ಭಾನುವಾರ, ಆಗಸ್ಟ್ 25, 2019
21 °C
41.19 ಲಕ್ಷ ಹಾನಿ ಅಂದಾಜು

ಇಳಿದ ಮಳೆಯ ಅಬ್ಬರ: 111 ಮನೆಗಳಿಗೆ ಭಾಗಶಃ ಹಾನಿ

Published:
Updated:
Prajavani

ಉಡುಪಿ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಮಳೆ ಗುರುವಾರ ಕ್ಷೀಣವಾಗಿತ್ತು. ಕೆಲಹೊತ್ತು ಸುರಿದು ಕೆಲಹೊತ್ತು ಬಿಡುವ ಕೊಡುತ್ತಿತ್ತು. ಗಾಳಿಯ ಆರ್ಭಟವೂ ತಗ್ಗಿತ್ತು.

ಮನೆಗಳ ದುರಸ್ಥಿ: ಎರಡು ದಿನ ಗುಡುಗು ಸಿಡಿಲು ಸಹಿತ ಸುರಿದ ಬಿರುಗಾಳಿ ಮಳೆಗೆ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಳೆಯ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ಮನೆಗಳನ್ನು ದುರಸ್ತಿ ಮಾಡುತ್ತಿರುವ ದೃಶ್ಯ ಕಂಡುಬಂತು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 84.4 ಮಿ.ಮೀ ಸರಾಸರಿ ಮಳೆಯಾಗಿದೆ. ಉಡುಪಿಯಲ್ಲಿ 87.4, ಕುಂದಾಪುರದಲ್ಲಿ 70, ಕಾರ್ಕಳದಲ್ಲಿ 102.6 ಮಿ.ಮೀ ಮಳೆಯಾಗಿದೆ.

ಉಡುಪಿ ತಾಲ್ಲೂಕಿನ ಕುದಿ ಗ್ರಾಮದಲ್ಲಿ ಅಡಿಕೆ ಮರಗಳು ಹಾಗೂ ಕೃಷಿಭೂಮಿಗೆ ಹಾನಿಯಾಗಿದೆ. ಹಿರೇಬೆಟ್ಟು, ಬಡಗಬೆಟ್ಟು ಗ್ರಾಮಗಳಲ್ಲಿ ಅಡಿಕೆ ತೋಟ, ಭತ್ತದ ಕೃಷಿ ನಾಶವಾಗಿದೆ.

ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮದಲ್ಲಿ 95 ಅಡಿಕೆ ಮರಗಳು ಬಿದ್ದಿವೆ. ನಲ್ಲೂರು ಗ್ರಾಮದಲ್ಲಿ 100 ಅಡಿಕೆ ಮರ ಹಾಗೂ 20 ರಬ್ಬರ್‌ ಮರಗಳಿಗೆ, ಈದು ಗ್ರಾಮದಲ್ಲಿ 217 ಅಡಿಕೆ ಮರಗಳಿಗೆ ಹಾನಿಯಾಗಿದೆ. ಒಟ್ಟು ₹ 5.46 ಲಕ್ಷ ಮೌಲ್ಯದ ಕೃಷಿ ಹಾನಿ ಸಂಭವಿಸಿದೆ.

111 ಮನೆಗಳಿಗೆ ಹಾನಿ: ಉಡುಪಿ ತಾಲ್ಲೂಕಿನ ಶಿವಳ್ಳಿ, ಕಡೇಕಾರು, ಬಡಗಬೆಟ್ಟು, ಮೂಡುತೋನ್ಸೆ, ಮೂಡನಿಂಡಬೂರು, ಹೆರ್ಗ, ಅಲೆವೂರು, ಅಂಬಲಪಾಡಿ, ಕಿದಿಯೂರು, ತೆಂಕನಿಡಿಯೂರು, ಅಂಜಾರು, ಕುದಿ, ಹಿರೆಬೆಟ್ಟು, ಬೆಳ್ಳಂಪಳ್ಳಿಯಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾರ್ಕಳ ತಾಲ್ಲೂಕಿನ ಬೋಳ, ಹಿರ್ಗಾನ, ಕಣಜಾರು, ಬೆಳ್ಮಣ್ಣು, ಮರ್ಣೆ, ಮಂಡಕೂರು ಬೈಂದೂರು ತಾಲ್ಲೂಕಿನ ಮರವಂತೆ, ಮುದೂರು, ಗೋಳಿಹೊಳೆ, ಯಳಜಿತ್, ಬಡಾಕೆರೆ, ಪಡುಕೆರೆ, ಕೊಲ್ಲೂರು ಗ್ರಾಮದಲ್ಲಿ ಮಳೆಗೆ ಮನೆ ಬಿದ್ದಿವೆ.

ಕಾಪುವಿನ ಕುತ್ಯಾರು, ಮಟ್ಟು, ಬೆಳಪು, ಹೆಜಮಾಡಿ, ಉಳಿಯಾರಗೋಳಿ, ಶಿರ್ವ, ಬೆಳ್ವೆ, ಮಲ್ಲಾರು, ಕುರ್ಕಾಲು, ಬ್ರಹ್ಮಾವರ ತಾಲ್ಲೂಕಿನ ಮೂಡಹಡು, ಪಾರಂಪಳ್ಳಿ, ಕೋಟತಟ್ಟು, ಚೇರ್ಕಾಡಿ, ಉಪ್ಪೂರು, ಪೆಜಮಂಗೂರು, ನೀಲಾವರ, ಹಲುವಳ್ಳಿ, ಕಾವಾಡಿಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು, ಕೋಣಿ, ಕೋಟೇಶ್ವರ, ವಡೇರಹೋಬಳಿ, ಗುಲ್ವಾಡಿ, ಹೊಂಬಾಡಿ, ಮೊಳಹಳ್ಳಿ ಗ್ರಾಮಗಳಲ್ಲೂ ಮನೆಗೆ ಹಾನಿ ಸಂಭವಿಸಿದೆ. 

Post Comments (+)