1,050 ಎಕರೆ ಭೂಮಿ ಸ್ವಾಧೀನಕ್ಕೆ ಪ್ರಸ್ತಾವ

ಕಾಪು (ಪಡುಬಿದ್ರಿ): ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಬಳ್ಕುಂಜೆಯಲ್ಲಿ 800 ಎಕರೆ ಮತ್ತು ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನಲ್ಲಿ 250 ಎಕರೆ ಸೇರಿದಂತೆ ಒಟ್ಟು 1,050 ಎಕರೆ ಜಮೀನು ಸ್ವಾಧೀನಕ್ಕೆ ಪ್ರಸ್ತಾವ ಬಂದಿದೆ. ಶೀಘ್ರ ಸರ್ವೆ ನಡೆಸಲು ಕ್ರಮವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸೋಮವಾರ ಉಡುಪಿ ಜಿಲ್ಲೆಯ ಬೆಳಪು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಕೆಐಎಡಿಬಿ ಮೂಲಕ ಕೈಗಾರಿಕೆ ಮತ್ತು ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕೈಗಾರಿಕೋದ್ಯಮಿಗಳಿಗೆ ಕೈಗಾರಿಕೆ ನಿರ್ಮಿಸಲು ಅಗತ್ಯ ಇರುವ ಪರವಾನಗಿಯನ್ನು ಸುಲಲಿತವಾಗಿ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಮತ್ತಷ್ಟು ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ, ವಿದ್ಯುತ್ ಉಪ ಕೇಂದ್ರ ಮತ್ತು ಹೆಚ್ಚುವರಿ ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಕೈಗಾರಿಕಾ ಉದ್ಯಮಿಗಳು ಸಚಿವರಲ್ಲಿ ಮನವಿ ಮಾಡಿದರು. ಕೈಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ಬೆಳಪು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಸಚಿವರು ಹೇಳಿದರು.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕೆಐಎಡಿಬಿ ಅಧಿಕಾರಿಗಳಾದ ಗಣಪತಿ, ಜನಾರ್ದನ ನಾಯಕ್, ಜಗದೀಶ್, ನಾಗರಾಜ್, ಸಣ್ಣ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾಜ್ ಕೊಡಂಚ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಸುರೇಂದ್ರ ಪಣಿಯೂರು ಇದ್ದರು.
‘ಕರಾವಳಿ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್’
ಪಡುಬಿದ್ರಿ: ಕರಾವಳಿ ಮೂರು ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಕುರಿತಂತೆ ರಚಿಸಿರುವ ಕಾರ್ಯಪಡೆಯಿಂದ ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದ್ದು, ಅದನ್ನು ಆಧರಿಸಿ ಈ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಚಿವ ಜಗದೀಶ ಶೆಟ್ಟಿರ್ ಹೇಳಿದರು.
ನಂದಿಕೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಕೈಗಾರಿಕೋದ್ಯಮಿಗಳ ಜತೆ ಅವರು ಸಂವಾದ ನಡೆಸಿದರು. ಬೆಂಗಳೂರು ಬಿಟ್ಟು ಹೊರ ಜಿಲ್ಲೆಗಳಲ್ಲಿ ಕೈಗಾರಿಕೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಎರಡು ವರ್ಷಗಳಲ್ಲಿ ಮಂಗಳೂರು, ಯಾದಗಿರಿ, ಕೊಪ್ಪಳ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಹೊಸದಾಗಿ ಬೃಹತ್ ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ ಎಂದರು.
ತೆರಿಗೆ ಬಗ್ಗೆ ಸಭೆಯಲ್ಲಿ ತೀರ್ಮಾನ: ಕೈಗಾರಿಕಾ ಘಟಕಗಳಿಂದ ಗ್ರಾಮ ಪಂಚಾಯಿತಿಗಳಿಗೆ ಬಾಕಿಯಿರುವ ತೆರಿಗೆ ಪಾವತಿ ಬಗ್ಗೆ ಶೀಘ್ರದಲ್ಲಿ ಕೈಗಾರಿಕಾ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಕೈಗಾರಿಕೆಗಳಿಗೆ ನೀಡಿರುವ ಭೂಮಿಗಳ ದರದಲ್ಲಿನ ಹೆಚ್ಚಳ ಕುರಿತಂತೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಸ್ಥಳೀಯರಿಗೆ ಉದ್ಯೋಗ: ಸ್ಥಳೀಯ ವಾಗಿ ಸ್ಥಾಪನೆಗೊಳ್ಳುವ ಬೃಹತ್ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ. ಉದ್ದಿಮೆಗೆ ಪರವಾನಗಿ ನೀಡುವಾಗ ಸಂಬಂಧಪಟ್ಟ ಉದ್ದಿಮೆದಾರರಿಗೆ ಉದ್ಯೋಗದಲ್ಲಿ 1 ಮತ್ತು 2ನೇ ದರ್ಜೆಯ ಶೇ 80ರಷ್ಟು, 3 ಮತ್ತು 4ನೇ ದರ್ಜೆಯಲ್ಲಿ ಶೇ 100ರಷ್ಟು ಸ್ಥಳೀಯರಿಗೆ ನೀಡಲು ಒಪ್ಪಂದ ದಲ್ಲೇ ಸೂಚನೆ ನೀಡಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕೈಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪಡುಬಿದ್ರಿ ವ್ಯಾಪ್ತಿಯ ಸುಜ್ಲಾನ್ ಹಾಗೂ ಎಲ್ಲೂರು ವ್ಯಾಪ್ತಿಯ ಯುಪಿಸಿಎಲ್ ಯೋಜನೆಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕೆಗಳ ತೆರಿಗೆ ಪಾವತಿ ಕುರಿತಂತೆ ಶೀಘ್ರ ಸಮಗ್ರ ವರದಿ ಸಲ್ಲಿಸುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ವರದಿ ಆಧರಿಸಿ ಅವರಿಗೆ ಎಚ್ಚರಿಕೆ ನೀಡುವ ಇಲ್ಲವೇ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಮನವಿ: ಯುಪಿಸಿಎಲ್ ಕಂಪನಿಯು ಎಲ್ಲೂರು ಗ್ರಾಮ ಪಂಚಾಯಿತಿಗೆ ನೀಡಬೇಕಾಗಿದ್ದ ಸಿಎಸ್‌ಆರ್ ಅನುದಾನ ತಡೆ ಹಿಡಿದಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಕುಮಾರ್ ಮನವಿ ಸಲ್ಲಿಸಿದರು.
ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳು ಪಂಚಾಯಿತಿಗೆ ತೆರಿಗೆ ಪಾವತಿಸದೆ ಬಾಕಿ ಇಟ್ಟಿದೆ ಎಂದು ಫಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಪ್ರಭು ಹಾಗೂ ಸದಸ್ಯ ರಾಯೇಶ್ ಪೈ ಮನವಿ ದೂರಿದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಅವರು, ಸುಜ್ಲಾನ್ ಕಂಪನಿಯಿಂದ ಎಸ್‌ಎಲ್‌ಆರ್‌ಎಂ ಘಟಕಕ್ಕೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಕೆಐಎಡಿಬಿ ಅಧಿಕಾರಿಗಳಾದ ಗಣಪತಿ, ಜನಾರ್ದನ ನಾಯಕ್, ಸಣ್ಣ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾಜ್ ಕೊಡಂಚ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.