ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ನೀರಿನ ಬವಣೆ: ಅಹವಾಲು ಆಲಿಸಿದ ಡಿ.ಸಿ

ಜಿಲ್ಲಾಧಿಕಾರಿಗೆ ಎದುರು ಅಳಲು ತೋಡಿಕೊಂಡ ಗ್ರಾಮಸ್ಥರು  
Published 4 ಫೆಬ್ರುವರಿ 2024, 14:17 IST
Last Updated 4 ಫೆಬ್ರುವರಿ 2024, 14:17 IST
ಅಕ್ಷರ ಗಾತ್ರ

ಕೊರಟಗೆರೆ: ವಾರದಿಂದ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಿಲ್ಲದೆ ತೊಂದರೆಯಾಗಿದೆ ಎಂದು ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಳಿ ಅಳಲು ತೋಡಿಕೊಂಡರು.

ಕೊಳವೆಬಾವಿ ಕೊರೆಸಿಕೊಟ್ಟು ಪ್ರಸ್ತುತ ತಲೆದೋರಿರುವ ನೀರಿನ ಬವಣೆ ನೀಗಿಸಬೇಕು ಎಂದು ಜಿಲ್ಲಾಧಿಕಾರಿ ಎದುರು ಪಟ್ಟುಹಿಡಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದರಿಂದ ಭಾನುವಾರ ಬೆಳಿಗ್ಗೆ ಗೊಂದಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದರು.

ಇನ್ನೆರಡು ದಿನಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಕೀರ್ತಿ ನಾಯಕ್ ಅವರಿಗೆ ಸೂಚಿಸಿದರು.

ತಾಲ್ಲೂಕಿನ ಜೆಟ್ಟಿ ಅಗ್ರಹಾರದಲ್ಲಿರುವ ಕೆರೆಗೆ ಹೇಮಾವತಿ ನಾಲೆ ನೀರು ತುಂಬಿಸಿದರೆ ಗೊಂದಿಹಳ್ಳಿ ಗ್ರಾಮಕ್ಕೂ ನೀರು ಪೂರೈಕೆ ಮಾಡಬಹುದು ಎಂಬ ಗ್ರಾಮಸ್ಥರ ಸಲಹೆ ಆಲಿಸಿದ ಅವರು, ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚಸಿದರು.

ತಾಲ್ಲೂಕಿನ ಇರಕಸಂದ್ರ ಕಾಲೊನಿಯ ರೇಣುಕಾನಗರ, ಇರಕಸಂದ್ರ ಕಾಲೊನಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೀರಿಲ್ಲದೆ ತೋಟಗಳು ಒಣಗುತ್ತಿವೆ. ತೋಟಗಾರಿಕೆ ಬೆಳೆಗೆ ಬಳಸಿಕೊಳ್ಳಲು 15 ದಿನಗಳಿಗೊಮ್ಮೆ ಕೆರೆಯ ನೀರನ್ನು ಬಿಡಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿದರು.

ಜಿಲ್ಲಾಧಿಕಾರಿ, ರೈತರ ಅನುಕೂಲಕ್ಕಾಗಿ ಇರಕಸಂದ್ರ ಕಾಲೊನಿ ಕೆರೆ ನೀರನ್ನು ಕಾಲುವೆಗೆ ಬಿಡಲು ಕ್ರಮ ಕೈಗೊಳ್ಳಬೇಕು. ನೀರು ಬಿಡುವ ಬಗ್ಗೆ ಐಸಿಸಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಶಿವಪ್ಪ ಅವರಿಗೆ ತಿಳಿಸಿದರು.

ನೀರು ಹರಿಸುವ ಮುನ್ನ ಕಾಲುವೆಯಲ್ಲಿರುವ ಹೂಳು ಎತ್ತಬೇಕು. ಗಿಡ-ಗಂಟಿ ಸ್ವಚ್ಛಗೊಳಿಸಲು ಸಣ್ಣ ನೀರಾವರಿ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ತಹಶೀಲ್ದಾರ್ ಕೆ.ಮಂಜುನಾಥ್ ಅವರಿಗೆ ಸೂಚಿಸಿದರು.

ವಿದ್ಯುತ್ ಸಮಸ್ಯೆ ಬಗೆಹರಿಸಲು ಸೂಚನೆ: ಅಗ್ರಹಾರ ಜಲಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ನೀರು ಶುದ್ಧೀಕರಣ ಹಾಗೂ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಲಾಗ್ ಪುಸ್ತಕ ಪರಿಶೀಲಿಸಿದರು. ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಪಟ್ಟಣದ ನಾಗರಿಕರಿಗೆ 12 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ದೂರಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಭಾಗ್ಯಮ್ಮ ಅವರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪಟ್ಟಣದ ನಾಗರಿಕರ ಕುಡಿಯುವ ನೀರಿಗೆ ತೊಂದರೆ ಉಂಟಾದಲ್ಲಿ ನಿಮ್ಮನ್ನೇ ನೇರ ಹೊಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಲಶುದ್ಧೀಕರಣ ಘಟಕಕ್ಕೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್‌ಗೆ ಸೂಚಿಸಿದರು.

ಜಿಲ್ಲಾಧಿಕಾರಿ ಭೇಟಿ ನೀಡಿದ ಗ್ರಾಮಗಳಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಲಾಭ ಪಡೆಯುತ್ತಿರುವ ಬಗ್ಗೆ ಮಹಿಳಾ ಫಲಾನುಭವಿಗಳಿಂದ ಮಾಹಿತಿ ಪಡೆದರು. ಮೇವಿನ ಕೊರತೆಯಿಂದ ಗೋಶಾಲೆ ತೆರೆಯುವ, ಸ್ಮಶಾನ ಭೂಮಿ ಮಂಜೂರು, ದೇವಸ್ಥಾನ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT