ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೋತ್ತರ ವಿಶ್ಲೇಷಣೆ; ಸಚಿವರ ಕ್ಷೇತ್ರದಲ್ಲೂ ಹಿನ್ನಡೆ ಏಕೆ?

ಕಾಂಗ್ರೆಸ್ ಸೋಲಿಗೆ ಆತ್ಮಾವಲೋಕನ ಶುರು
Published 8 ಜೂನ್ 2024, 7:43 IST
Last Updated 8 ಜೂನ್ 2024, 7:43 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲೂ ಮತ ಪ್ರಮಾಣ ಕುಸಿದಿರುವ ವಿಚಾರ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದೆ. ‘ಹೀಗೇಕೆ?’ ಎಂಬ ವಿಶ್ಲೇಷಣೆಗಳು ನಡೆಯುತ್ತಿದ್ದು, ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಲಾಗುತ್ತಿದೆ.

ಹಲವು ಚುನಾವಣೆಗಳನ್ನು ಎದುರಿಸಿ, ಸಾಕಷ್ಟು ಪಾಠಗಳನ್ನು ಕಲಿತಿರುವ ಅನುಭವಿ ಹಿರಿಯ ನಾಯಕರ ಕ್ಷೇತ್ರಗಳಲ್ಲೂ ಹಿನ್ನಡೆ ಅನುಭವಿಸಿದ್ದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಮಾರ್ಗದರ್ಶನ ಮಾಡಿ, ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಗೆಲುವಿಗೆ ಶ್ರಮಿಸಬೇಕಾದವರು, ಮತಬುಟ್ಟಿ ತುಂಬಿಸಬೇಕಾದವರು ಎಡವಿದ್ದೆಲ್ಲಿ ಎಂಬ ಚಿಂತನ, ಮಂಥನ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮುದ್ದಹನುಮೇಗೌಡ 67,905, ವಿ.ಸೋಮಣ್ಣ 93,446 ಮತಗಳನ್ನು ಪಡೆದು, ಕಾಂಗ್ರೆಸ್‌ಗಿಂತ 25,541 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ 79,009 ಮತಗಳನ್ನು ಪಡೆದು ಜಯಗಳಿಸಿದ್ದರು. ಸಚಿವರು ಪಡೆದ ಮತಕ್ಕಿಂತಲೂ ಲೋಕಸಭೆಯಲ್ಲಿ 11,104 ಮತಗಳು ಕಡಿಮೆ ಬಂದಿವೆ. ತಮಗೆ ಬಂದಿದ್ದ ಮತ ಪ್ರಮಾಣವನ್ನೂ ಪಕ್ಷದ ಅಭ್ಯರ್ಥಿಗೆ ಕೊಡಿಸಲು ಸಾಧ್ಯವಾಗಿಲ್ಲ.

ಕೊರಟಗೆರೆ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 64,752, ಬಿಜೆಪಿಗೆ 24,091 (ಒಟ್ಟು 88,843) ಮತಗಳು ಬಂದಿದ್ದವು. ವಿಧಾನಸಭೆಯಲ್ಲಿ ಎರಡೂ ಪಕ್ಷಗಳು ಪಡೆದುಕೊಂಡಿದ್ದ ಮತಗಳಿಗಿಂತ ಹೆಚ್ಚುವರಿಯಾಗಿ 4,603 ಮತಗಳು ಬಿಜೆಪಿಗೆ ವರ್ಗಾವಣೆಯಾಗಿವೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿನಿಧಿಸುವ ಮಧುಗಿರಿ ಕ್ಷೇತ್ರದಲ್ಲೂ ಇಂತಹುದೇ ಪರಿಸ್ಥಿತಿ ಕಂಡು ಬಂದಿದೆ. ಮುದ್ದಹನುಮೇಗೌಡ 66,692, ಸೋಮಣ್ಣ 79,494 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ 12,902 ಮತಗಳ ಮುನ್ನಡೆ ಕಾಯ್ದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ರಾಜಣ್ಣ 91,166 ಮತಗಳನ್ನು ಪಡೆದು ಜಯಗಳಿಸಿದ್ದು, ಆ ಪ್ರಮಾಣದ ಮತಗಳು ಈಗ ಬಂದಿಲ್ಲ. ವರ್ಷದ ಹಿಂದೆ ನಡೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ಗೆ 24,474 ಕಡಿಮೆ ಮತಗಳು ಬಂದಂತಾಗಿದೆ.

ಮಧುಗಿರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 55,643, ಬಿಜೆಪಿಗೆ 15,255 (ಒಟ್ಟು 71,255) ಮತಗಳು ಬಂದಿದ್ದವು. ವಿಧಾನಸಭೆಯಲ್ಲಿ ಎರಡೂ ಪಕ್ಷಗಳು ಪಡೆದುಕೊಂಡಿದ್ದ ಮತಗಳಿಗಿಂತ ಹೆಚ್ಚುವರಿಯಾಗಿ 8,239 ಮತಗಳು ಬಿಜೆಪಿಗೆ ಬಂದಿವೆ.

ಕಾರಣ ಏನು?: ಸಚಿವರ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಕಾರಣಗಳೇನು ಎಂಬ ಚರ್ಚೆ ಕಾಂಗ್ರೆಸ್ ಹಾಗೂ ರಾಜಕೀಯ ವಲಯದಲ್ಲಿ ನಡೆದಿದೆ.

ಒಂದು ವರ್ಷದಲ್ಲೇ ಆಡಳಿತ ವಿರೋಧಿ ಅಲೆ ಎದುರಾಗಿದೆಯೆ? ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಸಮರ್ಥವಾಗಿ ಎದುರಿಸಲಿಲ್ಲವೆ? ಲೋಕಸಭೆ ಎಂಬ ಕಾರಣಕ್ಕೆ ಉದಾಸೀನ ತೋರಿದರೆ? ಸೋಲು– ಗೆಲುವು ಯಾವುದೇ ಫಲಿತಾಂಶ ಬಂದರೂ ರಾಜ್ಯ ಸರ್ಕಾರ, ಸಚಿವ ಸ್ಥಾನದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಮನೋಭಾವನೆಯೇ? ಪ್ರಚಾರದ ಸಮಯದಲ್ಲಿ ಮಾಡಿದ ತಪ್ಪುಗಳೇನು? ಗ್ಯಾರಂಟಿ ನಂಬಿದ್ದು ಕೈ ಕೊಟ್ಟಿದೆಯೇ? ಒಳ ಒಪ್ಪಂದ ನಡೆದಿದೆಯೇ? ಮೊದಲಾದ ಚರ್ಚೆಗಳನ್ನು ಫಲಿತಾಂಶ ಹುಟ್ಟು ಹಾಕಿದೆ.

ಕೊರಟಗೆರೆ, ಮಧುಗಿರಿಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಪಕ್ಷಕ್ಕೆ ಶಕ್ತಿ ತುಂಬಿ ವೋಟು ತಂದುಕೊಡುವ ನಾಯಕರೂ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದರು. ಅಂತಹ ದಹನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ಮತದಾರರು ಆಸರೆಯಾಗಿದ್ದು ಯಾವ ಕಾರಣಕ್ಕೆ, ಯಾರ ಮೇಲಿನ ಸಿಟ್ಟಿಗೆ ಎಂಬ ವಿಚಾರಗಳು ಮುನ್ನೆಲೆಗೆ ಬಂದಿವೆ.

ಶಾಸಕರ ಕ್ಷೇತ್ರದಲ್ಲೂ ಹಿನ್ನಡೆ

ಕಾಂಗ್ರೆಸ್ ಶಾಸಕರನ್ನು ಹೊಂದಿರುವ ತಿಪಟೂರು ಗುಬ್ಬಿ ಕ್ಷೇತ್ರದಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಗುಬ್ಬಿಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚುವರಿಯಾಗಿ 26490 ಮತಗಳನ್ನು ಪಡೆದುಕೊಂಡಿದೆ. ತಿಪಟೂರಿನಲ್ಲೂ ಬಿಜೆಪಿಗೆ ಹೆಚ್ಚುವರಿಯಾಗಿ 22700 ಮತಗಳು ಬಂದಿವೆ. ವಿಧಾನಸಭೆ ಚುನಾವಣೆಯಲ್ಲಿ ಗುಬ್ಬಿಯಲ್ಲಿ ಎಸ್.ಆರ್.ಶ್ರೀನಿವಾಸ್ 60520 ತಿಪಟೂರಿನಲ್ಲಿ ಕೆ.ಷಡಾಕ್ಷರಿ 71999 ಮತಗಳನ್ನು ಪಡೆದು ಆಯ್ಕೆಯಾಗಿದ್ದರು.

ಷಡಾಕ್ಷರಿ ಹಿಂದೆ ತಾವು ಪಡೆದುಕೊಂಡಿದ್ದಷ್ಟು ಮತಗಳನ್ನೂ ಕೊಡಿಸಲು ಸಾಧ್ಯವಾಗಿಲ್ಲ. ಗುಬ್ಬಿಯಲ್ಲಿ ಶ್ರೀನಿವಾಸ್ ಅಬ್ಬರ ಕಂಡು ಬಂದರೂ ಮತದಾರರನ್ನು ಪ್ರಭಾವಿಸುವ ಮೊನಚು ಕಳೆದುಕೊಂಡಿದ್ದಾರೆ. ಸತತವಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ 26 ಸಾವಿರದಷ್ಟು ಮತಗಳು ಬಿಜೆಪಿ ಕಡೆಗೆ ಹೋಗಿರುವುದನ್ನು ನೋಡಿದರೆ ಕ್ಷೇತ್ರದ ಮೇಲೆ ಅವರ ಹಿಡಿತ ಎಷ್ಟಿದೆ ಎಂಬುದು ತಿಳಿಯುತ್ತದೆ. ಷಡಕ್ಷರಿ ಅವರಂತೂ ಪಕ್ಷದ ಅಭ್ಯರ್ಥಿ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದೇ ಕಾಣಿಸಲಿಲ್ಲ. ವರಿಷ್ಠರು ಬಂದಾಗ ಕಾಣಿಸಿಕೊಂಡು ಮತ್ತೆ ಮನೆ ಸೇರಿದರು. ತಮ್ಮ ಅಭ್ಯರ್ಥಿಯನ್ನೂ ಮನೆಗೆ ಕಳುಹಿಸಿದರು.

ನೇರ ಸ್ಪರ್ಧೆ: ಫಲಿತಾಂಶದ ದಿಕ್ಕು ಬದಲು

ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ನೇರ ಸ್ಪರ್ಧೆಯಲ್ಲಿ ಗೆಲುವು ದಕ್ಕಿಸಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟಕರವಾಗಿದೆ. ಹಿಂದಿನ ಚುನಾವಣೆಗಳಂತೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಫಲಿತಾಂಶದ ದಿಕ್ಕು ಬದಲಾಗುತಿತ್ತು ಎಂಬ ವಿಶ್ಲೇಷಣೆಗಳು ನಡೆದಿವೆ. ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಇದ್ದು ಮೂರು ಪಕ್ಷಗಳಿಗೆ ವೋಟು ಹಂಚಿಕೆಯಾಗಿದ್ದರೆ ಫಲಿತಾಂಶ ಮತ್ತೊಂದು ಮಗ್ಗುಲಿಗೆ ಒರಳುತಿತ್ತು.

ಈ ಬಾರಿ ಮೈತ್ರಿಯಿಂದಾಗಿ ಜೆಡಿಎಸ್– ಬಿಜೆಪಿ ಮತಗಳು ಒಗ್ಗೂಡಿದ್ದು ಕಾಂಗ್ರೆಸ್ ನಾಯಕರು ಸಮರ್ಥವಾಗಿ ಚುನಾವಣೆಯನ್ನು ಎದುರಿಸದಿರುವುದು ಸೋಲಿಗೆ ಕಾರಣ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬರುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡು ಎಚ್.ಡಿ.ದೇವೇಗೌಡರನ್ನು ಕಣಕ್ಕಿಳಿಸಿದರೂ ಮೈತ್ರಿ ಫಲ ನೀಡಲಿಲ್ಲ. ಈ ಬಾರಿಯೂ ‘ಮೈತ್ರಿ’ಯನ್ನು ಎದುರಿಸಿದ್ದರೆ ಅವಕಾಶ ಕೈ ತಪ್ಪುತ್ತಿರಲಿಲ್ಲ. ಅದಕ್ಕೆ ಬೇಕಾದ ಸಿದ್ಧತೆ ಇಲ್ಲದೆ ಚುನಾವಣೆ ಎದುರಿಸಿ ಸೋಲು ಒಪ್ಪಿಕೊಳ್ಳಬೇಕಾಯಿತು ಎಂದು ಪಕ್ಷದ ಮುಖಂಡರೊಬ್ಬರು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT