ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ: ಕುಡಿಯಲು ನೀರಿಲ್ಲ, ಟ್ಯಾಂಕರ್‌ ಬರುತ್ತಿಲ್ಲ

Last Updated 3 ಮೇ 2020, 2:44 IST
ಅಕ್ಷರ ಗಾತ್ರ

ಕೋರ: ‘ಶಿವರಾತ್ರಿಯಿಂದಲೂ ಕುಡಿಯಲು ಸರಿಯಾಗಿ ನೀರು ಸಿಗುತ್ತಿಲ್ಲ. ದಿನಕ್ಕೊಮ್ಮೆ ಬಿಡುತ್ತಾರೆ. ಸರತಿಯಲ್ಲಿ ನಿಂತು ಎಂಟು ಬಿಂದಿಗೆ ನೀರು ಪಡೆಯಬೇಕು. ಆರಂಭದಲ್ಲಿ ಒಂದು ದಿನ ಟ್ಯಾಂಕರ್ ನೀರು ಬಿಟ್ಟಿದ್ದರು. ನಂತರ ನೀರಿನ ಟ್ಯಾಂಕರ್‌ ಊರಿಗೆ ಮುಖಮಾಡಿಲ್ಲ’ ಹೀಗೆ ಒಂದೇ ಉಸಿರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ತೆರೆದಿಡುತ್ತಾರೆ ಮಾವುಕೆರೆ ಗ್ರಾಮದ ಮಹಿಳೆಯರು.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಮಾವುಕೆರೆಯಲ್ಲಿ 200 ಮನೆಗಳಿದ್ದು, 800 ಜನಸಂಖ್ಯೆ ಇದೆ. ಇಡೀ ಗ್ರಾಮಕ್ಕೆ ಒಂದು ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಬೋರ್‌ವೆಲ್‌ನಲ್ಲಿಯೂ ನೀರಿನ ಪ್ರಮಾಣ ಕ್ಷೀಣಿಸಿದ್ದು, ನಿತ್ಯ ಎರಡು ಗಂಟೆ ಮಾತ್ರ ಬೋರ್‌ವೆಲ್ ನೀರು ಪೂರೈಸಲಾಗುತ್ತಿದೆ. ಗ್ರಾಮದ ಆರು ಕಡೆಗಳಲ್ಲಿ ನೀರು ಹಿಡಿಯಲು ವ್ಯವಸ್ಥೆ ಕಲ್ಪಿಸಿದ್ದು, ಸರತಿ ಸಾಲಿನಲ್ಲಿ ನಿಂತು ನಿಗದಿಪಡಿಸಿದಷ್ಟೇ ಪ್ರಮಾಣದ ನೀರು ಪಡೆಯಬೇಕಿದೆ.

ಬಿಂದಿಗೆ ಹಿಡಿದು ಅಲೆದಾಟ: ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಜನರಿಗೆ ಕೃಷಿ ಕೆಲಸದ ಜೊತೆಗೆ ನೀರು ಸೇದುವುದು ನಿತ್ಯದ ಕಾಯಕವಾಗಿದೆ. ಸೈಕಲ್, ದ್ವಿಚಕ್ರವಾಹನಗಳಲ್ಲಿ ಬಿಂದಿಗೆ ಹಿಡಿದು ನೀರು ಬಿಟ್ಟಿರುವ ರೈತರ ಜಮೀನು ಹುಡುಕುವ ದೃಶ್ಯ ನಿತ್ಯ ಕಂಡುಬರುತ್ತಿದೆ.

ಹುಸಿಯಾದ ಭರವಸೆ: ಪ್ರವಾಸ ಬಂದಿದ್ದಶಾಸಕ ಡಾ.ಜಿ.ಪರಮೇಶ್ವರ ಅವರನ್ನು ಮಾವುಕೆರೆ ಗೇಟ್ ಬಳಿ ಗ್ರಾಮಸ್ಥರು ಅಡ್ಡಗಟ್ಟಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದರು. ಕುಡಿಯುವ ನೀರಿನ ವಿಭಾಗದ ಎಂಜಿನಿಯರ್‌ಗೆ ಕರೆಮಾಡಿ ತಕ್ಷಣ ಕೊಳವೆ ಬಾವಿ ಕೊರೆಸುವಂತೆ ಸೂಚಿಸಿದ್ದರು. ಆದರೂ ಕೊಳವೆಬಾವಿ ಕೊರೆದಿಲ್ಲ.

ಚಿಕ್ಕತೊಟ್ಲುಕೆರೆ ಗ್ರಾ.ಪಂ. ವ್ಯಾಪ್ತಿಯ ತಿರುಮಲ ಪಾಳ್ಯ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಚಾಲ್ತಿಯಲ್ಲಿದ್ದ ಕೊಳವೆಬಾವಿಗೆ ಎರಡು ಪೈಪ್ ಅಳವಡಿಸಿದ ಬಳಿಕ ಸಮಸ್ಯೆ ನಿವಾರಣೆಯಾಗಿದೆ. ಓಬಳಾಪುರ ಗ್ರಾ.ಪಂ. ವ್ಯಾಪ್ತಿಯ ಸೀತಕಲ್ಲುಪಾಳ್ಯ ಗ್ರಾಮದಲ್ಲಿ ಎರಡು ಬೋರ್‌ವೆಲ್‌ ಕೊರೆದಿದ್ದು ನೀರು ಬಂದಿಲ್ಲ. ಈ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT