಂದು ಆರೋಪಿಸಿದರು.

‘ನರಿ ಬುದ್ಧಿಯ ವ್ಯಾಪಾರಿಗಳು, ರೈತರು, ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ನರಿ ಜಾಗದಲ್ಲಿ ಹುಲಿ ತಂದು ನಿಲ್ಲಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲೂ ಅದಾನಿ, ಅಂಬಾನಿ ಆಸ್ತಿ ಮೌಲ್ಯ ಹೆಚ್ಚಾಗಿದೆ. ಲಾಭ ದುಪ್ಪಟ್ಟಾಗಿದೆ. ನಮ್ಮ ಮುಖಕ್ಕೆ ಮಾಸ್ಕ್ ಹಾಕಿಸಿ ಕಾಯ್ದೆ ಜಾರಿಗೆ ತರಲಾಗಿದೆ. ಲಾಕ್‌ಡೌನ್ ದಾಳಿ ನಂತರ ಈಗ ವ್ಯಾಕ್ಸಿನ್ ದಾಳಿ ನಡೆದಿದೆ. ವ್ಯಾಕ್ಸಿನ್‌ ಖರೀದಿಯಲ್ಲೂ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೃಷಿಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದರಿಂದ ರೈತರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರೈತರೆಲ್ಲ ಶ್ರೀಮಂತರಾಗುತ್ತಾರೆ. ಮುಂದಿನ ದಿನಗಳಲ್ಲಿ ವಿಮಾನದಲ್ಲೇ ಸಂಚರಿಸುತ್ತಾರೆ ಎಂದು ಬಿಂಬಿಸಲಾಗುತ್ತಿದೆ. ಕೃಷಿ ಜಮೀನು ಕಿತ್ತುಕೊಂಡುರೈತರನ್ನು ಬೀದಿಗೆ ತಳ್ಳುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಐಕೆಸಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು, ‘ಕೃಷಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಪೋರೇಟ್ ಕೃಷಿ ಪದ್ಧತಿ ಜಾರಿಯಾಗಲಿದೆ. ಕೈಗಾರಿಕಾ ಕೃಷಿ ಆರಂಭವಾದರೆ ರೈತರನ್ನು ಉದ್ಯಮಿಗಳು ನಿಯಂತ್ರಿಸುತ್ತಾರೆ. ಇಂತಹ ಸ್ಥಿತಿಯಿಂದಾಗಿ ಕೃಷಿ ಕ್ಷೇತ್ರ ಗಂಡಾಂತರಕ್ಕೆ ಸಿಲುಕಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ರೈತರು ಭೂಮಿ ಕಳೆದುಕೊಂಡು ಗುತ್ತಿಗೆ ಕೃಷಿ ನಡೆಸುವ ಕಾರ್ಪೇರೇಟ್ ಕಂಪನಿಗಳ ಬಳಿ ಜೀತದಾಳುಗಳಾಗಿ ದುಡಿಯಬೇಕಾಗುತ್ತದೆ. ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಅಮಾನವೀಯವಾಗಿ ದಾಳಿ ಮಾಡಲಾಗುತ್ತಿದೆ. ರೈತರು ಸತ್ತರೂ ಸ್ಪಂದಿಸುತ್ತಿಲ್ಲ. ರೈತ ದ್ರೋಹಿ, ಹಿಟ್ಲರ್ ಧೋರಣೆ ಹೊಂದಿರುವ ನರೇಂದ್ರ ಮೋದಿ ಅವರಿಗೆ ಹೃದಯ ಇಲ್ಲವಾಗಿದೆ. ರೈತರನ್ನು ಬೀದಿಗೆ ತಳ್ಳಿ ಕಾರ್ಪೋರೇಟ್ ಕಂಪನಿಗಳ ಪರ ನಿಂತಿದ್ದಾರೆ’ ಎಂದು
ಟೀಕಿಸಿದರು.

ಮುಖಂಡರಾದ ಜಿ.ಸಿ.ಶಂಕರಪ್ಪ, ಚಿರತೆ ಚಿಕ್ಕಣ್ಣ, ನುಲೆನೂರು ಶಂಕರಪ್ಪ, ರಾಮಣ್ಣ, ದೊರೈರಾಜು, ಡಾ.ಜಿ.ವಿ.ಆನಂದಮೂರ್ತಿ, ಡಾ.ಬಸವರಾಜು, ಡಾ.ಅರುಂದತಿ, ಮರುಳಯ್ಯ, ಸಯ್ಯದ್ ಮುಜೀಬ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT