ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ವರ್ಷ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ

17 ವರ್ಷ ಸೇವೆ ಸಲ್ಲಿಸಿ ವಡ್ಡಗೆರೆಗೆ ಮರಳಿದ ಸೈನಿಕ ವಿ.ಆರ್. ನರಸಿಂಹಮೂರ್ತಿ
Last Updated 5 ಏಪ್ರಿಲ್ 2021, 2:17 IST
ಅಕ್ಷರ ಗಾತ್ರ

ಕೊರಟಗೆರೆ: ಎಲ್ಲಿ ನೋಡಿದರಲ್ಲಿ ತಳಿರುತೋರಣ. ಹಾದಿಬೀದಿಗಳಲ್ಲಿ ಬಣ್ಣ ಬಣ್ಣದ ರಂಗೋಲಿ. ಊರ ತುಂಬಾ ಹಾಕಿದ್ದ ದೊಡ್ಡ ಫ್ಕೆಕ್ಸ್‌, ಬ್ಯಾನರ್‌ಗಳು. ಇದು ಯಾವುದೋ ರಾಜಕೀಯ ಕಾರ್ಯಕ್ರಮದ ಆಯೋಜನೆಗಾಗಿ ಹಾಕಿದ್ದಲ್ಲ. ಆ ಊರಿಗೆ ಹಿಂದಿರುಗಿದ ಸೈನಿಕನ ಸ್ವಾಗತಕ್ಕಾಗಿ ಅದ್ದೂರಿ ವ್ಯವಸ್ಥೆ ಮಾಡಲಾಗಿತ್ತು.

ದೇಶದ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ಹುಟ್ಟೂರಿಗೆ ವಾಪಸಾದಾಗ ಸೈನಿಕನಿಗೆ ಇಡೀ ಊರೇ ಹೂಮಳೆಗೆರೆದು ಸ್ವಾಗತ ಕೋರಿತು. ಅಂದಹಾಗೆ ಈ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ತಾಲ್ಲೂಕಿನ ಕಸಬಾ ಹೋಬಳಿಯ ವಡ್ಡಗೆರೆ
ಗ್ರಾಮದಲ್ಲಿ.

ಗ್ರಾಮದ ಕೂಗಳತೆ ದೂರದಲ್ಲಿರುವ ವಡ್ಡಗೆರೆ ತಾಂಡದ ರಾಮಾನಾಯ್ಕ ಮತ್ತು ಗಂಗಮ್ಮ ದಂಪತಿಯ ದ್ವಿತೀಯ ಪುತ್ರ ವಿ.ಆರ್. ನರಸಿಂಹಮೂರ್ತಿ 17 ವರ್ಷಗಳ ಹಿಂದೆ ಸೈನಿಕನಾಗಿ ಸೇನೆಗೆ ಸೇರಿದ್ದರು. ಮಾರ್ಚ್ 31ಕ್ಕೆ ಸೇವೆಯಿಂದ ನಿವೃತ್ತಿ ಪಡೆದು ಊರಿಗೆ ವಾಪಸ್‌ ಆದರು. ಈ ಹಿನ್ನೆಲೆಯಲ್ಲಿ ಸೈನಿಕನ ಸ್ವಾಗತಕ್ಕೆ ಜನರು ಊರಲ್ಲಿ ಹಬ್ಬದ ವಾತಾವರಣ
ಸೃಷ್ಟಿಸಿದ್ದರು.

ಶನಿವಾರ ಊರಿಗೆ ಬಂದ ಸೈನಿಕನಿಗೆ ಹಾರ, ತುರಾಯಿ ಹಾಕಿದರು. ಬಣ್ಣದ ಹೊಕುಳಿ ಚೆಲ್ಲಿ ಸಂಭ್ರಮಿಸಿದರು. ಊರಿನ ದ್ವಾರದಿಂದ ಸೈನಿಕನನ್ನು ಬರಮಾಡಿಕೊಂಡು ಅಲ್ಲಿಂದ ಹೆಜ್ಜೆ, ಹೆಜ್ಜೆಗೂ ಹೂಮಳೆ ಸುರಿಸಿದರು.

ನರಸಿಂಹಮೂರ್ತಿ ಅವರ ಬಾಲ್ಯದ ಗೆಳೆಯರು, ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಶಾಲಾ ಮಕ್ಕಳು ಡೋಲಿನ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಗ್ರಾಮದ ಮಹಿಳೆಯರು ಆರತಿ ಎತ್ತಿ ದೃಷ್ಟಿ ತೆಗೆದರು. ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಪಟ್ಟರು. ಇಡೀ ಊರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸಂಜೆ ಊರಿನ ಮಹಿಳೆಯರು, ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

2004ರಲ್ಲಿ ಸೈನಿಕ ಸೇವೆಗೆ ಸೇರಿದ ನರಸಿಂಹಮೂರ್ತಿ ಅವರು ಮೊದಲು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ತರಬೇತಿ ಪಡೆದರು. ಒಂದು ವರ್ಷದ ತರಬೇತಿ ನಂತರ ಹರಿಯಾಣದ ಹಂಬಾ ಚಾವಣಿ, ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾ, ಕೋಲ್ಕತ್ತ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌ನ ಭಟಿಂಡಾ ಚಾವಣಿ ಗಡಿ ಭಾಗದಲ್ಲಿ ಸಿಪಾಯಿ, ಆ ನಂತರ ನಾಯಕ್ ಆಗಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT