ಭಾನುವಾರ, ಜನವರಿ 24, 2021
28 °C
ಉಪ ಚುನಾವಣೆ ಗೆಲುವಿಗೆ ಅಸ್ತ್ರವಾಗಿದ್ದ ಕೆರೆ, ಪ್ರತಿಕ್ರಿಯಿಸದ ಅಧಿಕಾರಿಗಳು

ಮದಲೂರು ಕೆರೆಗೆ ನೀರು ಸ್ಥಗಿತ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ಭಾನುವಾರದಿಂದ ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭೆಯ ಉಪ ಚುನಾವಣೆಯಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಚುನಾವಣೆಯಲ್ಲಿ ಗೆಲುವು ಪಡೆದಿತ್ತು.

ನವಂಬರ್ 30 ರಂದು ಮದಲೂರು ಕೆರೆಗೆ ನೀರು ಹರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರು. ಜೊತೆಗೆ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ನೀರು ಹರಿಯುತ್ತಿರುವುದು ಹಾಗೂ ಮದಲೂರು ಕೆರೆಯಲ್ಲಿ ಸಂಗ್ರಹವಾಗಿರುವ ಚಿತ್ರಗಳನ್ನು ಹಾಕುವ ಮೂಲಕ ವಿಷಯವನ್ನು ಜೀವಂತವಾಗಿಟ್ಟುಕೊಂಡಿದ್ದರು.

ವಿಧಾನಸಭೆಯ ಉಪಚುನಾವಣೆಯ ಪ್ರಚಾರಕ್ಕೆ ಮದಲೂರು ಗ್ರಾಮಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು 6 ತಿಂಗಳಲ್ಲಿ ಮದಲೂರು ಕೆರೆಯನ್ನು ತುಂಬಿಸಿ ನಾನೇ ಬಂದು ಬಾಗಿನ ಅರ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಕೇವಲ 2 ತಿಂಗಳ ನೀರು ಕೆರೆಯಲ್ಲಿ ಸಂಗ್ರಹವಾಗಿರುವ ಸಮಯದಲ್ಲಿ ನೀರು ನಿಲ್ಲಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಅಜ್ಜೇನಹಳ್ಳಿ, ಭೂಪಸಂದ್ರ, ಮಾಯಸಂದ್ರ ಈ ಭಾಗ ಜನರು ನಾಲೆಗೆ ಪೈಪ್ ಹಾಕಿ ನೀರನ್ನು ಅವರ ಊರುಗಳ ಕೆರೆಗಳಿಗೆ ಹರಿಸಿಕೊಳ್ಳುತ್ತಿರುವುದರಿಂದ ಮದಲೂರು ಕೆರೆಗೆ ನೀರು ಹರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ವಿಷಯ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಲುಪಿದೆ ಎನ್ನಲಾಗುತ್ತಿದೆ.

ನೀರು ನಿಲ್ಲಿಸಿರುವ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು